Site icon Vistara News

Baba Vanga: ಕ್ಯಾನ್ಸರ್‌ ಲಸಿಕೆ, ಆರ್ಥಿಕ ಬಿಕ್ಕಟ್ಟು; ನಿಜವಾದ ಬಾಬಾ ವಂಗಾ ಭವಿಷ್ಯಗಳಿವು

vanga

vanga

ನವದೆಹಲಿ: ಬಾಬಾ ವಂಗಾ (Baba Vanga)-ಈ ಹೆಸರನ್ನು ಇತ್ತೀಚಿನ ದಿನಗಳಲ್ಲಿ ಕೇಳದವರು ಅಪರೂಪ. ಯಾಕೆಂದರೆ ಬಲ್ಗೇರಿಯಾದ ಈ ಅಂಧ ಮಹಿಳೆಯು ಹಲವು ವರ್ಷಗಳ ಹಿಂದೆಯೇ ನುಡಿದಿದ್ದ ಬಹುತೇಕ ಭವಿಷ್ಯವಾಣಿ ನಿಜವಾಗಿವೆ. ಈ ಕಾರಣಕ್ಕೆ ಬಾಬಾ ವಂಗಾ ನುಡಿದ ಭವಿಷ್ಯದ ಬಗ್ಗೆ ಬಹುತೇಕರು ಕುತೂಹಲದ ದೃಷ್ಟಿಯಿಂದ ನೋಡುತ್ತಾರೆ. ಇದಕ್ಕೂ ಮೊದಲು ಅಮೆರಿಕದ ಮೇಲೆ ಉಗ್ರರ ದಾಳಿ, ಬರಾಕ್‌ ಒಬಾಮಾ ಅಮೆರಿಕ ಅಧ್ಯಕ್ಷರಾಗುವುದು, ಬ್ರೆಕ್ಸಿಟ್‌, ಡಯಾನಾ ಸಾವು ಸೇರಿ ಬಾಬಾ ವಂಗಾ ನುಡಿದ ಹಲವು ಭವಿಷ್ಯಗಳು ನಿಜವಾಗಿವೆ. ಇದೀಗ ಈ ಸಾಲಿಗೆ 2024ರ ಕೆಲವೊಂದಿಷ್ಟು ಅಂಶಗಳೂ ಸೇರಿವೆ. ಈ ಪೈಕಿ ಜಪಾನ್ ಮತ್ತು ಇಂಗ್ಲೆಂಡ್‌ಗಳಿಗೆ ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ರಷ್ಯಾದ ಕ್ಯಾನ್ಸರ್ ಲಸಿಕೆಯ ಅಭಿವೃದ್ಧಿ ಪ್ರಮುಖವಾದುದು. ಹಾಗಾದರೆ ಬಾಬಾ ವಂಗಾ ನುಡಿದ ಯಾವೆಲ್ಲ ಪ್ರಮುಖ ಭವಿಷ್ಯ ನಿಜವಾಗಿದೆ? ಇಲ್ಲಿದೆ ವಿವರ:

