ಅತ್ಯಂತ ಉತ್ಕೃಷ್ಟ ತಂತ್ರಜ್ಞಾನ ಹೊಂದಿರುವ ಆ್ಯಪಲ್ ವಾಚ್ ಮತ್ತೊಂದು ಜೀವವನ್ನು ಉಳಿಸಿದ್ದು ವರದಿಯಾಗಿದೆ. ಆ್ಯಪಲ್ ವಾಚ್ನಿಂದ 12 ವರ್ಷದ ಹುಡುಗಿಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿ, ಆಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದು, ಸಾವಿನಿಂದ ಪಾರಾದ ಸುದ್ದಿ ನಿನ್ನೆಯಿಂದ ವೈರಲ್ ಆಗುತ್ತಿದೆ. ಅದರ ಜತೆ ಈಗ ಇನ್ನೊಬ್ಬ ಮಹಿಳೆಯೂ ಆ್ಯಪಲ್ ವಾಚ್ನಿಂದಲೇ ಪ್ರಾಣ ಉಳಿಸಿಕೊಂಡಿದ್ದು ಗೊತ್ತಾಗಿದೆ.
ಯುಎಸ್ನ ವಾಷಿಂಗ್ಟನ್ನ ಮಹಿಳೆಯೊಬ್ಬರು ಆಕೆಯ ಪತಿಯಿಂದಲೇ ತೀವ್ರ ಹಲ್ಲೆಗೆ ಒಳಗಾಗಿದ್ದರು. ಆ ದುರುಳ ಪತ್ನಿಯನ್ನು ಚಾಕುವಿನಿಂದ ತಿವಿದು, ಬಾಯಿ-ಮೈಯಿಗೆಲ್ಲ ದೊಡ್ಡದಾದ ಗಮ್ಟೇಪ್ ಕಟ್ಟಿದ್ದ. ಅಷ್ಟೇ ಅಲ್ಲ, ಆಕೆಯನ್ನು ಅಲ್ಲೇ ಸಮೀಪದ ಕಾಡಿನಲ್ಲಿ ಜೀವಂತವಾಗಿ ಹೂತುಹಾಕಿದ್ದ. ಅದೃಷ್ಟಕ್ಕೆ ಆ ಸಮಾಧಿ ಅಷ್ಟೊಂದು ಆಳವಾಗಿ ಇರಲಿಲ್ಲ. ಮೇಲಿನಿಂದ ಸರಿಯಾಗಿ ಮುಚ್ಚಿರಲಿಲ್ಲ. ಆದರೂ ಅವಳಿದ್ದ ಸ್ಥಿತಿಯಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳುವುದು ಕಷ್ಟವೇ ಆಗಿತ್ತು. ಆದರೆ ಆಕೆಯನ್ನು ದುಷ್ಟ ಪತಿಯಿಂದ ಪಾರು ಮಾಡಿಸಿದ್ದು ಇದೇ ಆ್ಯಪಲ್ ವಾಚ್ ಮತ್ತು ಸಮಯಪ್ರಜ್ಞೆ. ಪತಿ ಆಕೆಯನ್ನು ಹೂಳುವುದಕ್ಕೂ ಮೊದಲೇ ಅವಳು 911 (ಯುಎಸ್ ಪೊಲೀಸ್)ಕ್ಕೆ ಕರೆ ಮಾಡಿದ್ದರು.
ಯಂಗ್ ಸೂಕ್ ಆನ್ (42) ಎಂಬ ಮಹಿಳೆ ಪೊಲೀಸರಿಗೆ ಪತಿ ವಿರುದ್ಧ ದೂರು ನೀಡಿದ್ದಾರೆ. ಅಕ್ಟೋಬರ್ 16ರಂದು ತನಗೂ ತನ್ನ ಪತಿಗೂ ಜಗಳ ಆಯಿತು. ಅದೂ ಹಣದ ವಿಚಾರಕ್ಕೆ ನಡೆದ ಘರ್ಷಣೆ. ಬಳಿಕ ಆತ ತನ್ನನ್ನು ಬಲವಂತವಾಗಿ ಮನೆಯಿಂದ ಎಳೆದುಕೊಂಡು ಹೋದ. ಅದಕ್ಕೂ ಮೊದಲೇ ಬೆಡ್ರೂಂ ಮೇಲೆ ತನ್ನ ಮೇಲೆ ಹಲ್ಲೆ ನಡೆಸಿದ್ದ, ನನಗೆ ಗುದ್ದಿದ್ದ. ನಂತರ ಗಮ್ಟೇಪ್ ಸುತ್ತಿ, ಸಮೀಪದ ಅರಣ್ಯಕ್ಕೆ ಕರೆದುಕೊಂಡು ಹೋಗಿ, ಚಾಕುವಿನಿಂದ ಚುಚ್ಚಿದ. ಬಳಿಕ ಚಿಕ್ಕದಾದ ಗುಂಡಿ ತೆಗೆದು, ಅದರಲ್ಲಿ ಹೂತು, ಮೇಲಿಂದ ಮಣ್ಣು ಹಾಕಿದ’ ಎಂದು ವಿವರಿಸಿದ್ದಾರೆ.
