Site icon Vistara News

PFA Ban: ರಾಸಾಯನಿಕಯುಕ್ತ ಪ್ರಸಾದನ; ಏಕೆ ಇದು ಅಪಾಯಕಾರಿ?

PFA Ban

ನ್ಯೂಜಿಲೆಂಡ್‌ನಲ್ಲಿ ಪಿಎಫ್‌ಎ (PFA ban) ರಾಸಾಯನಿಕವನ್ನು ಹೊಂದಿರುವಂಥ ಎಲ್ಲಾ ಪ್ರಸಾದನಗಳನ್ನೂ ನಿಷೇಧಿಸಿರುವ ಸಂಗತಿ ಸುದ್ದಿ ಮಾಡುತ್ತಿದೆ. 2026ರ ಅಂತ್ಯದ ವೇಳೆಗೆ ಎಲ್ಲಾ ಪ್ರಸಾದನಗಳಿಂದ ಈ ರಾಸಾಯನಿಕಕ್ಕೆ ಗೇಟ್‌ಪಾಸ್‌ ಕೊಟ್ಟಿರಬೇಕು ಎಂದು ಅಲ್ಲಿನ ಆಡಳಿತ ಫರ್ಮಾನು ಹೊರಡಿಸಿದೆ. ಪರಿಸರ ಮತ್ತು ಮಾನವ- ಇಬ್ಬರ ರಕ್ಷಣೆಗೂ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಕ್ರಮವಿದು ಎಂದು ವಿಶ್ವಮಟ್ಟದಲ್ಲಿ ಇದನ್ನು ವಿಶ್ಲೇಷಿಸಲಾಗುತ್ತಿದೆ. ಏನು ರಾಸಾಯನಿಕವದು? ಅದನ್ನೇಕೆ ನಿಷೇಧಿಸಲಾಗಿದೆ? ಯಾವೆಲ್ಲ ಪ್ರಸಾದನಗಳು ಇದನ್ನು ಹೊಂದಿರುತ್ತವೆ? ಇದರಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ತಿಳಿಯೋಣ.

ನುಣುಪು ಹೆಚ್ಚಿಸಲು ಬಳಕೆ

ಉಗುರು ಬಣ್ಣ, ಶೇವಿಂಗ್‌ ಕ್ರೀಮ್‌, ಫೌಂಡೇಶನ್‌, ಲಿಪ್‌ಸ್ಟಿಕ್‌, ಮಸ್ಕರಾ ಮುಂತಾದ ಹಲವು ರೀತಿಯ ಪ್ರಸಾದನಗಳಲ್ಲಿ ಪಿಎಫ್‌ಎಗಳು ಬಳಕೆಯಾಗುತ್ತವೆ. ಮುಖದ ನುಣುಪನ್ನು ಹೆಚ್ಚಿಸಲು, ಪ್ರಸಾದನಗಳು ಹೆಚ್ಚು ಸಮಯ ಬಾಳಿಕೆ ಬರಲು, ಫೌಂಡೇಶನ್ನಂಥ ಪ್ರಸಾದನಗಳನ್ನು ಮುಖದ ಮೇಲೆ ಸುಲಭವಾಗಿ ಹರಡುವಂತೆ ಮಾಡುವುದಕ್ಕೆ, ನೀರು, ಬೆವರು ಮುಂತಾದವುಗಳಿಂದ ಅಳಿಸಿ ಹೋಗದಂತೆ ಮಾಡಲು ಈ ಪಿಎಫ್‌ಎ ರಾಸಾಯನಿಕಗಳನ್ನು ಪ್ರಸಾದನಗಳಲ್ಲಿ ಬಳಸಲಾಗುತ್ತದೆ.

