ಮಧ್ಯ ಯುರೋಪ್‌ನ ದೇಶ ಟರ್ಕಿ ಹಾಗೂ ಪಕ್ಕದ ಸಿರಿಯಾದಲ್ಲಿ (Turkey Earthquake) ಊಹಿಸಲಾಗದ ದುರಂತ ಎದುರಾಗಿದೆ. ಎರಡೂ ದೇಶಗಳಲ್ಲಿ ಭೂಮಿತಾಯಿಯ ರೌದ್ರಾವತಾರಕ್ಕೆ 25,000ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಇಂಥ ಹೊತ್ತಿನಲ್ಲಿ ಭಾರತ ಅಲ್ಲಿನವರ ರಕ್ಷಣೆಗೆ ಧಾವಿಸಿದೆ. ಇಷ್ಟರವರೆಗೆ ಅಲ್ಲಿಗೆ ನಮ್ಮ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್)ಯ ನಾಲ್ಕು ತಂಡಗಳು ತಲುಪಿವೆ. ʼಆಪರೇಷನ್ ದೋಸ್ತ್ʼ ಹೆಸರಿನಲ್ಲಿ ಅಲ್ಲಿಗೆ ತಲುಪಿರುವ ನೆರವಿನ ಯಾದಿಯಲ್ಲಿ 30 ಬೆಡ್‌ಗಳ ಒಂದು ಪೂರ್ಣ ಪ್ರಮಾಣದ ಆಸ್ಪತ್ರೆಯೇ ಇದೆ. 99 ವಿವಿಧ ತಜ್ಞರಿದ್ದಾರೆ. ಔಷಧಗಳು, ಸ್ಕ್ಯಾನಿಂಗ್ ಯಂತ್ರಗಳು, ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಆಂಬ್ಯುಲೆನ್ಸ್‌ಗಳು ಏಳು ಸಾಗಣೆ ಟ್ರಕ್‌ಗಳು ತಲುಪಿವೆ. 150ಕ್ಕೂ ಹೆಚ್ಚಿನ ಎನ್‌ಡಿಆರ್‌ಎಫ್ ಯೋಧರು ಅಲ್ಲಿಗೆ ವಿಶೇಷ ವಾಹನಗಳು, ಸಾಧನೋಪಕರಣಗಳು, ಡಾಗ್ ಸ್ಕ್ವಾಡ್‌ಗಳ ಜತೆಗೆ ಧಾವಿಸಿದ್ದಾರೆ. ಕುಸಿದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ, ಪ್ರಥಮ ಚಿಕಿತ್ಸೆ ನೀಡುವ, ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಂತ್ರಸ್ತರಿಗೆ ಆಹಾರ, ಔಷಧಗಳನ್ನು ಪೂರೈಸುವ ಕೆಲಸದಲ್ಲೂ ತೊಡಗಿದೆ.
