ಲಂಡನ್: ಬ್ರಿಟನ್ ರಾಜಮನೆತನವು ಅನೇಕ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿದೆ. ಕೆಲವು ಸಂಪ್ರದಾಯಗಳು ವಿಶಿಷ್ಟ ಸಂದರ್ಭದಲ್ಲಿ ಮಾತ್ರವೇ ಹೊರಜಗತ್ತಿಗೇ ತಿಳಿಯುತ್ತವೆ. ರಾಣಿ ನಿಧನದ ಸುದ್ದಿಯನ್ನು ಜೇನುನೊಣಗಳಿಗೆ ತಿಳಿಸುವುದು (ಟೆಲ್ಲಿಂಗ್ ದಿ ಬೀ) ಅಂಥದ್ದೇ ಒಂದು ವಿಶಿಷ್ಟ ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ಕ್ವೀನ್ ಎಲಿಜಬೆತ್ ನಿಧನ(Queen Elizabeth Death)ದ ಸುದ್ದಿಯನ್ನು ಅರಮನೆಯ ಜೇನುನೊಣಗಳಿಗ ತಿಳಿಸುವ ವಿಧಿವಿಧಾನವನ್ನು ಪೂರೈಸಲಾಗಿದೆ!
ಈ ಸಂಪ್ರದಾಯವನ್ನು ಅರಮನೆಯ ಜೇನುನೊಣಗಳ ಅಧಿಕೃತ ಪಾಲಕ 79 ವರ್ಷದ ಜಾನ್ ಚಾಪೆಲ್ ಅವರು ಪೂರೈಸಿದರು. ಬಕಿಂಗ್‌ಹ್ಯಾಮ್ ಅರಮನೆಯ ಗಾರ್ಡ್‌ನಲ್ಲಿರುವ ಜೇನುಗೂಡುಗಳತ್ತ ತೆರಳಿದ ಚಾಪೆಲ್ ಅವರು, ಗುರುವಾರ ಕ್ವೀನ್ ಎಲಿಜಬೆತ್ ಅವರು ನಿಧನರಾದ ಸುದ್ದಿಯನ್ನು ಜೇನುನೊಣಗಳಿಗೆ ತಿಳಿಸಿದರು. ಜತೆಗೆ, ರಾಣಿಯ ಜಾಗದಲ್ಲಿ ಹೊಸ ರಾಜ ಅವರು ಅಧಿಕಾರವನ್ನು ವಹಿಸಿಕೊಂಡಿರುವ ಬಗ್ಗೆಯೂ ಜೇನುನೊಣಗಳಿಗೆ ಮಾಹಿತಿ ನೀಡಿದರು.
ಜೇನುನೊಣಗಳಿಗೆ ತಿಳಿಸದಿದ್ದರೆ ಏನಾಗುತ್ತದೆ?
‘ಟೆಲ್ಲಿಂಗ್ ದಿ ಬೀ’ ಪದ್ಧತಿಯು ಅತ್ಯಂತ ಪ್ರಾಚೀನವಾದ ಪದ್ಧತಿಯಾಗಿದ್ದು, ಜೇನುನೊಣಗಳಿಗೆ ಅವರ ಒಡೆಯ ನಿಧನವಾಗಿರುವ ಮಾಹಿತಿಯನ್ನು ನೀಡಲಾಗುತ್ತದೆ. ಒಂದು ವೇಳೆ ಈ ಪದ್ಧತಿಯನ್ನು ಪಾಲಿಸದಿದ್ದರೆ ಜೇನುನೊಣಗಳು ತಮ್ಮ ಗೂಡು ಬಿಟ್ಟು ಹೊರಟು ಹೋಗುತ್ತವೆ ಅಥವಾ ಅವು ಜೇನು ಉತ್ಪಾದಿಸುವುದಿಲ್ಲ. ಇಲ್ಲವೇ ಸತ್ತುಹೋಗುತ್ತವೆ ಎಂಬ ನಂಬಿಕೆ ರಾಜಮನೆತದಲ್ಲಿದೆ. ಬ್ರಿಟನ್‌ನಲ್ಲಿ ಮಾತ್ರವಲ್ಲದೇ, ಅಮೆರಿಕ, ಪಶ್ಚಿಮ ಯುರೋಪ್ ದೇಶಗಳಲ್ಲಿ 18 ಮತ್ತು 19ನೇ ಶತಮಾನಗಳಲ್ಲಿ ಈ ಪದ್ಧತಿ ಸಾಮಾನ್ಯವಾಗಿತ್ತು.
ಒಡತಿ ನಿಧನಳಾಗಿದ್ದಾಳೆ, ಎಲ್ಲಿಗೂ ಹೋಗಬೇಡಿ
ಒಡತಿ ನಿಧನರಾಗಿದ್ದಾರೆ. ಹಾಗಂತ ನೀವು ಎಲ್ಲಿಗೂ ಹೋಗಬಾರದು. ನಿಮ್ಮ ಹೊಸ ಒಡೆಯ (ಮೂರನೇ ಕಿಂಗ್ ಚಾರ್ಲ್ಸ್) ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿದ್ದಾನೆ ಎಂದು ಪ್ರತಿ ಗೂಡನ್ನು ತಟ್ಟಿ, ಚಾಪೆಲ್ ಈ ಮಾಹಿತಿಯನ್ನು ತಿಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಚಾಪೆಲ್ ಅವರು ಕಳೆದ 15 ವರ್ಷಗಳಿಂದ ಅರಮನೆಯ ಜೇನುಗೂಡುಗಳ ದೇಖರೇಖಿಯನ್ನು ನೋಡಿಕೊಂಡು ಬರುತ್ತಿದ್ದಾರೆ.