ಪಾಕಿಸ್ತಾನದಲ್ಲಿ ಹೋಳಿ ಹಬ್ಬ ಆಚರಣೆ ಮಾಡುತ್ತಿದ್ದ ಹಿಂದು ಧರ್ಮದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲಾಗಿದೆ(Holi In Pakistan University). ಲಾಹೋರ್ನಲ್ಲಿರುವ ಪಂಜಾಬ್ ಯೂನಿವರ್ಸಿಟಿ ಆವರಣದಲ್ಲಿ ಈ ಘಟನೆ ನಡೆದಿದೆ. ಇಂದು ಹೋಳಿ ಸಂಭ್ರಮದ ನಿಮಿತ್ತ, ವಿಶ್ವ ವಿದ್ಯಾಲಯದ ಆವರಣದಲ್ಲಿ ಬಣ್ಣ ಹಚ್ಚಿಕೊಳ್ಳುತ್ತ, ಖುಷಿಯಲ್ಲಿದ್ದ ಹಿಂದು ಸಮುದಾಯದ ವಿದ್ಯಾರ್ಥಿಗಳ ಮೇಲೆ ಇಸ್ಲಾಮಿ ಜಮಿಯತ್ ತುಲ್ಬಾ (IJT) ಸಂಘಟನೆಯವರು ಹಲ್ಲೆ ಮಾಡಿದ್ದಾರೆ. ಪರಿಣಾಮ 15 ಮಂದಿ ಗಾಯಗೊಂಡಿದ್ದಾರೆ. ಐಜೆಟಿ ಪಾಕಿಸ್ತಾನದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ. ಇದೀಗ ಹಿಂದು ವಿದ್ಯಾರ್ಥಿಗಳ ಮೇಲೆ ಲಾಠಿಯಿಂದ ಹಲ್ಲೆ ಮಾಡಿದ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ. ಹಿಂದು ವಿದ್ಯಾರ್ಥಿಗಳು ನೋವು ತಾಳಲಾರದೆ ಓಡಿದ್ದನ್ನೂ ವಿಡಿಯೊದಲ್ಲಿ ನೋಡಬಹುದು.
‘ಈ ವಿದ್ಯಾರ್ಥಿಗಳು ಯೂನಿವರ್ಸಿಟಿ ಆಡಳಿತದಿಂದ ಅನುಮತಿ ಪಡೆದ ಬಳಿಕವೇ ಹೋಳಿ ಹಬ್ಬ ಆಚರಣೆ ಮಾಡುತ್ತಿದ್ದರು. ಅದಕ್ಕೂ ಮೊದಲು ವಿದ್ಯಾರ್ಥಿಗಳು ತಮ್ಮ ಹೋಳಿ ಆಚರಣೆ ವಿಷಯವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಆಗಲೇ ಐಜೆಟಿ ಸಂಘಟನೆ ವಿದ್ಯಾರ್ಥಿಗಳು ಅವರಿಗೆ ಬೆದರಿಕೆ ಒಡ್ಡಲು ಶುರುಮಾಡಿದ್ದರು. ಇವರ ಬೆದರಿಕೆಗೆ ಜಗ್ಗದೆ ಹಿಂದು ವಿದ್ಯಾರ್ಥಿಗಳು ಹೋಳಿ ಆಡಲು ಪ್ರಾರಂಭ ಮಾಡುತ್ತಿದ್ದಂತೆ ಐಜೆಟಿ ಸದಸ್ಯರು ದಾಳಿ ನಡೆಸಿದ್ದಾರೆ ಎಂದು ಸಿಂಧ್ ಕೌನ್ಸಿಲ್ನ ಪ್ರಧಾನ ಕಾರ್ಯದರ್ಶಿ ಕಾಶಿಫ್ ಬ್ರೋಹಿ ತಿಳಿಸಿದ್ದಾರೆ.
ಐಜೆಟಿ ವಕ್ತಾರ ಹೇಳೋದೇನು?
ಯೂನಿವರ್ಸಿಟಿಯಲ್ಲಿ ಹಿಂದು ಸಮುದಾಯದ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಇಸ್ಲಾಮಿ ಜಮಿಯತ್ ತುಲ್ಬಾ ವಿದ್ಯಾರ್ಥಿಯ ಸಂಘಟನೆಯ ವಕ್ತಾರ ಇಬ್ರಾಹಿಂ ಶಾಹೀದ್ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಕೃತ್ಯ ನಮ್ಮ ಐಜೆಟಿ ಸಂಘಟನೆಯದ್ದಲ್ಲ. ಬೇರೆ ಯಾರೋ ದಾಳಿ ಮಾಡಿ, ಅಲ್ಲಿ ನಮ್ಮ ಸಂಘಟನೆ ಹೆಸರನ್ನು ಹೇಳಿರಬಹುದು. ನಾವು ಯಾವಾಗಲೂ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳನ್ನು, ಅವರ ಹಬ್ಬಗಳನ್ನು ಗೌರವಿಸುತ್ತೇವೆ’ ಎಂದು ಹೇಳಿಕೊಂಡಿದ್ದಾರೆ. ಇದು ನಮ್ಮ ಸಂಘಟನೆಯ ಕೃತ್ಯ ಅಲ್ಲವೇ ಅಲ್ಲ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಹೊಸದಲ್ಲ. ಅದರಲ್ಲೂ ಹಿಂದುಗಳು ಹೆಚ್ಚಾಗಿರುವ ಸಿಂಧ್ ಪ್ರಾಂತ್ಯದಲ್ಲಿ ಅವರ ಮೇಲಿನ ಶೋಷಣೆಯೂ ಹೆಚ್ಚಾಗಿದೆ. ಅಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಂತರವಾಗಿ ದಮನ ಮಾಡಲಾಗುತ್ತಿದೆ. ಪಾಕಿಸ್ತಾನ ಹಿಂದುಗಳನ್ನು ಅದೆಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂಬುದು ಅನೇಕ ಸಲ ಜಗಜ್ಜಾಹೀರಾಗಿದೆ.