ಇದೇ ಹೊತ್ತಿಗೆ, ಭಯೋತ್ಪಾಕದರಿಗೆ ಪೋಷಣೆ ಕಾರಣದಿಂದ ಅಮೆರಿಕದಿಂದ ನಾನಾ ನಿರ್ಬಂಧಗಳಿಗೆ ಒಳಗಾಗಿರುವ ಸಿರಿಯಾಗೂ ಭಾರತ ಸಹಾಯಹಸ್ತ ಚಾಚಿದೆ. ʼʼಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼʼ ಎಂದು ಜಿ20 ಮಂತ್ರದಲ್ಲಿ ನಾವು ವಿಶ್ವಾಸ ಇಡುವವರು, ಇಂಥ ಹೊತ್ತಿನಲ್ಲಿ ಮಾನವೀಯ ನೆರವಿಗೆ ನಾವು ಹಿಂಜರಿಯುವವರಲ್ಲʼʼ ಎಂದು ವಿದೇಶಾಂಗ ಕಾರ್ಯದರ್ಶಿ ಸಂಜಯ್ ವರ್ಮಾ ಹೇಳಿದ್ದಾರೆ. ಇದು ಇಂಥ ದುರಂತದ ಸನ್ನಿವೇಶಗಳಲ್ಲಿ ಭಾರತದ ನಿಲುವೇನು ಎಂಬುದನ್ನು ಸಾರುವ ಮಾತು. ʼʼವೈದ್ಯಕೀಯ ನೆರವು ಕೇಳಿದಾಗ ಮೊದಲು ಸ್ಪಂದಿಸಿದ ದೇಶ ಭಾರತʼʼ ಎಂದು ಟರ್ಕಿ ಸರ್ಕಾರ ಹೇಳಿದೆ. ಹಲವು ದೊಡ್ಡ ದೇಶಗಳು ಇನ್ನಷ್ಟೇ ಸ್ಪಂದಿಸಬೇಕಿದೆ. ಟರ್ಕಿಯ ದಾರುಣ ಸನ್ನಿವೇಶದಲ್ಲಿ ನೆರವಿಗೆ ಧಾವಿಸಿದ ಮೊದಲ ದೇಶಗಳಲ್ಲೊಂದು ಭಾರತ. ಇದು ಟರ್ಕಿಯ ಜನ ಮಾತ್ರವಲ್ಲ, ಇಡೀ ವಿಶ್ವದ ಜನರ ಮನ ಗೆದ್ದಿದೆ. ಸಿರಿಯಾಗೆ ನೆರವಾಗುವ ವಿಚಾರದಲ್ಲಿ ನ್ಯಾಟೋ ಇನ್ನೂ ಮೀನಮೇಷ ಎಣಿಸುತ್ತಿದೆ. ಆದರೆ ಭಾರತ ಮಾತ್ರ ಅಂಥ ಯಾವ ಭೇದವನ್ನೂ ಎಣಿಸಿಲ್ಲ.
ʼʼಪ್ರಾಕೃತಿಕ ಅನಾಹುತಗಳು ತಂದಿಡುವ ಸನ್ನಿವೇಶಗಳನ್ನು ಎದುರಿಸಲು ಎಲ್ಲ ದೇಶಗಳು ಒಂದು ಸಮಗ್ರ, ಕ್ರೋಡೀಕೃತ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿದೆʼʼ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿಪಾದಿಸಿರುವ ನಿಲುವು. ಅದು ಆಗುತ್ತದೋ ಇಲ್ಲವೋ, ವೈಯಕ್ತಿಕ ನೆರವನ್ನಂತೂ ನೀಡುವ ವಿಚಾರದಲ್ಲಿ ಹಿಂದೆ ಸರಿದಿಲ್ಲ. ಹಾಗೆ ನೋಡಿದರೆ ಭಾರತದ ಧೋರಣೆಯೇ ʼವಸುಧೈವ ಕುಟುಂಬಕಂʼ ಎಂಬುದಾಗಿದೆ. ವಿಶ್ವದ ಯಾವುದೋ ಒಂದು ಕಡೆ ಜನತೆ ನರಳುತ್ತಿದ್ದರೆ ಸುಮ್ಮನಿರುವ ಜಾಯಮಾನ ನಮ್ಮದಲ್ಲ. ಸಾಧ್ಯವಾದಷ್ಟು ನೆರವಿನ ಹಸ್ತ ಚಾಚುವ ಸತ್ಸಂಪ್ರದಾಯವನ್ನು ನಾವು ರೂಢಿಸಿಕೊಂಡು ಬಂದಿದ್ದೇವೆ. 