Site icon Vistara News

Chicken tikka masala | ಚಿಕನ್‌ ಟಿಕ್ಕಾ ಮಸಾಲಾ ಆವಿಷ್ಕರಿಸಿದ ಬಾಣಸಿಗ ಅಲಿ ಅಸ್ಲಂ ನಿಧನ

Chicken tikka masala

ಬ್ರಿಟನ್:‌ ʼಚಿಕನ್‌ ಟಿಕ್ಕಾ ಮಸಾಲಾʼ ಖಾದ್ಯವನ್ನು ಆವಿಷ್ಕರಿಸಿದ ಖ್ಯಾತಿಯ ಬಾಣಸಿಗ ಅಲಿ ಅಹ್ಮದ್‌ ಅಸ್ಲಂ ಅವರು ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಗ್ಲಾಸ್ಗೋದ ಶೀಷ್‌ ಮಹಲ್‌ ರೆಸ್ಟೋರೆಂಟ್‌, ಅಸ್ಲಂ ಅವರ ನಿಧನವನ್ನು ಖಚಿತಪಡಿಸಿದೆ. ಅಸ್ಲಂ ಅವರ ಗೌರವಾರ್ಥ 48 ಗಂಟೆಗಳ ಕಾಲ ರೆಸ್ಟೋರೆಂಟನ್ನು ಮುಚ್ಚಲಾಗಿದೆ. ʼʼಶೀಷ್‌ ಅಭಿಮಾನಿಗಳೇ, ಮಿ.ಅಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ನಾವೆಲ್ಲಾ ಅಕ್ಷರಶಃ ಭಗ್ನಹೃದಯಿಗಳಾಗಿದ್ದೇವೆʼʼ ಎಂದು ಹೋಟೆಲ್‌ ಪ್ರಕಟಿಸಿದೆ.

1970ರಲ್ಲಿ ತಮ್ಮ ಶೀಷ್‌ ಮಹಲ್‌ ರೆಸ್ಟೋರೆಂಟ್‌ನಲ್ಲಿ ಟೊಮ್ಯಾಟೋ ಸೂಪ್‌ನಿಂದ ಮಾಡಲಾದ ಸೂಪ್‌ ಅನ್ನು ಸುಧಾರಿಸಿ ಈ ಖಾದ್ಯವನ್ನು ಅವರು ಆವಿಷ್ಕರಿಸಿದರು. ಈ ರೆಸ್ಟೋರೆಂಟೇ ಅವರ ಜೀವನವಾಗಿತ್ತು. ಅವರಿಲ್ಲಿ ಪ್ರತಿದಿನ ಊಟ ಮಾಡುತ್ತಿದ್ದರು. ಅವರು ಪ್ರತಿದಿನ ಚಿಕನ್‌ ಟಿಕ್ಕಾ ಮಸಾಲಾ ಸೇವಿಸುತ್ತಿದ್ದರೋ ಇಲ್ಲವೋ ತಿಳಿಯದು ಎಂದು ಅಸ್ಲಂ ಅವರ ಭಾವ ಅಂದ್ಲೀಬ್‌ ಅಹ್ಮದ್‌ ತಿಳಿಸಿದ್ದಾರೆ.

2009ರಲ್ಲಿ ಮಾಡಲಾದ ಒಂದು ಸಂದರ್ಶನದಲ್ಲಿ ಅವರು ಚಿಕನ್‌ ಟಿಕ್ಕಾ ಮಸಾಲಾ ರೂಪುಗೊಂಡ ಬಗೆಯನ್ನು ವಿವರಿಸಿದ್ದರು. ನಾವು ಚಿಕನ್‌ ಟಿಕ್ಕಾ ಮಾಡುತ್ತಿದ್ದೆವು. ಒಬ್ಬರು ಗ್ರಾಹಕರು ಇದು ಬಹಳ ಒಣದಾಗಿದೆ ಎಂದು ದೂರು ನೀಡಿದ್ದರು. ಆಗ ನಾನು ಚಿಕನ್‌ ಅನ್ನು ಸಾಸ್‌ ಜತೆಗೆ ಪಾಕ ಮಾಡುವ ವಿಧಾನವನ್ನು ಆವಿಷ್ಕರಿಸಿದೆ. ಮೊಸರು, ಕ್ರೀಮ್‌, ಮಸಾಲೆಗಳ ಮೂಲಕ ತಯಾರಿಸಲಾದ ಸಾಸ್‌ ಅದಾಗಿತ್ತು ಎಂದವರು ಹೇಳಿದ್ದರು. ಬ್ರಿಟಿಷ್‌ ರೆಸ್ಟೋರೆಂಟ್‌ಗಳಲ್ಲೆಲ್ಲಾ ಈ ಖಾದ್ಯ ಜನಪ್ರಿಯವಾಗಿತ್ತು.

