ಸಿಡ್ನಿ: ಒಂದು ನಿಮಿಷದಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ಪುಶ್‌ಅಪ್ಸ್ ಮಾಡಬಹುದು? ಸರಾಸರಿ 15-20 ಪುಶ್‌ಅಪ್ಸ್ ಮಾಡಬಹುದು. ತುಂಬ ವೇಗವಾಗಿ ಮಾಡಿದ್ದಾರೆ, ನಿತ್ಯ ಮಾಡಿ ಅಭ್ಯಾಸವಿದೆ ಎಂದರೆ 20-25 ಪುಶ್‌ಅಪ್ಸ್ ಮಾಡಬಹುದು. ಆದರೆ, ಆಸ್ಟ್ರೇಲಿಯಾದ ಲುಕಾಸ್ ಹೆಲ್ಮ್‌ಕೆ (Lucas Helmke) ಎಂಬ 33 ವರ್ಷದ ವ್ಯಕ್ತಿಯು ನಿಮಿಷಕ್ಕೆ 53 ಪುಶ್‌ಅಪ್ಸ್‌ಗಳಂತೆ ಒಂದು ಗಂಟೆಯಲ್ಲಿ 3,206 ಪುಶ್‌ಅಪ್ಸ್‌ಗಳನ್ನು (Push Ups Record) ಮಾಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್ ನಿವಾಸಿಯಾಗಿರುವ ಲುಕಾಸ್ ಹೆಲ್ಮ್‌ಕೆ ಅವರು ತಮ್ಮ ಜಿಮ್‌ನಲ್ಲಿಯೇ ಒಂದು ಗಂಟೆಯಲ್ಲಿ 3,206 ಪುಶ್‌ಅಪ್ಸ್ ಮಾಡಿದ್ದಾರೆ. ಆ ಮೂಲಕ ಇವರು ತಮ್ಮದೇ ದೇಶದ ಡೇನಿಯಲ್ ಸ್ಕ್ಯಾಲಿ ಎಂಬುವರ ದಾಖಲೆಯನ್ನು ಮುರಿದಿದ್ದಾರೆ. ಡೇನಿಯಲ್ ಸ್ಕ್ಯಾಲಿ ಅವರು 2018ರಲ್ಲಿ 3,182 ಪುಶ್‌ಅಪ್ಸ್‌ಗಳನ್ನು ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದರು. ಕಳೆದ ಐದು ವರ್ಷಗಳಲ್ಲಿ ಯಾರೂ ಇವರ ದಾಖಲೆ ಮುರಿದಿರಲಿಲ್ಲ. ಆದರೆ, ಈಗ ಲುಕಾಸ್ ಅವರು ಒಂದು ಗಂಟೆಯಲ್ಲಿ ಹೆಚ್ಚು ಪುಶ್‌ಅಪ್ಸ್ ಮಾಡಿದ ವ್ಯಕ್ತಿ ಎಂಬ ದಾಖಲೆಗೆ ಭಾಜನರಾಗಿದ್ದಾರೆ.
ಮಗನಿಗೆ ಸ್ಫೂರ್ತಿ ತುಂಬ ಸತತ ಪ್ರಯತ್ನ
ಲುಕಾಸ್ ಹೆಲ್ಮ್‌ಕೆ ಅವರಿಗೆ ಒಂದು ವರ್ಷದ ಮಗನಿದ್ದಾನೆ. ಆತನಿಗೆ ಜೀವನದಲ್ಲಿ ಯಾವುದೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ತಿಳಿಸಲು, ಮಗ ಜೀವನದಲ್ಲಿ ಯಾವುದಕ್ಕೂ ಹಿಂಜರಿಯಬಾರದು, ಹಿಂದಡಿ ಇಡಬಾರದು ಎಂಬುದನ್ನು ತಿಳಿಸಲು ಸತತ ಮೂರು ವರ್ಷಗಳಿಂದ ಪ್ರಯತ್ನ ಮಾಡಿ, ಈಗ ಗಿನ್ನಿಸ್ ದಾಖಲೆ ಬರೆದಿದ್ದಾರೆ. ನಿತ್ಯವೂ ಬೆಳಗ್ಗೆ ಎದ್ದು ಲುಕಾಸ್ ಹೆಲ್ಮ್‌ಕೆ ಅವರು ಪುಶ್‌ಅಪ್ಸ್ ಮಾಡುತ್ತಿದ್ದರು. ಇದನ್ನೇ ಸತತವಾಗಿ ಪ್ರಾಕ್ಟೀಸ್ ಮಾಡಿ, ಕೊನೆಗೆ ಮಹೋನ್ನತವಾದುದನ್ನು ಸಾಧಿಸಿದ್ದಾರೆ.
ದಿನಕ್ಕೊಂದು ಗುರಿಯನ್ನು ಇಟ್ಟುಕೊಂಡು, ಸಮಯ ನಿಗದಿ ಮಾಡಿಕೊಂಡು ಲುಕಾಸ್ ಹೆಲ್ಮ್‌ಕೆ ಪುಶ್‌ಅಪ್ಸ್ ಮಾಡುತ್ತಿದ್ದರು. 30 ಸೆಕೆಂಡ್‌ಗೆ 26 ಪುಶ್‌ಅಪ್‌ಗಳನ್ನು ಮಾಡಬೇಕು ಎಂಬ ಗುರಿಯೊಂದಿಗೆ ಅವರು ದಿನವನ್ನು ಆರಂಭಿಸುತ್ತಿದ್ದರು. ನಿಧಾನಕ್ಕೆ ಪುಶ್‌ಅಪ್ಸ್‌ಗಳ ಸಂಖ್ಯೆ ಹೆಚ್ಚಾಯಿತು. ಲುಕಾಸ್ ಅವರು ಕೊನೆಗೆ ಗುರಿ ಸಾಧಿಸಿದರು. 30 ಸೆಕೆಂಡ್‌ಗಳಲ್ಲಿ ಸರಾಸರಿ 26.7 ಪುಶ್‌ಅಪ್ಸ್ ಮಾಡುವುದನ್ನು ಸಿದ್ಧಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಅವರು, “ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ನನ್ನ ಮಗನಿಗೆ ತಿಳಿಸಲು ಇಂತಹ ಪ್ರಯತ್ನಕ್ಕೆ ಕೈ ಹಾಕಿದೆ. ಇದರಲ್ಲಿ ಕೊನೆಗೂ ನನಗೆ ಯಶ ಸಿಕ್ಕಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Narendra Modi: ಗಿನ್ನಿಸ್ ದಾಖಲೆ ಬರೆದ ಅಸ್ಸಾಂ ಬಿಹು ನೃತ್ಯ, ಕಲಾವಿದರಿಗೆ ಮೋದಿ ಅಭಿನಂದನೆ