ಲಂಡನ್: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ಬ್ರಿಟನ್‌ನ ಮಾಧ್ಯಮ ಸಂಸ್ಥೆ ಬಿಬಿಸಿ (BBC) ವರದಿ ಪ್ರಸಾರ ಮಾಡಿತ್ತು. ಇದೀಗ ಈ ವರದಿ ಬಗ್ಗೆ ಅಲ್ಲಿನ ಸಂಸತ್ತಿನಲ್ಲಿ ಚರ್ಚೆ ನಡೆದಿದೆ. ಬಿಬಿಸಿ ಸತ್ಯ ಮರೆಮಾಚಿ ಅಸ್ಪಷ್ಟ ವರದಿ ಪ್ರಸಾರ ಮಾಡಿದೆ. ಇದು ಬಿಬಿಸಿಯ ಪಕ್ಷಪಾತ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಇದು ಖಂಡನೀಯ ಎಂದು ಸಂಸದ ಬಾಬ್ ಬ್ಲ್ಯಾಕ್‌ಮ್ಯಾನ್ (Bob Blackman) ಧ್ವನಿ ಎತ್ತಿದ್ದಾರೆ.
ಬಾಬ್ ಬ್ಲ್ಯಾಕ್‌ಮ್ಯಾನ್ ಹೇಳಿದ್ದೇನು?
ಬಿಬಿಸಿ ತನ್ನ ವರದಿಯಲ್ಲಿ ಅಯೋಧ್ಯೆಯ ಮಸೀದಿಯನ್ನು ಕೆಡವಿ ರಾಮ ಮಂದಿರ ನಿರ್ಮಿಸಲಾಗಿದೆ ಎಂದು ಉಲ್ಲೇಖಿಸಿದೆ. ಆದರೆ ಬಹಳ ಹಿಂದಿನಿಂದಲೂ ಅಲ್ಲಿ ರಾಮನ ದೇವಸ್ಥಾನವಿತ್ತು ಎನ್ನುವ ಸತ್ಯವನ್ನು ಮರೆಮಾಚಲಾಗಿದೆ ಎಂದು ಎಂಪಿ ಬ್ಲ್ಯಾಕ್‌ಮ್ಯಾನ್ ಹೇಳಿದ್ದಾರೆ.
🛕Constituents have raised concerns surrounding the BBC's biased reporting of the #RamMandir temple.
— Bob Blackman (@BobBlackman) February 2, 2024
🇬🇧🤝🇮🇳 As an avid supporter of the rights of Hindus, this article has caused great disharmony.
🌏The BBC must be able to provide a decent record of what is going across the world. pic.twitter.com/htSzyey2u4
ʼʼಕಳೆದ ವಾರ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿದೆ. ಭಗವಾನ್ ರಾಮನ ಜನ್ಮಸ್ಥಳವಾದ ಇಲ್ಲಿ ನಡೆದ ಈ ಸಮಾರಂಭದಿಂದ ಭಾರತ ಮಾತ್ರವಲ್ಲ ವಿಶ್ವದಾದ್ಯಂತದ ಇರುವ ಹಿಂದೂಗಳು ಸಂತಸ ಹೊಂದಿದ್ದರು. ಆದರೆ ಅತ್ಯಂತ ದುಃಖಕರ ಸಂಗತಿಯೆಂದರೆ ಬಿಬಿಸಿ ತನ್ನ ವರದಿಯಲ್ಲಿ ಅಯೋಧ್ಯೆ ಮಸೀದಿಯನ್ನು ನಾಶಪಡಿಸಿದ ಸ್ಥಳ ಎಂದು ವರದಿ ಮಾಡಿದೆ. 2,000 ವರ್ಷಗಳಿಗಿಂತಲೂ ಹೆಚ್ಚು ಕಾಲ ಇಲ್ಲಿ ರಾಮನ ದೇವಾಲಯವಿತ್ತು ಮತ್ತು ಮುಸ್ಲಿಮರಿಗೆ ಪಟ್ಟಣದ ಪಕ್ಕದಲ್ಲಿ ಮಸೀದಿಯನ್ನು ನಿರ್ಮಿಸಲು ಐದು ಎಕರೆ ಸ್ಥಳವನ್ನು ನಿಗದಿಪಡಿಸಲಾಗಿದೆ ಎಂಬ ಅಂಶವನ್ನು ಬಿಬಿಸಿ ಮರೆತಿದೆʼʼ ಎಂದು ಅವರು ವಾಗ್ದಾಳಿ ನಡೆಸಿದರು.