ಏನಿದು ಪಿಎಫ್‌ಎ?

per- and polyfluoroalkyl substances ಎನ್ನುವ ರಾಸಾಯನಿಕಗಳಿವು. ʻಫಾರ್‌ಎವರ್‌ ಕೆಮಿಕಲ್ಸ್‌ʼ (forever chemicals) ಅಥವಾ ʻಎಂದೂ ಕರಗದ ರಾಸಾಯನಿಕಗಳುʼ ಎಂದೇ ಇವುಗಳನ್ನು ಬಣ್ಣಿಸಲಾಗುತ್ತದೆ. ಸುಮಾರು 1500ರಷ್ಟು ಸಂಖ್ಯೆಯಲ್ಲಿರುವ ಈ ಸಂಕೀರ್ಣ ಸಿಂಥೆಟಿಕ್‌ ವಸ್ತುಗಳು, ವಾತಾವರಣದಲ್ಲೂ, ದೇಹದಲ್ಲೂ ಒಮ್ಮೆ ಸೇರಿದರೆ ದೀರ್ಘ ಕಾಲದವರೆಗೆ ಅವುಗಳನ್ನು ಅಲ್ಲಿಂದ ತೆಗೆಯುವುದಕ್ಕಾಗದು. ದೇಹದಲ್ಲಿಯೂ ಹೆಚ್ಚು ಸಮಯ ಇರಿಸಿಕೊಂಡರೆ, ಶರೀರವನ್ನು ವಿಷಮಯವಾಗಿಸುತ್ತವೆ ಇವು. 1950ರಿಂದಲೇ ಈ ರಾಸಾಯನಿಕಗಳು ಬಳಕೆಯಲ್ಲಿವೆ. ಪ್ರಸಾದನಗಳಲ್ಲಿ ಮಾತ್ರವಲ್ಲ, ನೀರು, ತೈಲ, ಬಿಸಿ, ಕಲೆ ಮುಂತಾದವನ್ನು ತಡೆದುಕೊಳ್ಳಬಲ್ಲ ಮೇಲ್ಮೈ ನಿರ್ಮಾಣಕ್ಕೆ ಇದೇ ಗುಂಪಿನ ರಾಸಾಯನಿಕಗಳನ್ನು ಬಳಸಲಾಗುತ್ತದೆ.

ಕಲುಷಿತಮಯ

ಇವುಗಳನ್ನು ಬಟ್ಟೆ, ಪೀಠೋಪಕರಣಗಳು, ಅಂಟು, ಆಹಾರದ ಪ್ಯಾಕಿಂಗ್‌ ವಸ್ತುಗಳು, ನಾನ್‌ಸ್ಟಿಕ್‌ ಪಾತ್ರೆಗಳು, ಸೆಲ್‌ಫೋನು, ಎಲೆಕ್ಟ್ರಿಕ್‌ ವಯರ್‌ಗಳ ಇನ್‌ಸುಲೇಶನ್…‌ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಕೆಲವು ಪಿಎಫ್‌ಎಗಳಂತೂ ಎಷ್ಟು ದೀರ್ಘ ಕಾಲಕ್ಕೂ ಕರಗದೆ ಉಳಿದು, ಜಲಮೂಲ, ಸಸ್ಯಮೂಲಗಳನ್ನು ಸೇರಿ, ಗಾಳಿಯನ್ನು ಕಲುಷಿತ ಮಾಡಿ, ನಮ್ಮ ಆಹಾರದ ಭಾಗವಾಗಿ ಕಡೆಗೆ ನಮ್ಮ ರಕ್ತವನ್ನೂ ಸೇರಿ ಮಾಡಬಾರದ ಅನಾಹುತಗಳನ್ನು ಮಾಡುತ್ತಿವೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿವೆ.

ನಮಗೇನಾಗುತ್ತದೆ?

