Site icon Vistara News

Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್

Bangladesh Unrest hindus protest

ಢಾಕಾ: ಕಳೆದ ಮೂರು ದಿನಗಳಲ್ಲಿ ಬಾಂಗ್ಲಾದೇಶದಾದ್ಯಂತ (Bangladesh Unrest) ನಡೆದ ವಿವಿಧ ದಾಳಿಗಳು ಮತ್ತು ಘರ್ಷಣೆಗಳಲ್ಲಿ (Bangladesh violence) ಕನಿಷ್ಠ 232 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಾಗಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂ (Hindus) ಸಮುದಾಯವನ್ನೇ ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಅಮಾಯಕ ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರಗಳು (hindus protest) ನಿರಂತರವಾಗಿವೆ.

ಅಲ್ಲಿನ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಆಗಸ್ಟ್ 5ರಂದು ರಾಜೀನಾಮೆ ನೀಡಿ ಭಾರತಕ್ಕೆ (India) ಪಲಾಯನ ಮಾಡಿದ್ದರು. ಅವರ ಪದಚ್ಯುತಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಕಳೆದ ಮೂರು ವಾರಗಳಿಂದ ಬಾಂಗ್ಲಾದೇಶದಲ್ಲಿ ನಡೆದ ತೀವ್ರ ಮತ್ತು ರಕ್ತಸಿಕ್ತ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾಯಿತು.

ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದ ಮಧ್ಯಂತರ ಸರ್ಕಾರ ದೇಶದ ಆಡಳಿತವನ್ನು ವಹಿಸಿಕೊಂಡಿದೆ. ವರದಿಗಳು ತಿಳಿಸುವಂತೆ ಇದುವರೆಗೆ 469 ಜನ ಗಲಭೆಗಳಲ್ಲಿ ಸತ್ತಿದ್ದಾರೆ. ಸ್ಥಳೀಯ ಮಾಧ್ಯಮಗಳು ಹೇಳುವಂತೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ತೀವ್ರ ಕಿರುಕುಳ ಸೃಷ್ಟಿಸಲಾಗುತ್ತಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಯಭೀತರಾದ ಬಾಂಗ್ಲಾದೇಶಿಗಳು ಅಕ್ರಮವಾಗಿ ಭಾರತಕ್ಕೆ ದಾಟಲು ಹಲವಾರು ಪ್ರಯತ್ನಗಳನ್ನು ನಡೆಸಿದರು. ಆದರೆ ಅವರನ್ನು ಬಿಎಸ್‌ಎಫ್‌ ಹಿಮ್ಮೆಟ್ಟಿಸಿದೆ.

ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ, ಶೇಖ್ ಹಸೀನಾ ಅವರು ದೇಶದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ಶೇಖ್‌ ಹಸೀನಾಗೆ ಆಶ್ರಯ ನೀಡಿರುವ ಹಿನ್ನೆಲೆಯಲ್ಲಿ, ಭಾರತವು ತನ್ನ ನೆರೆಹೊರೆಯವರೊಂದಿಗೆ ಸಂಬಂಧವನ್ನು ಹಾಳುಮಾಡುವ ಅಪಾಯದಲ್ಲಿದೆ ಎಂದು ಎಚ್ಚರಿಸಿದೆ.

ಜುಲೈ 16 ಮತ್ತು ಆಗಸ್ಟ್ 4ರ ನಡುವಿನ ಮೀಸಲಾತಿ ವಿರೋಧಿ ವಿದ್ಯಾರ್ಥಿ ಚಳುವಳಿಗಳ ವೇಳೆ ಒಟ್ಟು 328 ಸಾವುಗಳು ವರದಿಯಾಗಿವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಹೀಗಾಗಿ, ಕಳೆದ 23 ದಿನಗಳಲ್ಲಿ ಒಟ್ಟು ಸಾವಿನ ಸಂಖ್ಯೆ 560 ಕ್ಕೆ ತಲುಪಿದೆ.

ಈ ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿರ್ಗಮನದ ನಂತರ ದೇಶದ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಶುಕ್ರವಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೂರಾರು ಜನ ಹಿಂದೂಗಳ ಪ್ರತಿಭಟನೆ ನಡೆಸಿದರು. ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂ ಮನೆಗಳು, ವ್ಯಾಪಾರಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆದಿದೆ. ಇವುಗಳಲ್ಲಿ ಶಾಲಾ ಶಿಕ್ಷಕಿಯೊಬ್ಬರು ಸಾವನ್ನಪ್ಪಿ ಕನಿಷ್ಠ 45 ಮಂದಿ ಗಾಯಗೊಂಡರು.

ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಇದು ಕಳೆದ ತಿಂಗಳು ಕೋಟಾ ವಿರೋಧಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಮುಸ್ಲಿಮರ ಕೋಪದ ಕೇಂದ್ರಬಿಂದುವಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Exit mobile version