ನವ ದೆಹಲಿ: ಜೈಷ್ ಇ ಮೊಹಮ್ಮದ್ (ಜೆಇಎಂ) ಸಂಘಟನೆಯ ಉಗ್ರ, ಪಾಕಿಸ್ತಾನ ಮೂಲದ ಅಬ್ದುಲ್ ರವೂಫ್ ಅಜರ್ನನ್ನು ಜಾಗತಿಕ ಉಗ್ರನೆಂದು ಪರಿಗಣಿಸುವುದಕ್ಕೆ ಚೀನಾ ಅಡ್ಡಗಾಲು ಹಾಕಿದೆ. ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಭಾರತ ಮತ್ತು ಅಮೆರಿಕ ಜಂಟಿಯಾಗಿ ಪ್ರಯತ್ನ ಮಾಡುತ್ತಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯೆದುರು ಪ್ರಸ್ತಾಪವನ್ನೂ ಕೂಡ ಇಟ್ಟಿವೆ. ಆದರೆ ಯುಎನ್ ಭದ್ರತಾ ಮಂಡಳಿ ಈತನನ್ನು ಜಾಗತಿಕ ಉಗ್ರನೆಂದು ಘೋಷಿಸಿ, ಕಪ್ಪು ಪಟ್ಟಿಗೆ ಹಾಕದಂತೆ ಚೀನಾ ವಿಟೊ ಪವರ್ ಪ್ರಯೋಗ ಮಾಡಿದೆ. ನೆರೆ ರಾಷ್ಟ್ರ ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಹೀಗೆ ಅಡ್ಡಗಾಲು ಹಾಕುತ್ತಿದೆ.
ಅಬ್ದುಲ್ ರವೂಫ್ ಅಜರ್ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಪನಾಯಕ. ಸಂಘಟನೆಯ ಸಂಸ್ಥಾಪಕನಾದ ಮಸೂದ್ ಅಜರ್ನ ಸೋದರ. ಅಜರ್ ಒಬ್ಬ ಭಯೋತ್ಪಾದಕ ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಖಜಾನೆ ಇಲಾಖೆ (US treasury department) 2010ರಲ್ಲಿಯೇ ಘೋಷಿಸಿದೆ. 1999ರ ಡಿಸೆಂಬರ್ 24ರಂದು ಏರ್ ಇಂಡಿಯಾ ವಿಮಾನ ಹೈಜಾಕ್ ಆಗಿತ್ತು. ನೇಪಾಳದಿಂದ ದೆಹಲಿಗೆ ಸಂಚಾರ ಮಾಡುತ್ತಿದ್ದ ಈ ವಿಮಾನವನ್ನು ಐವರು ಮುಸುಕುಧಾರಿ ಉಗ್ರರು ಅಪಹರಿಸಿದ್ದರು. ಬಳಿಕ ವಿಮಾನ ಅಫ್ಘಾನಿಸ್ತಾನದ ಕಂದಹಾರ್ನಲ್ಲಿ ಪತ್ತೆಯಾಗಿತ್ತು. ಈ ವಿಮಾನ ಹೈಜಾಕ್ ಯೋಜನೆ ರೂಪಿಸಿದ್ದವರಲ್ಲಿ ರವೂಫ್ ಕೂಡ ಇದ್ದ. ಇನ್ನೂ ಹಲವು ಉಗ್ರ ಕೃತ್ಯ ನಡೆಸಿರುವ ಈತನನ್ನು ಜಾಗತಿಕ ಉಗ್ರನೆಂದು ಪರಿಗಣಿಸಬೇಕು ಎಂದು ಅಮೆರಿಕ ಮತ್ತು ಭಾರತ ಜಂಟಿಯಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಎದುರು ಪ್ರಸ್ತಾಪ ಇಟ್ಟಿದ್ದವು.
‘ರವೂಫ್ನಲ್ಲಿ ಜಾಗತಿಕ ಭಯೋತ್ಪಾದಕ ಎಂದು ಕಪ್ಪು ಪಟ್ಟಿಗೆ ಸೇರಿಸಲು ನಾವು ತಡೆಯೊಡ್ಡಿದ್ದೇವೆ. ಯಾಕೆಂದರೆ ನಮಗೆ ಆತನ ಪ್ರಕರಣಗಳನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಬೇಕಾಗಿದೆ’ ಎಂದು ಚೀನಾ ತಿಳಿಸಿದೆ. ಆದರೆ ಚೀನಾದ ಈ ನಡೆಗೆ ವಿರೋಧ ವ್ಯಕ್ತವಾಗಿದೆ. ವಿಶ್ವ ಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್ ಕೂಡ ಇದನ್ನು ಖಂಡಿಸಿದ್ದಾರೆ. ‘ಜಗತ್ತಿನ ಅತ್ಯಂತ ಅಪಾಯಕಾರಿ ಭಯೋತ್ಪಾದಕರನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸಲು ಅಗತ್ಯವಿರುವ ಎಲ್ಲ ದಾಖಲೆಗಳು, ಪುರಾವೆಗಳು ಇದ್ದರೂ ಕೂಡ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಬಗ್ಗೆ ವಿಷಾದ ಎನ್ನಿಸುತ್ತದೆ ಎಂದಿದ್ದಾರೆ.
ಜೂನ್ನಲ್ಲಿ ಹೀಗೇ ಆಗಿತ್ತು
ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್ ರೆಹಮಾನ್ ಮಖ್ಖಿಯನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತ ಮತ್ತು ಅಮೆರಿಕದ ಜಂಟಿ ಪ್ರಯತ್ನಕ್ಕೆ ಜೂನ್ ತಿಂಗಳಲ್ಲಿ ಚೀನಾ ತಡೆಯೊಡ್ಡಿತ್ತು. 26/11ರ ಮುಂಬೈ ದಾಳಿಯ ರೂವಾರಿಯಾಗಿದ್ದ ಹಫೀಜ್ ಸಯೀದ್ನ ಸಂಬಂಧಿಯಾದ ಈತನ ಹೆಸರನ್ನು ಬ್ಲ್ಯಾಕ್ ಲಿಸ್ಟ್ಗೆ ಹಾಕಲು ಚೀನಾ ಬಿಟ್ಟಿರಲಿಲ್ಲ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಒಟ್ಟು 15ರಾಷ್ಟ್ರಗಳಿಗೆ ವಿಟೊ ಪವರ್ ಚಲಾಯಿಸುವ ಅಧಿಕಾರ ಇದ್ದು, ಅದರಲ್ಲಿ ಚೀನಾ ಕೂಡ ಒಂದು. ಉಗ್ರರನ್ನು ಬಚಾವ್ ಮಾಡಲು, ಇದೇ ಪವರ್ನ್ನು ಚೀನಾ ಬಳಸಿಕೊಳ್ಳುತ್ತಿದೆ.
ಇದನ್ನೂ ಓದಿ: Langya virus | ಕೋವಿಡ್ ಬೆನ್ನಿಗೇ ಚೀನಾದಲ್ಲಿ ಹೊಸ ಸೋಂಕು, ಏನಿದರ ಲಕ್ಷಣ?