Site icon Vistara News

Chile Wildfires: ವ್ಯಾಪಕ ಕಾಡ್ಗಿಚ್ಚಿಗೆ 110ಕ್ಕಿಂತ ಹೆಚ್ಚು ಮಂದಿ ಬಲಿ; 1,600 ಮನೆ ಭಸ್ಮ

chile

chile

ಸ್ಯಾಂಟಿಯಾಗೊ: ತಾಪಮಾನ ಹೆಚ್ಚಳದಿಂದಾಗಿ ಚಿಲಿ ದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ (Chile Wildfires) ಇದುವರೆಗೆ 110ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ದೇಶದ ಇತಿಹಾಸದಲ್ಲೇ ಇದನ್ನು ಅತ್ಯಂತ ಭೀಕರ ಅಗ್ನಿ ದುರಂತ ಎಂದು ಪರಿಗಣಿಸಲಾಗಿದೆ.

64,000 ಎಕ್ರೆಯಲ್ಲಿ ವ್ಯಾಪಿಸಿದ ಬೆಂಕಿ

ಕೆಲವು ದಿನಗಳ ಹಿಂದೆ ಮಧ್ಯ ಚಿಲಿಯ ವಿನಾ ಡೆಲ್ ಮಾರ್ ಮತ್ತು ವಾಲ್ಪಾರೈಸೊ ಪ್ರದೇಶಗಳಲ್ಲಿ ಕಾಣಿಸಿಕೊಂಡ ಬೆಂಕಿ ಸದ್ಯ 64,000 ಎಕ್ರೆ (26,000 ಹೆಕ್ಟರ್‌)ಯಲ್ಲಿ ವ್ಯಾಪಿಸಿದೆ. ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಪೈಕಿ ಸುಮಾರು 32 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. ಸುಮಾರು 1,600ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಬೆಂಕಿ ನಂದಿಸಲು 19 ಹೆಲಿಕಾಪ್ಟರ್‌ಗಳು ಮತ್ತು 450ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅದಾಗ್ಯೂ ಈಗಲೂ 40ಕ್ಕೂ ಹೆಚ್ಚು ಕಡೆ ಬೆಂಕಿ ಹೊತ್ತಿ ಉರಿಯುತ್ತಲೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಪ್ರವಾಸಿ ತಾಣವಾಗಿರುವ ವಿನಾ ಡೆಲ್ ಮಾರ್ ಸುಮಾರು 3,00,000 ಜನಸಂಖ್ಯೆಯನ್ನು ಹೊಂದಿದೆ. ಇದು ಜನಪ್ರಿಯ ಬೀಚ್ ರೆಸಾರ್ಟ್ ಹೊಂದಿದ್ದು, ಬೇಸಗೆಯಲ್ಲಿ ಪ್ರಸಿದ್ಧ ಸಂಗೀತ ಉತ್ಸವವನ್ನು ಆಯೋಜಿಸುವ ಮೂಲಕ ಪ್ರವಾಸಿಗರ ಗಮನ ಸೆಳೆಯುತ್ತದೆ. ಇದೀಗ ಅಗ್ನಿ ದುರಂತದಿಂದ ಈ ಪ್ರದೇಶ ಹಾನಿಗೊಳಗಾಗಿದೆ. ಭಾನುವಾರ ಬೆಳಗ್ಗೆ ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಕ್ವಿಲ್ಪೆ ಪಟ್ಟಣಕ್ಕೆ ಭೇಟಿ ನೀಡಿದರು. ಇದು ಕೂಡ ಕಾಡ್ಗಿಚ್ಚಿನಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಸುಮಾರು 64 ಮಂದಿ ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ಬೆಂಕಿ ದುರಂತದ ಚಿತ್ರಣ

ಇದನ್ನೂ ಓದಿ: ನಿತ್ಯಾನಂದನಿಂದ ಪುತ್ರಿಯರನ್ನು ಬಿಡಿಸಿ ಎಂದು ಕೋರ್ಟ್‌ ಮೊರೆ ಹೋದ ತಂದೆ; ಮುಂದೇನಾಯ್ತು?

Exit mobile version