ಇಂಡಿಯಾನಾ: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಬರ್ಬರವಾಗಿ ಹತ್ಯೆಯಾದ (Indian student in US) ಕೆಲವೇ ದಿನಗಳಲ್ಲಿ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದವನು ಶವವಾಗಿ ಪತ್ತೆಯಾಗಿದ್ದಾನೆ. ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿ ನೀಲ್ ಆಚಾರ್ಯ (Neel Acharya) ಮೃತಪಟ್ಟವರು.
ನೀಲ್ ಆಚಾರ್ಯ ಅವರ ತಾಯಿ ಗೌರಿ, ಆತ ನಾಪತ್ತೆಯಾದ ಕೆಲವೇ ಗಂಟೆಗಳಲ್ಲಿ ಈ ಕುರಿತ ವಿನಂತಿಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ನೀಲ್ ಆಚಾರ್ಯ ಅವರನ್ನು ಪರ್ಡ್ಯೂ ಕ್ಯಾಂಪಸ್‌ನಲ್ಲಿ ಉಬರ್ ಡ್ರೈವರ್ ಡ್ರಾಪ್ ಮಾಡಿದ್ದು, ಅವರನ್ನು ಕೊನೆಯದಾಗಿ ನೋಡಿದ ವ್ಯಕ್ತಿ ಎಂದು ತಿಳಿಸಿದ್ದರು. ನೀಲ್‌ನನ್ನು ಹುಡುಕಲು ಸಹಾಯವನ್ನು ಕೇಳಿದ್ದರು.
ಟಿಪ್ಪಿಕಾನೊ ಕೌಂಟಿ ಕರೋನರ್ ಕಚೇರಿಯ ಪ್ರಕಾರ, ಭಾನುವಾರ ಬೆಳಗ್ಗೆ 11:30ರ ಸುಮಾರಿಗೆ ವೆಸ್ಟ್ ಲಫಯೆಟ್ಟೆಯ 500 ಆಲಿಸನ್ ರಸ್ತೆಯ ಪೊಲೀಸ್ ಅಧಿಕಾರಿಗಳು ಪರ್ಡ್ಯೂ ವಿವಿಯ ಕ್ಯಾಂಪಸ್‌ನಲ್ಲಿಯೇ ನೀಲ್ ಆಚಾರ್ಯ ಅವರ ಮೃತ ದೇಹವನ್ನು ಪತ್ತೆ ಹಚ್ಚಿದರು.
ನೀಲ್ ಆಚಾರ್ಯ ಪರ್ಡ್ಯೂ ವಿಶ್ವವಿದ್ಯಾಲಯದ ಜಾನ್ ಮಾರ್ಟಿನ್ಸನ್ ಆನರ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಸೈನ್ಸ್‌ನಲ್ಲಿ ಡಬಲ್ ಮೇಜರ್ ಓದುತ್ತಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಈ ಕುರಿತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಮೇಲ್ ಕಳುಹಿಸಿದ್ದು, ಆಚಾರ್ಯ ಅವರ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.
“ನಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರಾದ ನೀಲ್ ಆಚಾರ್ಯ ಅವರು ನಿಧನರಾಗಿದ್ದಾರೆಂದು ತಿಳಿಸಲು ಬಹಳ ದುಃಖವಾಗುತ್ತದೆ. ಅವರ ಸ್ನೇಹಿತರು, ಕುಟುಂಬ ಮತ್ತು ಸಂತ್ರಸ್ತರೆಲ್ಲರಿಗೂ ನಮ್ಮ ಸಂತಾಪಗಳು” ಎಂದು ಮುಖ್ಯಸ್ಥ ಕ್ರಿಸ್ ಕ್ಲಿಫ್ಟನ್ ಮೇಲ್‌ನಲ್ಲಿ ಬರೆದಿದ್ದಾರೆ. ಅವರು ನೀಲ್ ಆಚಾರ್ಯರನ್ನು “ಚುರುಕು ವ್ಯಕ್ತಿ, ಶೈಕ್ಷಣಿಕವಾಗಿ ಪ್ರತಿಭಾವಂತ” ಎಂದು ಬಣ್ಣಿಸಿದ್ದಾರೆ. “ಇದು ಆಘಾತಕರ ಸಂಗತಿ, ನಮ್ಮ ಸಮುದಾಯಕ್ಕೆ ನಿಜವಾದ ನಷ್ಟ” ಎಂದಿದ್ದಾರೆ.
ನೀಲ್ ಆಚಾರ್ಯ ಅವರ ಸ್ನೇಹಿತ ಮತ್ತು ರೂಮ್‌ಮೇಟ್ ಆರ್ಯನ್ ಖಾನೋಲ್ಕರ್ ಅವರು “ನೀಲ್ ಆಚಾರ್ಯ ನಮ್ಮೆಲ್ಲ ಪ್ರೀತಿಯ ವ್ಯಕ್ತಿ, ವರ್ಚಸ್ವಿಯಾಗಿದ್ದರು. ಅವರು ನಮ್ಮೆಲ್ಲರಿಂದ ಪ್ರೀತಿಸಲ್ಪಡುತ್ತಾರೆ” ಎಂದು ಹೇಳಿದ್ದಾರೆ. ನೀಲ್ ಆಚಾರ್ಯ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ ಅವರು ಪುಣೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು, 2022ರಲ್ಲಿ ಪರ್ಡ್ಯೂಗೆ ಸೇರಿದ್ದರು.
ಈ ವಾರದ ಆರಂಭದಲ್ಲಿ, ಅಮೇರಿಕದ ಜಾರ್ಜಿಯಾದ ಲಿಥೋನಿಯಾದ ಅಂಗಡಿಯೊಂದರಲ್ಲಿ ವಿವೇಕ್ ಸೈನಿ ಎಂಬ ಭಾರತೀಯ ವಿದ್ಯಾರ್ಥಿಯನ್ನು ಭಿಕ್ಷುಕನೊಬ್ಬ ಕೊಂದು ಹಾಕಿದ್ದ. ಸುತ್ತಿಗೆಯಿಂದ ಪದೇ ಪದೆ ತಲೆಗೆ ಹೊಡೆದು ಬರ್ಬರವಾಗಿ ಕೊಂದಿದ್ದ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿವೇಕ್ ಸೈನಿ ಮೇಲೆ ದಾಳಿ ನಡೆಸಿದ ವ್ಯಕ್ತಿ ನಿರಾಶ್ರಿತನಾಗಿದ್ದು, ಪೊಲೀಸ್ ಅಧಿಕಾರಿಗಳು ಆತನನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ವಿವೇಕ್ ಸೈನಿ ಅವರ ದೇಹವನ್ನು ಜನವರಿ 24ರಂದು ಭಾರತಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: Indian Student: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಯ ಹತ್ಯೆ; ಭಿಕಾರಿಗೆ ಅನ್ನ ಹಾಕಿದ್ದೇ ತಪ್ಪಾಯ್ತು!