ಇದನ್ನೂ ಓದಿ | Big burger | ಈ ಅತೀ ದೊಡ್ಡ ಬರ್ಗರ್‌ 30 ಕೆಜಿ: ಇದನ್ನು ತಿಂದು ಅಷ್ಟೇ ಕೆಜಿ ಜಾಸ್ತಿಯಾದರೆ?

ಬ್ರಿಟನ್‌ನ ವಿದೇಶಾಂಗ ಸಚಿವರಾಗಿದ್ದ ರಾಬಿನ್‌ ಕುಕ್‌ ಅವರು, ಚಿಕನ್‌ ಟಿಕ್ಕಾ ಮಸಾಲಾ ಬ್ರಿಟಿಷ್‌ ಸಂಸ್ಕೃತಿಯ ಮಹತ್ವದ ಭಾಗವಾಗಿದೆ ಎಂದಿದ್ದರು. ಚಿಕನ್‌ ಟಿಕ್ಕಾ ಮಸಾಲಾ ಇಂದು ಬ್ರಿಟಿಷ್‌ ರಾಷ್ಟ್ರೀಯ ಖಾದ್ಯ; ಯಾಕೆಂದರೆ ಅದು ಜನಪ್ರಿಯವಾಗಿರುವುದಷ್ಟೇ ಅಲ್ಲ, ಹೊರಗಿನ ಪ್ರಭಾವಗಳನ್ನು ಅಳವಡಿಸಿಕೊಳ್ಳುವ ಬ್ರಿಟಿಷ್‌ ಸಂಸ್ಕೃತಿಗೂ ಅದು ದೃಷ್ಟಾಂತವಾಗಿದೆ ಎಂದವರು ಹೇಳಿದ್ದರು.

ಪಾಕಿಸ್ತಾನದಲ್ಲಿರುವ ಪಂಜಾಬ್‌ ಪ್ರಾಂತ್ಯದ ಮೂಲದವರಾದ ಅಲಿ, 1964ರಲ್ಲಿ ಗ್ಲಾಸ್ಗೋಗೆ ತೆರಳಿ ಅಲ್ಲಿನ ಶೀಷ್‌ ಮಹಲ್‌ನಲ್ಲಿ ಬಾಣಸಿಗರಾಗಿದ್ದರು. ಯುರೋಪಿಯನ್‌ ಒಕ್ಕೂಟದಿಂದ ತಮ್ಮ ಈ ಖಾದ್ಯಕ್ಕೆ ʼಸಂರಕ್ಷಿತ ಮೂಲದ ಗುರುತುʼ ಪ್ರಮಾಣಪತ್ರ ಪಡೆಯಲು ಅವರು ಯತ್ನಿಸಿದ್ದರು. ಆದರೆ ಸಫಲರಾಗಿರಲಿಲ್ಲ. ಅವರಿಗೆ ಪತ್ನಿ, ಮೂವರು ಗಂಡುಮಕ್ಕಳು ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಇದನ್ನೂ ಓದಿ | Viral Video | ನೀರಿನಲ್ಲಿ ಈಜುತ್ತಿದ್ದ ಮೊಸಳೆ ಜಂಪ್​ ಮಾಡಿ ಡ್ರೋನ್​​ಗೇ ಬಾಯಿ ಹಾಕಿದ ಥ್ರಿಲ್ಲಿಂಗ್​ ವಿಡಿಯೊ ಇದು!

Exit mobile version