ಇಸ್ಲಾಮಾಬಾದ್: ನಿಂದನೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಹಾಗೂ ಅವರ ಪಕ್ಷದ ಪ್ರಮುಖ ನಾಯಕರ ವಿರುದ್ಧ ಚುನಾವಣಾ ಆಯೋಗವು ಅರೆಸ್ಟ್ ವಾರಂಟ್ ಹೊರಡಿಸಿದೆ. ಪಾಕಿಸ್ತಾನ ಚುನಾವಣಾ ಆಯೋಗ ಮತ್ತು ಅದರ ಆಯುಕ್ತ ಸಿಕಂದರ್ ಸುಲ್ತಾನಾ ರಾಜಾ ವಿರುದ್ದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಗವು ಪ್ರಕರಣ ದಾಖಲಿಸಿದೆ.
ನಿಸಾರ್ ದುರಾನಿ ನೇತೃತ್ವದ ನಾಲ್ಕು ಸದಸ್ಯರ ಚುನಾವಣಾ ಆಯೋಗ ಪೀಠವು ಮಾಜಿ ಪಿಎಂ ಇಮ್ರಾನ್ ಖಾನ್ ಹಾಗೂ ಅವರ ಸಹವರ್ತಿಗಳಾದ ಫವಾದ್ ಚೌಧರಿ, ಅಸಾದ್ ಉಮರ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದೆ. ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಜ್(ಪಿಎಂಎಲ್-ಎನ್) ಪರವಾಗಿ ಆಯೋಗ ವರ್ತಿಸುತ್ತಿದೆ ಎಂದು ಇಮ್ರಾನ್ ಖಾನ್ ಹಾಗೂ ಅವರ ಪಕ್ಷದ ನಾಯಕರು ಸತತ ಟೀಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಆಯೋಗವು ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನೋಟಿಸ್ ನೀಡಿತ್ತು.
ಮಂಗಳವಾರ ನಡೆದ ವಿಚಾರಣೆ ವೇಳೆ, ಭೌತಿಕ ಹಾಜರಾತಿಗೆ ವಿನಾಯ್ತಿ ನೀಡಬೇಕೆಂಬ ಇಮ್ರಾನ್ ಪಕ್ಷದ ನಾಯಕರ ಮನವಿಯನ್ನು ತಿರಸ್ಕರಿಸಿರುವ ಆಯೋಗವು, ಅರೆಸ್ಟ್ ವಾರಂಟ್ ಜತೆಗೆ 50 ಸಾವಿರ ರೂ. ಮೌಲ್ಯದ ಸೆಕ್ಯುರಿಟಿ ಬಾಂಡ್ ನೀಡುವಂತೆಯೂ ಸೂಚಿಸಿದೆ. ಅಲ್ಲದೇ ಮುಂದಿನ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿದೆ.
ಇದನ್ನೂ ಓದಿ | Imran Khan | ಚುನಾವಣೆಗೆ ಆಗ್ರಹಿಸಿ ದೀರ್ಘ ನಡಿಗೆ ಆರಂಭಿಸಿದ ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್