Site icon Vistara News

Bangladesh Unrest: ಬಾಂಗ್ಲಾದಲ್ಲಿ 1971ರ ಪಾಕ್‌ ಸೇನೆ ಶರಣಾಗತಿ ಬಿಂಬಿಸುವ ಪ್ರತಿಮೆ ಧ್ವಂಸ; ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ

Bangladesh Unrest

ಢಾಕಾ: ಶೇಖ್ ಹಸೀನಾ (Sheikh Hasina) ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿ ಭಾರತಕ್ಕೆ ಪಲಾಯನ ಮಾಡಿದ ನಂತರವೂ ಬಾಂಗ್ಲಾದೇಶದಲ್ಲಿ ಗಲಭೆ ಮುಂದುವರಿದಿದೆ. ಈ ಮಧ್ಯೆ ಬಾಂಗ್ಲಾದೇಶದ ವಿಮೋಚನೆಯ ನೆನಪಿಗಾಗಿ ಸ್ಥಾಪಿಸಿದ್ದ, 1971ರ ಪಾಕ್ ಸೇನೆಯ ಶರಣಾಗತಿಯನ್ನು ಪ್ರತಿಬಿಂಬಿಸುವ ಪ್ರತಿಮೆಯನ್ನು ಭಾರತ ವಿರೋಧಿ ಗಲಭೆಕೋರರು ನಾಶಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ (Shashi Tharoor) ಹೇಳಿದ್ದಾರೆ. 1971ರ ಯುದ್ಧದ ನಂತರ ಪಾಕಿಸ್ತಾನ ಶರಣಾದ ಕ್ಷಣವನ್ನು ಚಿತ್ರಿಸುವ ಪ್ರತಿಮೆಗಳನ್ನು ಧ್ವಂಸಗೊಳಿಸಿರುವ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ (Bangladesh Unrest).

ʼʼಮುಜೀಬ್ ನಗರದ ಶಹೀದ್ ಸ್ಮಾರಕ ಸಂಕೀರ್ಣದಲ್ಲಿ 1971ರ ಐತಿಹಾಸಿಕ ಘಟನೆಯನ್ನು ಬಿಂಬಿಸುವ ಪ್ರತಿಮೆಗಳನ್ನು ಭಾರತ ವಿರೋಧಿ ದುಷ್ಕರ್ಮಿಗಳಿಂದ ನಾಶ ಪಡಿಸಿರುವುದನ್ನು ನೋಡಿ ದುಃಖವಾಗಿದೆ” ಎಂದು ತಿರುವನಂತಪುರಂನ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬರೆದುಕೊಂಡಿದ್ದಾರೆ.

ʼʼಬಾಂಗ್ಲಾದಲ್ಲಿ ಹಿಂದೂ ಮನೆಗಳ ಮೇಲೆ ದಾಳಿ ಮುಂದುವರಿದಿದೆ. ಈ ಮಧ್ಯೆ ಕೆಲವು ಮುಸ್ಲಿಂ ನಾಗರಿಕರು ಅಲ್ಪಸಂಖ್ಯಾತರ ಮನೆ, ಸಾಂಸ್ಕೃತಿಕ ಕೇಂದ್ರ ಮತ್ತು ಪೂಜಾ ಸ್ಥಳಗಳನ್ನು ರಕ್ಷಿಸುತ್ತಿದ್ದಾರೆ ಎಂಬ ವರದಿಯೂ ಬರುತ್ತಿದೆʼʼ ಎಂದು ಅವರು ಹೇಳಿದ್ದಾರೆ.

1971ರಲ್ಲಿ ಏನಾಗಿತ್ತು?

1971ರ ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಸೇನೆ ವಿರುದ್ಧ ಹೋರಾಡಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿತು. ಪಾಕಿಸ್ತಾನ ಸೇನೆಯ ಮೇಜರ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಭಾರತೀಯ ಸೇನೆ ಮತ್ತು ಬಾಂಗ್ಲಾದೇಶದ ಮುಕ್ತಿ ಬಾಹಿನಿಯ ಶರಣಾಗತಿ ಪತ್ರಕ್ಕೆ ಸಹಿ ಹಾಕಿರುವುದನ್ನು ಈ ಪ್ರತಿಮೆ ಚಿತ್ರಿಸಿದೆ. ಮೇಜರ್ ಜನರಲ್ ನಿಯಾಜಿ ತನ್ನ 93,000 ಸೈನಿಕರೊಂದಿಗೆ ಭಾರತದ ಪೂರ್ವ ಕಮಾಂಡ್‌ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ಶರಣಾದರು. ಇದು ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಮಿಲಿಟರಿ ಶರಣಾಗತಿ ಎನಿಸಿಕೊಂಡಿತ್ತು. ಈ ಘಟನೆಯನ್ನು ಸ್ಮರಿಸಲು ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.

ಇದನ್ನೂ ಓದಿ: Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

ಅಲ್ಪಸಂಖ್ಯಾತರ ಮೇಲೆ ದಾಳಿ

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಹಲವು ಮಂದಿ ತೊಂದರೆಗೆ ಒಳಗಾಗಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ರಚಿಸಲಾಗಿದೆ. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

Exit mobile version