90ರ ದಶಕದಲ್ಲಿ ತಾಲಿಬಾನ್ ಆಡಳಿತದಿಂದ ಸರ್ವನಾಶವಾಗಿದ್ದ ಅಫಘಾನಿಸ್ತಾನದ ಜನತೆಗೆ ಕೋಟಿಗಟ್ಟಲೆ ಹಣ ಸುರಿದು, ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಾಧ್ಯವಾದಷ್ಟು ನೆರವನ್ನು ಭಾರತ ನೀಡಿದೆ. ಈಗಲೂ ಟನ್ನುಗಟ್ಟಲೆ ಗೋಧಿಯನ್ನು ಕಳಿಸುತ್ತಿದೆ, 300 ಕೋಟಿ ರೂ. ನೆರವು ಕಳಿಸುವ ವಚನವಿತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ನೆರೆ ದೇಶ ಶ್ರೀಲಂಕಾದ ಬವಣೆಯನ್ನು ನೀಗಲು 450 ಕೋಟಿ ಡಾಲರ್ ಒದಗಿಸಿದ್ದೂ ಇದೇ ಭಾರತ. ಈ ವರ್ಷದ ಬಜೆಟ್‌ನಲ್ಲಿ ಹೀಗೆ ಸಂಕಷ್ಟದಲ್ಲಿರುವ ಅಕ್ಕಪಕ್ಕದ ದೇಶಗಳಿಗಾಗಿ ಭಾರತ ಎತ್ತಿಟ್ಟಿರುವ ಹಣದ ಮೊತ್ತವೇ 6922 ಕೋಟಿ ರೂಪಾಯಿ.
ಸಂಪಾದಕೀಯ : ವಿಸ್ತಾರ ಸಂಪಾದಕೀಯ: ಹೂಡಿಕೆದಾರರ ಹಿತ ರಕ್ಷಣೆಗೆ ತಜ್ಞರ ಸಮಿತಿ ಸೂಕ್ತ
ಇತರರ ಬವಣೆ ಅವರದಷ್ಟೇ ಎಂದು ಭಾರತ ಎಂದೂ ಭಾವಿಸಿಲ್ಲ. ತನ್ನಿಂದ ಎಷ್ಟು ಸಾಧ್ಯವೋ ಅಷ್ಟು, ಯಾವಾಗ ಸಾಧ್ಯವೋ ಆವಾಗಲೆಲ್ಲಾ ಸಹಾಯಹಸ್ತ ಚಾಚಿದೆ. ಅಕ್ಕಪಕ್ಕದ ಕೆಲವು ದೇಶಗಳ ಮಾನವೀಯ ಬಿಕ್ಕಟ್ಟಿನಿಂದಾಗಿ ಓಡಿಬಂದಿರುವ ನಿರಾಶ್ರಿತರಿಗೆ ನೆಲೆ ನೀಡಿರುವುದನ್ನೂ ಸ್ಮರಿಸಬಹುದು. ಭಾರತದ 2.5 ಲಕ್ಷಕ್ಕೂ ಅಧಿಕ ಮಂದಿ ಯೋಧರು ಇದುವರೆಗೆ ವಿಶ್ವಸಂಸ್ಥೆ ನಾನಾ ದೇಶಗಳಲ್ಲಿ ನಿಯೋಜಿಸಿದ ಶಾಂತಿಪಾಲನಾ ಕಾರ್ಯಗಳಲ್ಲಿ ಭಾಗಿಗಳಾಗಿದ್ದಾರೆ. ಭಾರತ ಎಂದೂ ಮನೆ- ಮನಗಳನ್ನು ಬೆಸೆಯುವ ಕಾರ್ಯ ಮಾಡಿದೆ. ಆ ದೇಶ ತನಗೆ ಒಳ್ಳೆಯದು ಬಗೆಯಿತೋ ಅಥವಾ ಕೇಡೆಣಿಸಿತೋ ಇಲ್ಲವೋ ಎಂದು ಯಾವತ್ತೂ ಯೋಚಿಸಿಲ್ಲ. ಈ ಆಶಯ ಸದಾಕಾಲಕ್ಕೂ ಮುಂದುವರಿಯಲಿ, ಟರ್ಕಿ- ಸಿರಿಯಾಗಳ ಸಂಕಷ್ಟ ನೀಗಲಿ ಎಂದು ಆಶಿಸೋಣ.