ʼʼಈ ವಿಷಯದ ಕುರಿತು ಚರ್ಚೆ ನಡೆಸಲು ಸಂಸತ್ತು ಅವಕಾಶ ನೀಡಬೇಕು. ಬಿಸಿಸಿಯ ಪಕ್ಷಪಾತ ಧೋರಣೆ ಮತ್ತು ವಸ್ತುನಿಷ್ಠ ವರದಿಯನ್ನು ಒದಗಿಸಲು ವಿಫಲವಾಗಿರುವ ಬಗ್ಗೆ ಮಾತುಕತೆಗೆ ಸಮಯ ನೀಡಬೇಕುʼʼ ಎಂದು ಆಗ್ರಹಿಸಿದರು. “ಪ್ರಪಂಚದಾದ್ಯಂತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯೋಗ್ಯವಾದ ದಾಖಲೆಯನ್ನು ಒದಗಿಸಲು ಬಿಬಿಸಿ ಸಮರ್ಥವಾಗಿರಬೇಕು” ಎಂದು ಅವರು ಹೇಳಿದರು.
ಇದು ಮೊದಲ ಸಲವಲ್ಲ
ಈ ಹಿಂದೆಯೂ ಬಿಬಿಸಿ ಭಾರತ ವಿರೋಧಿ ನಿಲುವು ತಳೆದಿತ್ತು. ಕೆಲವು ತಿಂಗಳ ಹಿಂದೆ ಬಿಬಿಸಿಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಗುಜರಾತ್ ಗಲಭೆಗಳ ಕುರಿತು ಅದು ಇತ್ತೀಚೆಗೆ ಬಿಡುಗಡೆ ಮಾಡಿದ 2 ಭಾಗಗಳ ಸಾಕ್ಷ್ಯಚಿತ್ರವು ಭಾರತ, ಇಲ್ಲಿನ ನ್ಯಾಯಾಂಗ ಮತ್ತು ಪ್ರಧಾನಿಯ ಪ್ರತಿಷ್ಠೆಗೆ ಮಸಿ ಬಳಿದಿದೆ ಎಂದು ಹೂಡಲಾಗಿರುವ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಸಮನ್ಸ್ ಕಳುಹಿಸಲಾಗಿತ್ತು.
ಇದನ್ನೂ ಓದಿ: BBC documentary: ಮೋದಿ ಕುರಿತ ಸಾಕ್ಷ್ಯಚಿತ್ರಕ್ಕಾಗಿ ಬಿಬಿಸಿಗೆ ದಿಲ್ಲಿ ಹೈಕೋರ್ಟ್ ಮಾನನಷ್ಟ ಮೊಕದ್ದಮೆ ನೋಟಿಸ್
ಬಿಬಿಸಿ (ಯುಕೆ) ಸಾಕ್ಷ್ಯಚಿತ್ರ ʼಇಂಡಿಯಾ: ದಿ ಮೋದಿ ಕ್ವೆಶ್ಚನ್ʼ ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ, 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಗಳಲ್ಲಿ ಮೋದಿ ಪಾತ್ರವಿದೆ ಎಂದು ಹೇಳಲಾಗಿತ್ತು. ಆಗ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಇದಾದ ಬಳಿಕ ಇದೀಗ ಬಿಬಿಸಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