Site icon Vistara News

Biggest Snake: ವಿಶ್ವದ ಬೃಹತ್‌ ಹಾವು ಪತ್ತೆ; ಈ ಆನಕೊಂಡದ ಉದ್ದ, ಭಾರ ನಿಮ್ಮ ಊಹೆಗೂ ನಿಲುಕದ್ದು!

anakonda

anakonda

ಬ್ರೆಜಿಲ್​​: ಹಾಲಿವುಡ್‌ನ ʼಆನಕೊಂಡʼ (Anaconda) ಸಿನಿಮಾವನ್ನು ನೋಡದವರು ವಿರಳ. ಅದರಲ್ಲಿ ಕಂಡು ಬರುವ ಬೃಹತ್‌ ಗಾತ್ರದ ಹಾವನ್ನು ನೋಡಿ ಬಹುತೇಕರು ಬೆಚ್ಚಿ ಬಿದ್ದಿದ್ದರು. ಇಂತಹ ದೈತ್ಯ ಗಾತ್ರದ ಹಾವು ಇರಲು ಸಾಧ್ಯವೇ ಇಲ್ಲ ಎಂಬ ಸಂಶಯ ಬಹುತೇಕರನ್ನು ಕಾಡಿತ್ತು. ಆದರೆ ಇಂತಹ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಿಶ್ವದಲ್ಲಿಯೇ ಅತೀದೊಡ್ಡ ಹಾವು ಅಮೆಜಾನ್​ ಮಳೆಕಾಡಿನಲ್ಲಿ (Amazon rainforest) ಪತ್ತೆಯಾಗಿದೆ. ಈ ಹಾವು ಬರೋಬ್ಬರಿ 26 ಅಡಿಗಳಷ್ಟು ಉದ್ದ ಇದ್ದು, ಸುಮಾರು 440 ಪೌಂಡ್‌ (200 ಕೆ.ಜಿ.) ತೂಕ ಹೊಂದಿದೆ ಎಂದು ಅಂದಾಜಿಸಲಾಗಿದೆ. ಇದು ಇಲ್ಲಿಯವರೆಗೆ ಪತ್ತೆಯಾದ ವಿಶ್ವದ ಅತಿದೊಡ್ಡ ಹಾವು (Biggest Snake) ಎನಿಸಿಕೊಂಡಿದೆ.

ಪತ್ತೆಯಾಗಿದ್ದು ಹೇಗೆ?

ನ್ಯಾಷನಲ್‌ ಜಿಯಾಗ್ರಾಫಿಕ್‌ (National Geographic) ಚಾನಲ್‌ನ ಕಾರ್ಯಕ್ರಮಕ್ಕೆ ಕಾಡು ಪ್ರಾಣಿಗಳನ್ನು ಪರಿಚಯಿಸುವ ಪ್ರೊಫೆಸರ್‌ ಫ್ರೀಕ್‌ ವಾಂಕ್‌ (Professor Freek Vonk) ಅಮೆಜಾನ್‌ ಕಾಡಿನ ಹೃದಯ ಭಾಗದಲ್ಲಿ, ಅತ್ಯಂತ ದುರ್ಗಮ ಪ್ರದೇಶದಲ್ಲಿ ನೀರಿನೊಳಗೆ ಈ ಬೃಹತ್‌ ಆನಕೊಂಡವನ್ನು ಪತ್ತೆ ಹಚ್ಚಿದ್ದಾರೆ.

ಮಾನವನ ತಲೆ ಗಾತ್ರದ ಶಿರ!

