ಇಸ್ಲಾಮಿಕ್ ರಿಪಬ್ಲಿಕ್ (Islamic Republic) ಆಫ್ ಪಾಕಿಸ್ತಾನದ (pakistan) ಕರಾಚಿಯಲ್ಲಿ (karachi) ಸ್ಥಾಪನೆಯಾಗಿದ್ದ ಮೊದಲ ‘ಎದೆ ಹಾಲಿನ ಬ್ಯಾಂಕ್’ (Breast Milk Bank) ಅನ್ನು ಉದ್ಘಾಟನೆಯಾದ 12 ದಿನಗಳಲ್ಲೇ ಮುಚ್ಚಲಾಗಿದೆ. ಇಸ್ಲಾಮಿಕ್ ಧರ್ಮಗುರುಗಳು ಮತ್ತು ಸಂಸ್ಥೆಗಳು ಹೊರಡಿಸಿದ ಫತ್ವಾಗಳನ್ನು ಅನುಸರಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಯುನಿಸೆಫ್ (UNICEF) ಸಹಯೋಗದೊಂದಿಗೆ ಸಿಂಧ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ನಿಯೋನಾಟಾಲಜಿಯ (SICHN) ವೈದ್ಯರು ಒಂದು ವರ್ಷಕ್ಕೂ ಹೆಚ್ಚು ಕಾಲ ದುಡಿದು ಈ ವರ್ಷದ ಜೂನ್ 12ರಂದು ಈ ಹಾಲಿನ ಬ್ಯಾಂಕ್ ಅನ್ನು ಪ್ರಾರಂಭಿಸಿದ್ದರು. ಈ ಕುರಿತು ಕರಾಚಿಯ ಜಾಮಿಯಾ ದಾರುಲ್ ಉಲೂಮ್‌ನೊಂದಿಗೆ ನಿರಂತರ ಚರ್ಚೆ ನಡೆಸಿದ್ದರು. ಉದ್ಘಾಟನೆಗೂ ಮುನ್ನ ಅವರ ಎಲ್ಲಾ ಕಳಕಳಿಯ ಬಗ್ಗೆ ಸ್ಪಂದಿಸಿದ್ದರೂ ಇಸ್ಲಾಮಿಕ್ ಸೆಮಿನರಿಯು ಎದೆಹಾಲು ಬ್ಯಾಂಕ್‌ಗೆ ತನ್ನ ಅನುಮೋದನೆಯನ್ನು ಹಿಂತೆಗೆದುಕೊಂಡು ಸಿಂಧ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಆಂಡ್ ನಿಯೋನಾಟಾಲಜಿಗೆ ಶಾಕ್ ನೀಡಿದೆ.
ನಾವು ವಿಧಿಸಿರುವ ಕಟ್ಟುನಿಟ್ಟಿನ ಷರತ್ತುಗಳನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ ಎಂದು ಆಸ್ಪತ್ರೆ ಹೇಳಿದೆ. ಹಾಗಾಗಿ ಎದೆ ಹಾಲಿನ ಬ್ಯಾಂಕ್‌ಗೆ ನೀಡಲಾದ ಅನುಮತಿ ವಾಪಸ್ ಪಡೆದಿದ್ದೇವೆ ಎಂದು ಜಾಮಿಯಾ ದಾರುಲ್ ಉಲೂಮ್ ಸಂಘಟನೆ ಹೇಳಿದೆ. ಹೀಗಾಗಿ, ಪಾಕಿಸ್ತಾನದ ವೈದ್ಯರ ಮಹತ್ವಾಕಾಂಕ್ಷೆಯ ಹಾಲಿನ ಬ್ಯಾಂಕ್ ಕಾರ್ಯಾಚರಣೆ 12 ದಿನಗಳಲ್ಲೇ ನಿಂತು ಹೋಗಿದೆ.
ಈ ವಿಷಯದ ಕುರಿತು ಮಾತನಾಡಿರುವ ಪಾಕಿಸ್ತಾನ ಉಲೇಮಾ ಕೌನ್ಸಿಲ್ ಅಧ್ಯಕ್ಷ ಹಫೀಜ್ ಮುಹಮ್ಮದ್ ತಾಹಿರ್ ಮೆಹಮೂದ್ ಅಶ್ರಫಿ, ಮಾನವ ಹಾಲಿನ ಬ್ಯಾಂಕ್ ಅನ್ನು ಸ್ಥಾಪಿಸಲು ಬಯಸಿದ ವೈದ್ಯರ ಉದ್ದೇಶವು ಉತ್ತಮ ನಂಬಿಕೆಯಲ್ಲಿರಬಹುದು. ನಾವು ಜಾಮಿಯಾ ದಾರುಲ್ ಉಲೂಮ್ ಕರಾಚಿಯ ನಿರ್ಧಾರಕ್ಕೆ ಸಮ್ಮತಿಸುತ್ತೇವೆ. ಹೀಗಾಗಿ ವೈದ್ಯರ ನಿರ್ಣಯವನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದರ ಪರಿಣಾಮವಾಗಿ ಸಿಂಧ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಆಂಡ್ ನಿಯೋನಾಟಾಲಜಿ ತನ್ನ ಕಾರ್ಯಾಚರಣೆಯನ್ನು 2 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಮುಚ್ಚಬೇಕಾಯಿತು.
ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಳ
ಪಾಕಿಸ್ತಾನದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಿದೆ. ಈ ಕುರಿತು ಮಾತನಾಡಿರುವ ಸಿಂಧ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಆಂಡ್ ನಿಯೋನಾಟಾಲಜಿಯ ವೈದ್ಯರಾದ ಡಾ. ಸೈಯದ್ ರೆಹಾನ್ ಅಲಿ, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಹಾಲಿನ ಬ್ಯಾಂಕ್ ಒಂದು ಮಾರ್ಗವಾಗಿತ್ತು ಎಂದು ಹೇಳಿ ಇದನ್ನು ಮುಚ್ಚಬೇಕಾದ ಪರಿಸ್ಥಿತಿ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: PM Modi Russia Visit: ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲವು; ಭಾರತೀಯ ಯೋಧರ ಬಿಡುಗಡೆಗೆ ರಷ್ಯಾ ಸಮ್ಮತಿ
ಸಿಂಧ್ ಪ್ರಾಂತ್ಯದ ಆರೋಗ್ಯ ಸಚಿವ ಡಾ. ಅಜ್ರಾ ಪೆಚುಹೊ, ಅಕಾಲಿಕವಾಗಿ ಜನ್ಮ ತಳೆದ ಶಿಶುಗಳು ಬದುಕುಳಿಯಬೇಕಾದರೆ ನಾವು ನಮ್ಮ ಎಲ್ಲಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಮಾನವ ಹಾಲಿನ ಬ್ಯಾಂಕ್‌ಗಳನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. ವರದಿಯ ಪ್ರಕಾರ, 1,000 ಜೀವಂತ ಜನನಗಳಲ್ಲಿ 42 ಮಕ್ಕಳು ಸಾವನ್ನಪ್ಪುತ್ತಿದೆ. ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ನವಜಾತ ಶಿಶುಗಳ ಮರಣ ಪ್ರಮಾಣವನ್ನು ಹೊಂದಿದೆ.