ಕೊಲೆಸ್ಟ್ರಾಲ್‌ ಹೆಚ್ಚಳ, ರೋಗ ನಿರೋಧಕ ಶಕ್ತಿಯನ್ನು ಕುಂದಿಸುವುದು, ಲಸಿಕೆಗಳಿಗೆ ಪೂರಕವಾಗಿ ಪ್ರತಿರೋಧಕತೆಯನ್ನು ಹೆಚ್ಚಿಸದಿರುವುದು, ಯಕೃತ್‌ನ ಕೆಲಸದಲ್ಲಿ ಏರುಪೇರು, ಮೂತ್ರಪಿಂಡ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳು, ಗರ್ಭಾವಸ್ಥೆಯಲ್ಲಿನ ಸಮಸ್ಯೆಗಳು, ನವಜಾತ ಶಿಶುವಿನ ಆರೋಗ್ಯ ಸಮಸ್ಯೆಗಳು- ಹೀಗೆ ಪಟ್ಟಿ ಸಾಕಷ್ಟು ದೊಡ್ಡದಿದೆ.

ದೇಹದೊಳಗೆ ರಾಸಾಯನಿಕ

ವಾಯು, ಜಲ ಮತ್ತು ಆಹಾರದ ಮೂಲಕ ಈ ರಾಸಾಯನಿಕಗಳು ಈಗಾಗಲೇ ನಮ್ಮ ದೇಹವನ್ನು ಪ್ರದೇಶಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರಸಾದನಗಳಲ್ಲಿ ಅವುಗಳನ್ನು ನಿಷೇಧಿಸಿರುವುದು ಉತ್ತಮ ಕೆಲಸವೇ ಆದರೂ, ಇವಿಷ್ಟೇ ಸಾಕಾಗದು. ಎಲ್ಲ ದೇಶಗಳು ಈ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯತತ್ಪರವಾಗಬೇಕಾದ ಅಗತ್ಯವಿದೆ. ಕಾರಣ, ಇದು ನಮ್ಮ ಆರೋಗ್ಯದ ಮೇಲೆ ಉಂಟುಮಾಡುತ್ತಿರುವ ಅನಾಹುತಗಳು.

ತಡೆಯುವುದು ಹೇಗೆ?

ಇವುಗಳ ಬಳಕೆಯನ್ನು ತಡೆಯುವುದೊಂದೇ ನಮಗಿರುವ ಮಾರ್ಗ. ಈ ನಿಟ್ಟಿನಲ್ಲಿ ನ್ಯೂಜಿಲೆಂಡ್‌ ಸರಕಾರ ಮೊದಲ ಹೆಜ್ಜೆ ಇರಿಸಿದೆ. ಪ್ಲಾಸ್ಟಿಕ್‌ ಬದಲಿಗೆ ಲೋಹದಂಥ ಸುಸ್ಥಿರ ವಸ್ತುಗಳ ಬಳಕೆ, ನಾನ್‌ಸ್ಟಿಕ್‌ ಪಾತ್ರೆಗಳ ಬದಲಿಗೆ ಸ್ಟೀಲ್‌ ಪಾತ್ರೆಗಳ ಬಳಕೆ, ಪ್ಲಾಸ್ಟಿಕ್‌ ಚೀಲಗಳ ಬದಲಿಗೆ ಬಟ್ಟೆಯ ಚೀಲಗಳ ಬಳಕೆಯನ್ನು ಉತ್ತೇಜಿಸಬಹುದು. ಮಣ್ಣು, ಗಾಜು, ಪಿಂಗಾಣಿ ಮುಂತಾದವು ಇಂಥ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಒಮ್ಮೆ ಬಳಸಿ ಬಿಸಾಡುವ ವಸ್ತುಗಳಲ್ಲಿ ಇವುಗಳ ಸಾಂದ್ರತೆ ಹೆಚ್ಚು. ಹಾಗಾಗಿ ಅವುಗಳ ಬದಲಿಗೆ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಪ್ರೋತ್ಸಾಹಿಸುವುದು ಎಲ್ಲ ದೃಷ್ಟಿಯಿಂದಲೂ ಕ್ಷೇಮ.

ಇದನ್ನೂ ಓದಿ: Walking Shoe Tips: ವ್ಯಾಯಾಮಕ್ಕಾಗಿ ಪಾದರಕ್ಷೆಗಳನ್ನು ಆಯ್ಕೆ ಮಾಡುವುದು ಹೇಗೆ?

Exit mobile version