ಈ ಆನಕೊಂಡದ ಗಾತ್ರ ಎಷ್ಟು ದೊಡ್ಡದಾಗಿದೆ ಎಂದರೆ ಇದರ ತಲೆ ಮಾನವನ ತಲೆಯ ಗಾತ್ರದಲ್ಲಿದೆಯಂತೆ. ಇದರ ಶರೀರ ಕಾರಿನ ಟಯರ್‌ನಷ್ಟು ದಪ್ಪವಿದೆ ಎಂದು ಮೂಲಗಳು ತಿಳಿಸಿವೆ. ಅತೀ ಭಾರದ ಹಾವಿನ ಪ್ರಬೇಧವಾದ ಇದಕ್ಕೆ ಯುನೆಕ್ಟಸ್‌ ಅಕಯಿಮ (Eunectes akayima) ಎಂದು ವಿಜ್ಞಾನಿಗಳು ಹೆಸರಿಟ್ಟಿದ್ದಾರೆ. ಅಂದರೆ ಉತ್ತರದ ಹಸಿರು ಆನಕೊಂಡ ಇದರರ್ಥ. ಈ ಪ್ರಬೇಧವು ಸುಮಾರು 10 ಲಕ್ಷ ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದ್ದ ದಕ್ಷಿಣ ಹಸಿರು ಅನಕೊಂಡದಿಂದ ಬೇರ್ಪಟ್ಟಿದೆ ಎಂದು ಅಂದಾಜಿಸಲಾಗಿದೆ. ಅದಕ್ಕಿಂತ ಆನುವಂಶಿಕವಾಗಿ ಶೇಕಡಾ 5.5ರಷ್ಟು ಭಿನ್ನವಾಗಿದೆ. ಈ ದೃಷ್ಟಿಕೋನದಲ್ಲಿ ಹೇಳುವುದಾದರೆ ಮಾನವರು ಚಿಂಪಾಂಜಿಗಳಿಗಿಂತ ಕೇವಲ ಶೇಕಡಾ 2ರಷ್ಟು ಮಾತ್ರ ಭಿನ್ನರಾಗಿದ್ದಾರೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಕಳವಳಕಾರಿ

ಪರಿಸರ ಸಮತೋಲನದಲ್ಲಿ ಆನಕೊಂಡಗಳ ಪಾತ್ರ ನಿರ್ಣಾಯಕವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆ ಕುಸಿತವಾಗುತ್ತಿರುವುದು ಕಳವಳ ಮೂಡಿಸುತ್ತಿದೆ. ಪರಿಸರ ಮಾಲಿನ್ಯ, ಕಡಿಮೆಯಾಗುತ್ತಿರುವ ಅರಣ್ಯ ಪ್ರದೇಶಗಳು, ಕಾಡ್ಗಿಚ್ಚು, ಬರ, ಹವಾಮಾನ ಬದಲಾವಣೆ, ಮಿತಿ ಮೀರಿದ ತೈಲ ಹೊರ ಸೂಸುವಿಕೆ ಮುಂತಾದ ಚಟುವಟಿಕೆಗಳಿಂದ ಅನಕೊಂಡಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಮೆಜಾನ್​ ದಟ್ಟಾರಣ್ಯದಲ್ಲಿ ವಿಮಾನ ಪತನ; 4 ಮಕ್ಕಳ 40 ದಿನಗಳ ಹೋರಾಟ, ಹಸುಳೆಯೂ ಜೀವಂತ

ಕುತೂಹಲಕಾರಿ ಅಂಶಗಳು

ಅಮೆಜಾನ್​ ಮಳೆಕಾಡು ಭಯಂಕರ ದಟ್ಟಾರಣ್ಯವಾಗಿದ್ದು, ಇದು ವಾಯುವ್ಯ ಬ್ರೆಜಿಲ್​​ನ ಹೆಚ್ಚಿನ ಭಾಗವನ್ನು ಆವರಿಸಿದೆ. ಜತೆಗೆ ಕೊಲಂಬಿಯಾ, ಪೆರು ಮತ್ತಿತರ ದೇಶಗಳಿಗೂ ಹರಡಿದೆ. ಇದು ಅಪಾರ ಜೀವ ವೈವಿಧ್ಯಗಳಿಗೆ ಆಶ್ರಯ ತಾಣ ಎನಿಸಿಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version