ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರದ ಮಾಂಟೆರಿ ಪಾರ್ಕ್ ಎಂಬಲ್ಲಿ ಗುಂಡಿನ ದಾಳಿ (California shooting) ನಡೆದಿದ್ದು, ಕನಿಷ್ಠ 9 ಜನರು ಮೃತಪಟ್ಟಿದ್ದಾರೆ. ಚೀನಾದ ಲೂನಾರ್ ನ್ಯೂ ಇಯರ್ ಆಚರಣೆಗೆ 60 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಸದ್ಯಕ್ಕೆ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಸಾವು ನೋವು ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ.
ಶೂಟಿಂಗ್ ಸಂಭವಿಸಿದ ರಸ್ತೆಯುದ್ದಕ್ಕೂ ಸೆಯುಂಗ್ ವೊನ್ ಚೋಯ್ ಒಡೆತನದ ಸೀಫುಡ್ ಬಾರ್ಬೆಕ್ಯೂ ರೆಸ್ಟೋರೆಂಟ್ ಹರಡಿಕೊಂಡಿದೆ. ಮೂವರು ಜನರು ಈ ರೆಸ್ಟೋರೆಂಟ್‌ಗೆ ನುಗ್ಗಿ ಡೋರ್ ಲಾಕ್ ಮಾಡುವಂತೆ ಒತ್ತಾಯಿಸಿದ್ದಾರೆ. ಅವರ ಪ್ರಕಾರ, ಶೂಟರ್ ಕೈಯಲ್ಲಿ ಮಷಿನ್ ಗನ್ ಇತ್ತು. ಬಹಳಷ್ಟು ಗುಂಡುಗಳು ಕೂಡ ಇದ್ದವು. ಈ ರೆಸ್ಟೋರೆಂಟ್‌ನ ಡಾನ್ಸ್ ಕ್ಲಬ್‌ನಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ. ಶೂಟರ್ಸ್ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ಇದನ್ನೂ ಓದಿ ಕ್ಯಾಲಿಫೋರ್ನಿಯಾದಲ್ಲಿ ಮನೆಗೇ ನುಗ್ಗಿ ಗುಂಡಿನ ದಾಳಿ; 6 ತಿಂಗಳ ಮಗು, ಅದರ ಅಮ್ಮ ಸೇರಿ 6 ಮಂದಿ ಬಲಿ
ಅಮೆರಿಕದಲ್ಲಿ ಇತ್ತೀಚೆಗೆ ಗುಂಡಿನ ದಾಳಿಗಳು ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಲೆ, ಥಿಯೇಟರ್ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅಪರಿಚಿತರು ಗುಂಡು ಹಾರಿಸಿ, ಹಲವಾರು ಮುಗ್ಧರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.