ರಷ್ಯಾದ ಕ್ಯಾನ್ಸರ್‌ ವಿರೋಧಿ ಲಸಿಕೆ

ʼʼರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್‌ ವಿರೋಧಿ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅದು ಶೀಘ್ರದಲ್ಲೇ ರೋಗಿಗಳಿಗೆ ಲಭ್ಯವಾಗಲಿದೆʼʼ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಇತ್ತೀಚೆಗೆ ತಿಳಿಸಿದ್ದಾರೆ. “ನಾವು ಹೊಸ ಪೀಳಿಗೆಯ ಕ್ಯಾನ್ಸರ್ ಲಸಿಕೆ ಮತ್ತು ಇಮ್ಯುನೊಮೋಡ್ಯುಲೇಟರಿ ಔಷಧಗಳ ತಯಾರಿಯ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಗಳಿಸಿದ್ದೇವೆ. ಶೀಘ್ರದಲ್ಲೇ ಅವುಗಳನ್ನು ವೈಯಕ್ತಿಕ ಚಿಕಿತ್ಸೆಯ ಬಳಸಲಾಗುವುದುʼʼ ಎಂದು ಪುಟಿನ್ ವಿವರಿಸಿದ್ದರು. ಆದರೆ ಇದು ಯಾವ ರೀತಿಯ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ. ಬಾಬಾ ವಂಗಾ ಅವರು 2024ರಲ್ಲಿ ಕ್ಯಾನ್ಸರ್‌, ಅಲ್ಝಿಮರ್ಸ್‌ನಂತಹ ಮಾರಕ ಕಾಯಿಲೆಗಳಿಗೆ ಔಷಧ, ಚಿಕಿತ್ಸೆ ಸಿಗಲಿದೆ ಎಂದು ಹೇಳಿದ್ದರು.

ಜಪಾನ್‌, ಇಂಗ್ಲೆಂಡ್‌ನ ಆರ್ಥಿಕ ಕುಸಿತ

2024ರಲ್ಲಿ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಭಾರೀ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಹೆಚ್ಚುತ್ತಿರುವ ಸಾಲದ ಮಟ್ಟ ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಂತಹ ಅಂಶಗಳಿಂದ ಇದು ಸಂಭವಿಸುತ್ತದೆ ಎಂದು ಹೇಳಿದ್ದರು. ಅದರ ಲಕ್ಷಣ ಈಗ ಗೋಚರಿಸುತ್ತಿದೆ. ಹೆಚ್ಚಿನ ಹಣದುಬ್ಬರದ ಕಾರಣದಿಂದ ಇಂಗ್ಲೆಂಡ್‌ ಕಳೆದ ವರ್ಷದ ಕೊನೆಯಲ್ಲಿ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ಜತೆಗೆ ಜಪಾನ್‌ನ ಆರ್ಥಿಕತೆಯು ಸತತ ಎರಡು ತ್ರೈ ಮಾಸಿಕಗಳಲ್ಲಿ ಕುಗ್ಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರ ಕೊನೆಯ ಮೂರು ತಿಂಗಳಲ್ಲಿ ದೇಶದ ಜಿಡಿಪಿ ಶೇಕಡಾ 0.4ರಷ್ಟು ಕುಸಿತ ಕಂಡಿದೆ.

ಬಾಬಾ ವಂಗಾ ನುಡಿದ ಪ್ರಮುಖ ಭವಿಷ್ಯಗಳು

ಇದನ್ನೂ ಓದಿ: Baba Vanga Predictions | 2023ರಲ್ಲಿ ಸೌರ ಸುನಾಮಿ, ಅಣ್ವಸ್ತ್ರ ಸ್ಫೋಟ, ಏಲಿಯನ್ಸ್‌ ದಾಳಿ, ಲ್ಯಾಬ್‌ನಲ್ಲಿ ಶಿಶು, ಬಾಬಾ ವಂಗಾ ಭವಿಷ್ಯದಲ್ಲೇನಿದೆ?

ಯಾರು ಈ ಬಾಬಾ ವಂಗಾ?

ಬಾಬಾ ವಂಗಾ ಬಲ್ಗೇರಿಯಾದ ಮಹಿಳೆ. ಆಕೆಯ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವ್. 1911ರಲ್ಲಿ ಜನಿಸಿದ ಅವರು ಹನ್ನೆರಡನೆಯ ವಯಸ್ಸಿನಲ್ಲಿ ಚಂಡಮಾರುತದಿಂದ ಉಂಟಾದ ಧೂಳಿನಿಂದ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡರು. ಬಳಿಕ ಭವಿಷ್ಯ ನುಡಿಯಲು ಪ್ರಾರಂಭಿಸಿದರು. ಅವರು 1996ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು. ಅದಾಗ್ಯೂ 5079 ವರ್ಷಗಳವರೆಗಿನ ಭವಿಷ್ಯವಾಣಿಗಳನ್ನು ಅವರು ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version