ಇಸ್ಲಾಮಾಬಾದ್: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಬಲೂಚಿಸ್ತಾನದ ಸಂಸದ ಅನ್ವರ್ ಉಲ್ ಹಕ್ ಕಾಕರ್ (Anwar Ul Haq) ಅವರನ್ನು ನೇಮಿಸಲಾಗಿದೆ. ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ (ಸಂಸತ್ತಿನ ಕೆಳಮನೆ) ಅವಧಿ ಮುಗಿದ ಕಾರಣ ಆಗಸ್ಟ್ 9ರಂದು ವಿಸರ್ಜನೆ ಮಾಡಿದ್ದು, ಪ್ರಧಾನಿ ಸ್ಥಾನಕ್ಕೆ ಶೆಹಬಾಜ್ ಷರೀಫ್ ರಾಜೀನಾಮೆ ನೀಡಿದ್ದಾರೆ. ಆದರೆ, ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಹಂಗಾಮಿ ಪ್ರಧಾನಿಯಾಗಿ ಅನ್ವರ್ ಉಲ್ ಹಕ್ ಕಾಕರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ಆರ್ಥಿಕ ಹಿಂಜರಿತದಿಂದ ನಲುಗುತ್ತಿರುವ ಪಾಕಿಸ್ತಾನದಲ್ಲಿ ರಾಜಕೀಯ ಮೇಲಾಟವೂ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ಸಾರ್ವತ್ರಿಕ ಚುನಾವಣೆಯ ದಿನಾಂಕ ಮುಂದೂಡಲಾಗುತ್ತಿದೆ. ಆದರೆ, ಕೆಳಮನೆಯ ಅವಧಿ ಮುಗಿದ ಕಾರಣ ವಿಸರ್ಜಿಸಲು ಆಗಸ್ಟ್ 9ರಂದು ಅಧ್ಯಕ್ಷ ಆರಿಫ್ ಅಲ್ವಿ ಅಂಗೀಕಾರ ನೀಡಿದ್ದರು. ಆದರೆ, ನ್ಯಾಷನಲ್ ಅಸೆಂಬ್ಲಿ ವಿಸರ್ಜನೆಯಾದ ಎಂಟು ದಿನದಲ್ಲಿ ಹಂಗಾಮಿ ಪ್ರಧಾನಿಯನ್ನು ಆಯ್ಕೆ ಮಾಡಬೇಕು ಎಂಬ ನಿಯಮವಿದೆ. ಹಾಗಾಗಿ, ಎಲ್ಲ ಪಕ್ಷಗಳು ಒಗ್ಗೂಡಿ ಅನ್ವರ್ ಉಲ್ ಹಕ್ ಕಾಕರ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಿವೆ ಎಂದು ತಿಳಿದುಬಂದಿದೆ.
ಯಾರಿವರು ಅನ್ವರ್ ಉಲ್ ಹಕ್ ಕಾಕರ್?
ಅನ್ವರ್ ಉಲ್ ಹಕ್ ಕಾಕರ್ ಅವರು ಬಲೂಚಿಸ್ತಾನದ ಸಂಸದರಾಗಿದ್ದಾರೆ. ಇವರು ಬಲೂಚಿಸ್ತಾನ ಅವಾಮಿ ಪಕ್ಷದಿಂದ ನ್ಯಾಷನಲ್ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ. ಸರಳ ಹಾಗೂ ಸೌಮ್ಯ ಸ್ವಭಾವಕ್ಕೆ ಹೆಸರಾಗಿರುವ ಇವರು ಇಮ್ರಾನ್ ಖಾನ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಬಳಿಕ ತಮ್ಮ ಪಕ್ಷದ ಬೆಂಬಲವನ್ನು ವಾಪಸ್ ಪಡೆದಿದ್ದರು. ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡು 2008ರಿಂದಲೂ ಸಕ್ರಿಯ ರಾಜಕಾರಣದಲ್ಲಿರುವ ಇವರು 2018ರಲ್ಲಿ ಸಂಸದರಾಗಿ ಮತ್ತೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Imran Khan: ಭ್ರಷ್ಟಾಚಾರ; ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, ಬಂಧನ
ಪಾಕಿಸ್ತಾನಕ್ಕೆ ಎಲ್ಲರೂ ಒಪ್ಪುವ, ಯಾವುದೇ ವಿವಾದಗಳಿಲ್ಲದ ಸಂಸದನನ್ನು ಪ್ರಧಾನಿಯನ್ನಾಗಿ ನೇಮಕ ಮಾಡುವ ದೃಷ್ಟಿಯಿಂದಾಗಿ ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಪ್ರತಿಪಕ್ಷ ನಾಯಕ ರಾಜಾ ರಿಯಾಜ್ ಅವರು ಸಭೆ ನಡೆಸಿ ಅನ್ವರ್ ಉಲ್ ಹಕ್ ಕಾಕರ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಲು ಒಪ್ಪಿಗೆ ಸೂಚಿಸಿದ್ದಾರೆ. ನ್ಯಾಷನಲ್ ಅಸೆಂಬ್ಲಿ ವಿಸರ್ಜನೆಯಾದ 90 ದಿನಗಳಲ್ಲಿ ಚುನಾವಣೆ ನಡೆಯಬೇಕು ಎಂಬ ನಿಯಮವಿದೆ. ಹಾಗಾಗಿ, ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.