ವಾಷಿಂಗ್ಟನ್: ಬಾಸ್ ಎಂದರೆ ಯಾವಾಗಲೂ ಮುಖ ಗಂಟು ಹಾಕಿಕೊಂಡು ಇರುವವನು, ಬರೀ ಉದ್ಯೋಗಿಗಳ ತಪ್ಪನ್ನೇ ಹುಡುಕುವವನು, ಉದ್ಯೋಗಿಗಳು ಕಷ್ಟಪಟ್ಟು ದುಡಿದಿದ್ದರ ಕ್ರೆಡಿಟ್ಟನ್ನು ತಾನು ತೆಗೆದುಕೊಳ್ಳುವವನು, ಸರಿಯಾದ ಸಮಯಕ್ಕೆ ಸಂಬಳ ಜಾಸ್ತಿ ಮಾಡದವನು ಎಂಬ ಮಾತಿದೆ. ಹಾಗಾಗಿಯೇ ಬಾಸ್‌ಗಳ ಬಗ್ಗೆ ಹೆಚ್ಚು ಜೋಕ್‌ಗಳಿವೆ. ಬಾಸ್‌ಅನ್ನು ಹೆಂಡತಿಗೆ ಹೋಲಿಸುತ್ತಾರೆ. ಆದರೆ, ಅಮೆರಿಕದಲ್ಲೊಬ್ಬ ಉದ್ಯಮಿಯು (Kenneth C. Griffin) ತನ್ನ ಕಂಪನಿಯ 1,200 ಉದ್ಯೋಗಿಗಳಿಗೆ ತನ್ನ ಖರ್ಚಿನಲ್ಲಿಯೇ ವಿದೇಶ ಪ್ರವಾಸದ (Trip) ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಅಮೆರಿಕದ ಖ್ಯಾತ ಉದ್ಯಮಿ, ಸಿಟಾಡೆಲ್ ಎಲ್‌ಎಲ್‌ಸಿ ಹೂಡಿಕೆ ಕಂಪನಿಯ ಸಿಇಒ ಕೆನೆತ್ ಸಿ. ಗ್ರಿಫಿನ್ ಅವರು ಉದ್ಯೋಗಿಗಳನ್ನು ಜಪಾನ್‌ನಲ್ಲಿರುವ ವಾಲ್ಟ್ ಡಿಸ್ನಿ ವರ್ಲ್ಡ್ ಟೋಕಿಯೊ ತಾಣಕ್ಕೆ ಪ್ರವಾಸ ಕಳುಹಿಸಿದ್ದಾರೆ. ಕಂಪನಿಯ 1,200 ಉದ್ಯೋಗಿಗಳಿಗೆ ಅವರ ಕುಟುಂಬಸ್ಥರ ಜತೆ ಪ್ರವಾಸಕ್ಕೆ ತೆರಳುವ ಜತೆಗೆ ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿಯುವುದು ಸೇರಿ ಹತ್ತಾರು ಸೌಕರ್ಯಗಳನ್ನು ನೀಡಿದ್ದಾರೆ. ಇದಕ್ಕಾಗಿ, ಸಿಟಾಡೆಲ್ ಎಲ್‌ಎಲ್‌ಸಿ ಮಾತ್ರವಲ್ಲ, ಬೇರೆ ಕಂಪನಿಯ ಉದ್ಯೋಗಿಗಳ ಮೆಚ್ಚುಗೆಗೂ ಕೆನೆತ್ ಗ್ರಿಫಿನ್ ಪಾತ್ರರಾಗಿದ್ದಾರೆ.
ಇಂತಹ ಉಡುಗೊರೆ ನೀಡಲು ಕಾರಣ?
ಸಿಟಾಡೆಲ್ ಎಲ್‌ಎಲ್‌ಸಿ ಕಂಪನಿಯ 30ನೇ ಹಾಗೂ ಸಿಟಾಡೆಲ್ ಸೆಕ್ಯುರಿಟೀಸ್ ಕಂಪನಿಯ 20ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನೌಕರರು ಹಾಗೂ ಅವರ ಕುಟುಂಬಸ್ಥರಿಗೆ ಕೆನೆತ್ ಗ್ರಿಫಿನ್ ಅವರು ವಿದೇಶ ಪ್ರವಾಸದ ಉಡುಗೊರೆ ನೀಡಿದ್ದಾರೆ. ಕಂಪನಿಯ ನೌಕರರನ್ನು ಮೂರು ದಿನಗಳ ಪ್ರವಾಸಕ್ಕೆ ಕಳುಹಿಸಿರುವುದನ್ನು ಸಿಟಾಡೆಲ್ ವಕ್ತಾರ ಯಿನ್ ಐ ದೃಢಪಡಿಸಿದ್ದಾರೆ.
ವಾಲ್ಟ್ ಡಿಸ್ನಿ ವರ್ಲ್ಡ್ ಟೋಕಿಯೊಗೆ ಮಾತ್ರವಲ್ಲ, 1,200 ನೌಕರರು ಹಾಗೂ ಕುಟುಂಬಸ್ಥರನ್ನು ಥಂಡರ್ ಮೌಂಟೇನ್, ಪೈರೇಟ್ಸ್ ಆಫ್ ದಿ ಕೆರಿಬಿಯನ್‌ಗೂ ಕಳುಹಿಸಿದ್ದಾರೆ. ವಾರ್ಷಿಕೋತ್ಸವ ಕಾರ್ಯಕ್ರಮಗಳು, ಪ್ರವಾಸ, ಹೋಟೆಲ್, ಊಟ, ಪಾರ್ಕ್ ಟಿಕೆಟ್‌ಗಳು, ಮನರಂಜನೆ, ಮಕ್ಕಳ ಆರೈಕೆ ಸೇರಿ ಎಲ್ಲ ವೆಚ್ಚವನ್ನೂ ಕೆನೆತ್ ಸಿ. ಗ್ರಿಫಿನ್ ಅವರೇ ಭರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Fan Fever: ಕಚ್ಚಾ ಬದಾಮ್ ಹಾಡಿದ ಭುವನ್‌ಗೆ ಅಭಿಮಾನಿಯಿಂದ ಐಫೋನ್ ಉಡುಗೊರೆ
ಒಟ್ಟಿನಲ್ಲಿ ಕಂಪನಿ ಲಾಭದಲ್ಲಿದ್ದರೂ ಸರಿಯಾಗಿ ಸಂಬಳ ಹೆಚ್ಚಿಸದ, ಉದ್ಯೋಗಿಗಳ ಜತೆ ಬೆರೆಯುವುದು ಇರಲಿ, ಎದುರು ಸಿಕ್ಕಾಗ ಒಂದು ಕಿರುನಗೆಯನ್ನೂ ಬೀರದ ಬಾಸ್‌ಗಳು ಇರುವಾಗ, ಕಂಪನಿಯ ಉದ್ಯೋಗಿಗಳನ್ನು ಮೂರು ದಿನ ಪ್ರವಾಸಕ್ಕೆ ಕಳುಹಿಸುವ ಮೂಲಕ ಕೆನೆತ್ ಸಿ. ಗ್ರಿಫಿನ್ ಅವರು ಹೃದಯ ವೈಶಾಲ್ಯ ಮೆರೆದಿದ್ದಾರೆ.