Site icon Vistara News

Advisory for Students: ಕಿರ್ಗಿಸ್ತಾನದಲ್ಲಿನ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಭಾರತ, ಪಾಕಿಸ್ತಾನ; ಕಾರಣವೇನು?

Advisory for Students

Advisory for Students

ನವದೆಹಲಿ: ಮಧ್ಯ ಏಷ್ಯಾದ ಕಿರ್ಗಿಸ್ತಾನ (Kyrgyzstan)ದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಿರುದ್ಧ ದೊಡ್ಡ ಪ್ರಮಾಣದ ಗುಂಪು ಹಿಂಸಾಚಾರ ವರದಿಯಾಗುತ್ತಿರುವುದರಿಂದ ಅಲ್ಲಿರುವ ತನ್ನ ಪ್ರಜೆಗಳಿಗೆ ಮನೆಯೊಳಗೆ ಇರುವಂತೆ ಭಾರತ ಸಲಹೆ ನೀಡಿದೆ (Advisory for Students).

ʼʼನಮ್ಮ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಆದರೂ ವಿದ್ಯಾರ್ಥಿಗಳಿಗೆ ಮನೆಯೊಗಳೇ ಇರುವಂತೆ ಸಲಹೆ ನೀಡಿದ್ದೇವೆ. ಯಾವುದೇ ಸಮಸ್ಯೆ ಬಂದರೆ ತಕ್ಷಣ ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದೇವೆʼʼ ಎಂದು ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೆಲ್ಪ್‌ಲೈನ್‌ ಆರಂಭ

ಜತೆಗೆ ರಾಯಭಾರ ಕಚೇರಿ ಹೆಲ್ಪ್‌ಲೈನ್‌ ಕೂಡ ಆರಂಭಿಸಿದೆ. ʼʼಸಮಸ್ಯೆ ಕಂಡು ಬಂದರೆ ನಮ್ಮ ಹೆಲ್ಪ್‌ಲೈನ್‌ ನಂಬರ್‌ 0555710041ಕ್ಕೆ ಕರೆ ಮಾಡಿ. ಇದು 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆʼʼ ಎಂದಿರುವ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.

ಏನಿದು ಕಿರ್ಗಿಸ್ತಾನದಲ್ಲಿನ ಸಮಸ್ಯೆ?

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೇ 13ರಂದು ಕಿರ್ಗಿಸ್ತಾನದ ಬಿಷ್ಕೆಕ್‌ನ ಹಾಸ್ಟೆಲ್‌ನಲ್ಲಿ ಸ್ಥಳೀಯರು ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ನಡುವೆ ಆರಂಭವಾದ ಘರ್ಷಣೆಯ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಬಿಷ್ಕೆಕ್‌ನಲ್ಲಿ ಗುಂಪುಗೂಡಿದ ಪ್ರತಿಭಟನಾಕಾರರು ರಸ್ತೆ ಸಂಚಾರವನ್ನು ತಡೆದಿದ್ದರು ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಈಗಾಗಲೇ ಹಲವರನ್ನು ಬಂಧಿಸಿವೆ. ಕಿರ್ಗಿಸ್ತಾನ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಪ್ರತಿ ವರ್ಷ ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲಿಯೂ ಇಲ್ಲಿನ ವೈದ್ಯಕೀಯ ಶಿಕ್ಷಣ ಬಲು ಜನಪ್ರಿಯ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸ್ಥಳೀಯರು ಮತ್ತು ವಿದೇಶಿ ವಿದ್ಯಾರ್ಥಿಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಿರುತ್ತದೆ.

2023ರ ಏಪ್ರಿಲ್ ವೇಳೆಗೆ ಕಿರ್ಗಿಸ್ತಾನದ ವಿವಿಧ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಸುಮಾರು 9,500 ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದರು ಎಂದು ಅಂಕಿ-ಅಂಶ ತಿಳಿಸಿದೆ.

ಪಾಕಿಸ್ತಾನದಿಂದಲೂ ಮಾರ್ಗಸೂಚಿ ಬಿಡುಗಡೆ

ಭಾರತ ಜತೆಗೆ ಇದೀಗ ಪಾಕಿಸ್ತಾನ ಕೂಡ ತನ್ನ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವರದಿಯಾಗುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಬಿಷ್ಕೆಕ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಸಲಹೆ ನೀಡಿದೆ. ಕಿರ್ಗಿಸ್ತಾನ್ ಮತ್ತು ಈಜಿಪ್ಟ್ ವಿದ್ಯಾರ್ಥಿಗಳ ನಡುವಿನ ಸಂಘರ್ಷದ ವಿಡಿಯೊ ಮೇ 13ರಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ವಿದೇಶಿ ವಿದ್ಯಾರ್ಥಿಗಳ ವಿರುದ್ಧದ ಹಿಂಸಾಚಾರವನ್ನು ಉಲ್ಲೇಖಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ʼʼವೈದ್ಯಕೀಯ ವಿಶ್ವ ವಿದ್ಯಾನಿಯಲಗಳ ಹಾಸ್ಟೆಲ್‌, ಖಾಸಗಿ ಪಿಜಿ ಸೇರಿ ವಿದೇಶಿ ವಿದ್ಯಾರ್ಥಿಗಳಿರುವ ಕಟ್ಟಡಗಳೇ ಪ್ರತಿಭಟನಾಕಾರರ ಗುರಿ. ಈಗಾಗಲೇ ಹಿಂಸಾಚಾರದಲ್ಲಿ ಕೆಲವು ಪಾಕಿಸ್ತಾನದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲʼʼ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

ಪರಿಸ್ಥಿತಿ ತಿಳಿಯಾಗುವವರೆಗೆ ಮನೆಯೊಳಗೆ ಇರಿ ಎಂದು ಸಲಹೆ ನೀಡಿರುವ ಪಾಕಿಸ್ತಾನದ ರಾಯಭಾರ ಕಚೇರಿ ತನ್ನ ದೇಶದ ಸುಮಾರು 250 ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಸ್ಥರನ್ನು ಸಂಪರ್ಕಿಸಿದೆ. ಸ್ಥಳೀಯರು ಎಲ್ಲ ವಿದೇಶಿಗರನ್ನು ಗುರಿಯಾಗಿಸಿದ್ದಾರೆ. ಪಾಕಿಸ್ತಾನದವರು ಮಾತ್ರ ಇವರ ಟಾರ್ಗೆಟ್‌ ಅಲ್ಲ. ಯಾವುದೇ ಕಾರಣಕ್ಕೂ ಭಯ ಪಡಬೇಡಿ ಎಂದು ಹೇಳಿದೆ.

Exit mobile version