ಆಕೆಯ ಕೈಯಲ್ಲಿದ್ದ ಸ್ಮಾರ್ಟ್ವಾಚ್ನ್ನೂ ಕೂಡ ಸುತ್ತಿಗೆಯಿಂದ ಚಚ್ಚಿ, ಹಾಳುಮಾಡಿದ್ದ. ಆದರೆ ಯಂಗ್ ಸೂಕ್ ಅದಕ್ಕೂ ಮೊದಲು, ಅಂದರೆ ಪತಿ ಅವಳನ್ನು ಎಳೆದುಕೊಂಡು ಹೋಗುವ ಮೊದಲೇ 911ರಿಂದ ಪೊಲೀಸರಿಗೆ ಕರೆ ಮಾಡಿದ್ದರು. ತನ್ನ 20ವರ್ಷದ ಮಗಳು ಮತ್ತು ಬೆಸ್ಟ್ ಫ್ರೆಂಡ್ ಒಬ್ಬರಿಗೆ ಅದೇ ವಾಚ್ನಿಂದ ಎಮರ್ಜನ್ಸಿ ಸಂದೇಶ ಕಳಿಸಿದ್ದರು. ಅದೇ ಅವರನ್ನು ಕಾಪಾಡಿತು. ಮಹಿಳೆ ಅಪಾಯದಲ್ಲಿ ಇದ್ದಿದ್ದರು ಅವರಿಗೆಲ್ಲ ಗೊತ್ತಾಗಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದರು. ಅಂದಹಾಗೇ. ಆ ದುರುಳ ಪತಿಯ ಹೆಸರು ಕ್ಯೋಂಗ್ ಎಂದಾಗಿದ್ದು, 53 ವರ್ಷ. ಇವನು ಪತ್ನಿಯನ್ನು ಮನೆಯಿಂದ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲೂ ಸೆರೆಯಾಗಿತ್ತು.
ಕ್ಯೋಂಗ್ ತನ್ನ ಪತ್ನಿ ಯಂಗ್ ಸೂಕ್ರನ್ನು ಗುಂಡಿಯಲ್ಲಿ ಹಾಕಿದಾಗ ಅವರು ಎಚ್ಚರ ತಪ್ಪಿದ್ದರೂ, ಕೆಲವೇ ಕ್ಷಣದಲ್ಲಿ ಆಕೆಗೆ ಪ್ರಜ್ಞೆ ಮರಳಿತ್ತು. ಪತಿ ಅತ್ತ ಹೋಗುತ್ತಿರುವುದು ಅವನ ಹೆಜ್ಜೆಯ ಸಪ್ಪಳದಿಂದ ಮಹಿಳೆಗೆ ಗೊತ್ತಾಗಿತ್ತು. ಆಗ ಅವಳು ನಿಧಾನವಾಗಿ ಹೊರಬರಲು ಯತ್ನ ಮಾಡಿದ್ದಳು. ಆದರೆ ಆಗಿರಲಿಲ್ಲ. ಆದರೂ ಹೇಗೇಗೋ ತನ್ನನ್ನು ಸುತ್ತಿದ್ದ ಟೇಪ್ ಕಳಚಿಕೊಂಡು, ಕೈಯಲ್ಲೇ ಸಮಾಧಿಗೆ ಮುಚ್ಚಿದ್ದ ಮಣ್ಣನ್ನು ಸರಿಸಿ ಹೊರಬಂದಿದ್ದಳು. ಆದರೆ ಕ್ಯೋಂಗ್ ಅಷ್ಟರಲ್ಲಿ ಮತ್ತೆ ವಾಪಸ್ ಬಂದಿದ್ದ. ಆಕೆಯನ್ನು ಅಲ್ಲಿಂದ ಎಳೆದುಕೊಂಡು ಹೋಗಿ ಒಂದು ಗ್ಯಾರೇಜ್ನಲ್ಲಿ ಕೂಡಿಹಾಕಲು ಯತ್ನಿಸಿದ್ದ. ಅವನಿಂದ ತಪ್ಪಿಸಿಕೊಂಡು ಕ್ಯೋಂಗ್ ಓಡುತ್ತಿದ್ದರು, ಅಷ್ಟರಲ್ಲಿ ಪೊಲೀಸರೂ ಈಕೆಯನ್ನು ಟ್ರ್ಯಾಕ್ ಮಾಡಿದ್ದರು. ಒಟ್ಟಾರೆ ಕೊನೆಯಲ್ಲಿ ಆಕೆಯ ಜೀವ ಉಳಿಸಿ, ಪತಿಯಿಂದ ಹಿಂಸೆ ತಪ್ಪಿಸಿದ ಕ್ರೆಡಿಟ್ ಆ್ಯಪಲ್ ವಾಚ್ಗೇ ಸೇರುತ್ತದೆ.
ಇದನ್ನೂ ಓದಿ: Apple Watch | 12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆ್ಯಪಲ್ ವಾಚ್!