Site icon Vistara News

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಂದೂಕುಧಾರಿಗಳ ದಾಳಿ; ಕನಿಷ್ಠ 23 ಮಂದಿ ಸಾವು

Balochistan

ಇಸ್ಲಾಮಾಬಾದ್‌: ಪಾಕಿಸ್ತಾನ (Southwest Pakistan)ದ ಬಲೂಚಿಸ್ತಾನ (Balochistan)ದಲ್ಲಿ ಸೋಮವಾರ (ಆಗಸ್ಟ್‌ 26) ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ʼʼಬಲೂಚಿಸ್ತಾನ ಪ್ರಾಂತ್ಯದ ಮುಸಖೈಲ್ ಜಿಲ್ಲೆಯಲ್ಲಿ ಭಯೋತ್ಪಾದಕರು ಹಲವು ಬಸ್ಸುಗಳು, ಟ್ರಕ್‌ಗಳು ಮತ್ತು ವ್ಯಾನ್‌ಗಳನ್ನು ನಿಲ್ಲಿಸಿ ಅದರಲ್ಲಿನ ಪ್ರಯಾಣಿಕರ ಜನಾಂಗೀಯತೆಯನ್ನು ಪರಿಶೀಲಿಸಿದ ನಂತರ ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.

“ಪಂಜಾಬ್ ಮತ್ತು ಬಲೂಚಿಸ್ತಾನವನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಭಯೋತ್ಪಾದಕರು ಹಲವು ಬಸ್ಸುಗಳು, ಟ್ರಕ್‌ಗಳು ಮತ್ತು ವ್ಯಾನ್‌ಗಳ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಾಯಗೊಂಡಿದ್ದಾರೆ” ಎಂದು ಮುಸಖೈಲ್‌ನ ಹಿರಿಯ ಅಧಿಕಾರಿ ನಜೀಬುಲ್ಲಾ ಕಾಕರ್ ಹೇಳಿದ್ದಾರೆ. ಮುಸಖೈಲ್‌ನ ರಾರಾಶಮ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಹೆದ್ದಾರಿಯನ್ನು ತಡೆದು ವಾಹನಗಳಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ದಾಳಿ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದು, ಈ ವೇಳೆ 10 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಲೂಚ್ ಲಿಬರೇಶನ್ ಆರ್ಮಿಯ ಕೈವಾಡ?

ಜಿಲ್ಲೆಯ ಮತ್ತೊಬ್ಬ ಹಿರಿಯ ಅಧಿಕಾರಿ ಹಮೀದ್ ಜೆಹ್ರಿ ಮಾತನಾಡಿ ಘಟನೆಯ ಹಿಂದೆ ಬಲೂಚ್ ಲಿಬರೇಶನ್ ಆರ್ಮಿ (Baloch Liberation Army-BLA)ಯ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. “ಈ ಘಟನೆಯ ಹಿಂದೆ ಬಿಎಲ್ಎ ಭಯೋತ್ಪಾದಕರು ಇದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ” ಎಂದು ಅವರು ಹೇಳಿದ್ದಾರೆ. ಬಿಎಲ್ಎ ಈ ಪ್ರದೇಶದ ಅತ್ಯಂತ ಸಕ್ರಿಯ ಉಗ್ರಗಾಮಿ ಪ್ರತ್ಯೇಕತಾವಾದಿ ಗುಂಪು.

ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಘಟನೆಯನ್ನು ಖಂಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಬಲೂಚಿಸ್ತಾನ ಸರ್ಕಾರವು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ ಪ್ರತ್ಯೇಕತಾವಾದಿ ಗುಂಪು ಹೆದ್ದಾರಿಗಳಿಂದ ದೂರವಿರಲು ಜನರಿಗೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ಆದರೆ ಯಾವುದೇ ಗುಂಪು ಇದುವರೆಗೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ದೇಶದ ಪೂರ್ವ ಪಂಜಾಬ್ ಪ್ರದೇಶದ ಕಾರ್ಮಿಕರು ಮತ್ತು ಇತರರನ್ನು ಪ್ರಾಂತ್ಯವನ್ನು ತೊರೆಯುವಂತೆ ಒತ್ತಾಯಿಸಿ ದಾಳಿ ನಡೆಸುತ್ತಿವೆ.

ಇದನ್ನೂ ಓದಿ: Operation Dara-e-Bolan: 78 ಪಾಕಿಸ್ತಾನಿ ಸೈನಿಕರನ್ನು ಕೊಂದ ಬಲೂಚ್ ಲಿಬರೇಶನ್ ಆರ್ಮಿ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಲೂಚಿಸ್ತಾನದ ಕೆಚ್ ಜಿಲ್ಲೆಯ ತುರ್ಬತ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಪಂಜಾಬ್ ಮೂಲದ ಆರು ಕಾರ್ಮಿಕರನ್ನು ಗುಂಡಿಕ್ಕಿ ಕೊಂದಿದ್ದರು. ಮೃತರು ದಕ್ಷಿಣ ಪಂಜಾಬ್‌ನ ವಿವಿಧ ಪ್ರದೇಶಗಳಿಗೆ ಸೇರಿದವರಾಗಿದ್ದು, ಅವರ ಜನಾಂಗೀಯ ಹಿನ್ನೆಲೆಯೇ ಹತ್ಯೆಗೆ ಕಾರಣ ಎನ್ನಲಾಗಿದೆ. 2015ರಲ್ಲಿ ತುರ್ಬತ್ ಬಳಿಯ ಕಾರ್ಮಿಕರ ಶಿಬಿರದ ಮೇಲೆ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ 20 ಕಾರ್ಮಿಕರು ಸಾವನ್ನಪ್ಪಿದ್ದರು. ಮೃತರು ಸಿಂಧ್ ಮತ್ತು ಪಂಜಾಬ್ ಮೂಲದವರಾಗಿದ್ದರು.

Exit mobile version