ಇಸ್ಲಾಮಾಬಾದ್: ಜಗತ್ತು ಎಷ್ಟೇ ಮುಂದುವರಿದಿದೆ ಎಂದು ಹೇಳಿಕೊಂಡರೂ ಇಂದಿಗೂ ಬಾಲ್ಯ ವಿವಾಹ (Child Marriage), ಹೆಣ್ಣು ಮಕ್ಕಳ ಮಾರಾಟ ಮುಂತಾದ ಸಾಮಾಜಿಕ ಪಿಡುಗನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ಇದಕ್ಕೆ ತಾಜಾ ಉದಾಹರಣೆಯೊಂದು ಪಾಕಿಸ್ತಾನದಲ್ಲಿ ವರದಿಯಾಗಿದೆ. ಪಾಪಿ ತಂದೆಯೊಬ್ಬ ತನ್ನ 12 ವರ್ಷದ ಮಗಳನ್ನು 72 ವರ್ಷದ ಮುದುಕನೊಬ್ಬನಿಗೆ ಮಾರಾಟ ಮಾಡಿ ಆತನ ಜತೆಗೆ ಮದುವೆ ಮಾಡಿಸಲು ಯತ್ನಿಸಿದ್ದಾನೆ. ಸದ್ಯ 72 ವರ್ಷದ ವರನನ್ನು ಪೊಲೀಸರು ಬಂಧಿಸಿದ್ದು, ಬಾಲಕಿಯ ತಂದೆ ತಲೆ ಮರೆಸಿಕೊಂಡಿದ್ದಾನೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಈ ವಿಲಕ್ಷಣ ಪ್ರಕರಣ ನಡೆದಿದೆ. ಬಾಲಕಿಯ ಪಾಪಿ ತಂದೆಯ ಹೆಸರು ಆಲಂ ಸೈಯದ್. ಬಾಲಕಿಯ ಮದುವೆಯಾಗಲು ತಯಾರಾಗಿ ಸದ್ಯ ಜೈಲು ಕಂಬಿ ಎಣಿಸುತ್ತಿರುವ ಮುದುಕನ ಹೆಸರು ಹಬೀಬ್ ಖಾನ್ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ
ಎಲ್ಲವೂ ಆಲಂ ಸೈಯದ್ ಯೊಜನೆಯಂತೆಯೇ ನಡೆದಿದ್ದರೆ ಪಾಪದ 12ರ ಬಾಲಕಿ ತನ್ನ ಅಜ್ಜನ ಪ್ರಾಯದ ಹಬೀಬ್ ಖಾನ್‌ನನ್ನು ಮದುವೆಯಾಗಬೇಕಿತ್ತು. ಆದರೆ ಆಕೆಯ ಅದೃಷ್ಟ ಚೆನ್ನಾಗಿತ್ತು. ಇನ್ನೇನು ಮದುವೆ ಶಾಸ್ತ್ರ ಮುಗಿಯಬೇಕು ಎನ್ನುವಷ್ಟರಲ್ಲಿ ಪೊಲೀಸರು ಬಂದು ಮದುವೆ ನಿಲ್ಲಿಸಿ ಆಕೆಯನ್ನು ರಕ್ಷಿಸಿದ್ದಾರೆ.
ಬಾಲಕಿಯ ತಂದೆ ಸೈಯದ್ ತನ್ನ ಮಗಳನ್ನು ಹಬೀಬ್ ಖಾನ್‌ಗೆ 5 ಲಕ್ಷ ರೂ.ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದ. ಇಷ್ಟು ಹಣ ಸಿಗದಿದ್ದರೆ ಮದುವೆ ಮಾಡಿಕೊಡುವುದಿಲ್ಲ ಎಂದೂ ಹಠ ಹಿಡಿದಿದ್ದ. ಮಧ್ಯ ಪ್ರವೇಶಿಸಿದ ಪೊಲೀಸರು ಮದುವೆ ತಡೆದಿದ್ದಾರೆ. ಈ ವೇಳೆ ಸೈಯದ್ ಪೊಲೀಸರ ಕೈಯೊಂದ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದಾನೆ. ಬಾಲಕಿ ತಂದೆ, ವರ ಮತ್ತು ನಿಕಾಹ್ ಖಾವಾನ್ (ಮದುವೆ ನಡೆಸುವವರು) ವಿರುದ್ಧ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪಾಕಿಸ್ತಾನದಲ್ಲಿ ಬಾಲ್ಯ ವಿವಾಹ ತಡೆ ಕಾನೂನು ಜಾರಿಯಾದ ನಂತರವೂ ಇಂತಹ ಘಟನೆಗಳು ನಡೆಯುತ್ತಲೇ ಇರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.
ಈ ಹಿಂದೆ ಪಾಕಿಸ್ತಾನದ ರಾಜನ್‌ಪುರ ಮತ್ತು ಥಟ್ಟಾದಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆದಿದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು ಇದನ್ನು ತಡೆದಿದ್ದರು. ಪಂಜಾಬ್‌ನ ರಾಜನ್‌ಪುರದಲ್ಲಿ 11 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಡಲು ಸಿದ್ಧತೆ ನಡೆಸಲಾಗಿತ್ತು. ಇದನ್ನು ತಡೆದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಮಾತ್ರವಲ್ಲ ಕೆಲವು ದಿನಗಳ ಥಟ್ಟಾದಲ್ಲಿ ಶ್ರೀಮಂತನೊಬ್ಬ ಅಪ್ರಾಪ್ತೆಯನ್ನು ವರಿಸಲು ಮುಂದಾಗಿದ್ದ. ಇದನ್ನೂ ಪೊಲೀಸರು ತಡೆದಿದ್ದರು. ಅಲ್ಲದೆ ಕಳೆದ ತಿಂಗಳು ಸ್ವಾತ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ 70 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: Child Marriage :ಬಾಲ್ಯ ವಿವಾಹದ ಬಲೆಗೆ ಸಿಲುಕಿದ ಬಾಲಕಿ ಆತ್ಮಹತ್ಯೆ; ಗಂಡನ ಬಂಧನ
80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ!
ಇತ್ತೀಚೆಗೆ ಚಿನಾದಲ್ಲಿ 23ರ ಹರೆಯದ ಯುವತಿಯೊಬ್ಬಳು 80 ವರ್ಷ ವೃದ್ಧರೊಬ್ಬರನ್ನು ಮದುವೆಯಾಗಿರುವ ಸುದ್ದಿ ವೈರಲ್ ಆಗಿತ್ತು. ವೃದ್ಧಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದ ಚೀನಾದ 80 ವರ್ಷ ವ್ಯಕ್ತಿ ಶ್ರೀಲಿ ಹಾಗೂ ಅದೇ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬ ಯುವತಿಯ ನಡುವೆ ಸ್ನೇಹ ಬೆಳೆದಿದೆ. ನಂತರ ಅದು ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಆಕೆಯ ಮನೆಯವರಿಗೆ ಈ ಮದುವೆ ಇಷ್ಟವಿಲ್ಲದಿದ್ದ ಕಾರಣ ತನ್ನ ಹೆತ್ತವರ ಸಂಬಂಧ ಮುರಿದುಕೊಂಡು ಆಕೆ ಶ್ರೀಲಿಯನ್ನು ಮದುವೆಯಾಗಿದ್ದಳು.