Site icon Vistara News

William Lai: ಚೀನಾದ ಕಟ್ಟರ್ ವಿರೋಧಿ ವಿಲಿಯಂ ಲಾಯ್‌ ಈಗ ತೈವಾನ್‌ ನೂತನ ಅಧ್ಯಕ್ಷ

William Lai

Anti-China William Lai set to be Taiwan's president

ತೈಪೆ ಸಿಟಿ: ತೈವಾನ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಲಿಯಂ ಲಾಯ್‌ (William Lai Ching-te) ನೇತೃತ್ವದ ಡೆಮಾಕ್ರಟಿಕ್‌ ಪ್ರೊಗ್ರೆಸ್ಸಿವ್ ಪಕ್ಷವು (Democratic Progressive Party) ಭರ್ಜರಿ ಗೆಲುವು ಸಾಧಿಸಿದೆ. ಹಾಗಾಗಿ, ಶೀಘ್ರದಲ್ಲೇ ವಿಲಿಯಂ ಲಾಯ್‌ ಅವರು ತೈವಾನ್‌ ನೂತನ ಅಧ್ಯಕ್ಷರಾಗಿ (Taiwan President) ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಚೀನಾದ ಕಟ್ಟರ್‌ ವಿರೋಧಿಯಾಗಿರುವ (Anti China) ಇವರು ಕಮ್ಯುನಿಸ್ಟ್‌ ರಾಷ್ಟ್ರಕ್ಕೆ ಯಾವ ರೀತಿ ಪ್ರತಿರೋಧ ಒಡ್ಡುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

ತೈವಾನ್‌ನ ಹಾಲಿ ಉಪಾಧ್ಯಕ್ಷರಾಗಿರುವ ವಿಲಿಯಂ ಲಾಯ್‌ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ವಿಲಿಯಂ ಲಾಯ್‌ ಅವರಿಗೆ ಕನ್ಸರ್ವೇಟಿವ್‌ ಕುವೋಮಿಂಟಾಂಗ್‌ ಪಕ್ಷದ ಹೌ ಯು-ಇಹ್‌ ಹಾಗೂ ತೈವಾನ್‌ ಪೀಪಲ್ಸ್‌ ಪಾರ್ಟಿಯ ಕೊ ವೆನ್-ಜೆ ಅವರು ತೀವ್ರ ಸ್ಪರ್ಧೆಯೊಡ್ಡಿದ್ದರು. ಆದರೆ, ಇದೆಲ್ಲದರ ಮಧ್ಯೆ ವಿಲಿಯಂ ಲಾಯ್‌ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ವಿಲಿಯಂ ಲಾಯ್‌ ಅವರು ಶೇ.40ರಷ್ಟು ಮತ ಗಳಿಸಿದರೆ, ಹೌ ಯು-ಇಹ್‌ ಅವರು ಶೇ.33.4ರಷ್ಟು ಮತ ಗಳಿಸುವ ಮೂಲಕ ಪರಾಭವಗೊಂಡರು.

ಲಾಯ್‌ಗೆ ಮತ ನೀಡಬೇಡಿ ಎಂದಿದ್ದ ಚೀನಾ

ವಿಲಿಯಂ ಲಾಯ್‌ ಅವರು ಚೀನಾದ ಕಟ್ಟರ್‌ ವಿರೋಧಿಯಾಗಿದ್ದಾರೆ. ಅವರು ಚೀನಾದ ಕುತಂತ್ರವನ್ನು ಬಹಿರಂಗವಾಗಿ ಖಂಡಿಸುತ್ತಾರೆ. ಇದೇ ಕಾರಣಕ್ಕೆ ತೈವಾನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಜನ ವಿಲಿಯಂ ಲಾಯ್‌ ಅವರಿಗೆ ಮತ ನೀಡಬಾರದು ಎಂದು ಕುತಂತ್ರಿ ಚೀನಾ ಫರ್ಮಾನು ಹೊರಡಿಸಿತ್ತು. ಆದರೆ, ಚೀನಾದ ಸೂಚನೆಯ ಮಧ್ಯೆಯೂ ತೈವಾನ್‌ ನಾಗರಿಕರು ವಿಲಿಯಂ ಲಾಯ್‌ ಅವರಿಗೆ ಮತ ನೀಡಿದ್ದಾರೆ. ಇದರಿಂದಾಗಿ ಚೀನಾ ಮತ್ತಷ್ಟು ಕೆರಳಿದ್ದು, ಮುಂಬರುವ ದಿನಗಳಲ್ಲಿ ಚೀನಾವನ್ನು ವಿಲಿಯಂ ಲಾಯ್‌ ಅವರು ಹೇಗೆ ಹಿಮ್ಮೆಟ್ಟಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ತೈವಾನ್​ ಕ್ಷಿಪಣಿ ಅಭಿವೃದ್ಧಿ ತಂಡದ ಮುಖ್ಯಸ್ಥನ ಶವ ಹೋಟೆಲ್​​ನಲ್ಲಿ ಪತ್ತೆ; ಚೀನಾ ಕೈವಾಡ?

ತೈವಾನ್‌ ಮೇಲೆ ಚೀನಾ ದಾಳಿ?

ದ್ವೀಪರಾಷ್ಟ್ರವಾದ ತೈವಾನ್‌ನ ನೂತನ ಅಧ್ಯಕ್ಷರಾಗಿ ವಿಲಿಯಂ ಲಾಯ್‌ ಅಧಿಕಾರ ವಹಿಸಿಕೊಳ್ಳುವುದರಿಂದ ಕೆರಳಿರುವ ಚೀನಾ, ತೈವಾನ್‌ ಮೇಲೆ ದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ. ತೈವಾನ್‌ ಸ್ವಯಂ ಆಡಳಿತ ಹೊಂದಿದ್ದರೂ ಅದು ತನ್ನ ಭೂಭಾಗ ಎಂದು ಪ್ರತಿಪಾದಿಸುತ್ತಲೇ ಬಂದಿರುವ ಚೀನಾ, ಈಗ ತೈವಾನ್‌ ಮೇಲೆ ಆಕ್ರಮಣ ಮಾಡಲು ಚಿಂತನೆ ನಡೆಸಿದೆ. ತೈವಾನ್‌ನ ಸೇನಾ ನೆಲೆಗಳು ಹಾಗೂ ಸಂವಹನ ಕಚೇರಿಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ತೈವಾನ್‌ ಬೆಂಬಲಕ್ಕೆ ಅಮೆರಿಕ ಇರುವ ಕಾರಣ ಚೀನಾದ ಆಕ್ರಮಣವು ಅಷ್ಟು ಸುಲಭವಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version