Site icon Vistara News

Line of Actual Control: ಗಡಿಯಲ್ಲಿ ಚೀನಾದಿಂದ ಸೇನೆ ನಿಯೋಜನೆ, ಏರ್‌ಪೋರ್ಟ್‌, ಹೆಲಿಪ್ಯಾಡ್‌!

Galwan Clash

ನವದೆಹಲಿ: ಭಾರತದ (India) ಜತೆಗಿನ ಸಂಘರ್ಷದ ಮಧ್ಯೆಯೇ ಚೀನಾ (China) 2022ರಲ್ಲಿ ವಾಸ್ತವ ಗಡಿ ರೇಖೆ(Line of Actual Control – LAC) ಬಳಿ ತನ್ನ ಸೇನೆಯನ್ನು ಹೆಚ್ಚಿಸಿದ್ದು, ಮಾತ್ರವಲ್ಲದೇ ಸಾಕಷ್ಟು ಮೂಲಸೌಕರ್ಯ (Infrastructure) ಅಭಿವೃದ್ಧಿಯನ್ನು ಕೈಗೊಂಡಿತ್ತು ಎಂದು ಅಮೆರಿಕದ ಪೆಂಟಗನ್ (Pentagon Report) ತನ್ನ ವರದಿಯಲ್ಲಿ ತಿಳಿಸಿದೆ. ಭೂಗತ ಸಂಗ್ರಹ ಸೌಲಭ್ಯಗಳು, ಹೊಸ ರಸ್ತೆಗಳು, ಬಹು ಉದ್ದೇಶ ವಿಮಾನ ನಿಲ್ದಾಣ ಮತ್ತು ಸಾಕಷ್ಟು ಹೆಲಿಪ್ಯಾಡ್‌ಗಳನ್ನು ವಾಸ್ತವ ಗಡಿ ರೇಖೆಯಲ್ಲಿ ಬೀಜಿಂಗ್ (Beijing) ತನ್ನ ಸೇನಾ ಬಲ ಹೆಚ್ಚಿಸುವ ಭಾಗವಾಗಿ ಕೈಗೊಂಡಿದೆ ಎಂದು ಮಿಲಿಟರಿ ಆ್ಯಂಡ್ ಸೆಕ್ಯುರಿಟಿ ಡೆವಲಪ್‌ಮೆಂಟ್ಸ್ ಇನ್‌ವಾಲ್ವಿಂಗ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ -2023ರ ವರದಿಯಲ್ಲಿ ವಿವರವಾಗಿ ಮಾಹಿತಿ ನೀಡಲಾಗಿದೆ.

2020ರಿಂದಲೂ ಭಾರತ ಮತ್ತು ಚೀನಾ ಗಡಿಯಲ್ಲಿ ಸಂಘರ್ಷಮಯ ವಾತಾವರಣವಿದೆ. ವೆಸ್ಟರ್ನ್ ಕಮಾಂಡ್ ಪೂರ್ತಿ ಈ ಸಂಘರ್ಷದಲ್ಲೇ ತೊಡಗಿಕೊಂಡಿದೆ. ಎಲ್‌ಎಸಿಯ ಉದ್ದಕ್ಕೂ ಗಡಿ ಗುರುತಿಸುವಿಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ ವಿಭಿನ್ನ ಗ್ರಹಿಕೆಗಳು, ಎರಡೂ ಕಡೆಗಳಲ್ಲಿ ಇತ್ತೀಚಿನ ಮೂಲಸೌಕರ್ಯ ನಿರ್ಮಾಣದೊಂದಿಗೆ ಸೇರಿ, ಬಹು ಘರ್ಷಣೆಗಳು, ನಡೆಯುತ್ತಿರುವ ಬಿಕ್ಕಟ್ಟು ಮತ್ತು ಹಂಚಿದ ಗಡಿಯುದ್ದಕ್ಕೂ ಮಿಲಿಟರಿ ರಚನೆಗಳಿಗೆ ಕಾರಣವಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಚೀನಾ ವೆಸ್ಟರ್ನ್ ಥಿಯೇಟರ್ ಕಮಾಂಡ್, 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಗಲ್ವಾನ್ ಕಣಿವೆ ಸಂಘರ್ಷಕ್ಕೆ ಪ್ರತಿಯಾಗಿ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಎಲ್‌ಎಸಿ ಗಡಿಯಲ್ಲಿ ನಿಯೋಜಿಸಿತ್ತು. ಈ ಸೇನೆ ನಿಯೋಜನೆ ವರ್ಷ ಪೂರ್ತಿಯೂ ಇತ್ತ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತ ಮತ್ತು ಚೀನಾ ನಡುವಿನ ಮಾತುಕತೆಗಳು “ಗಡಿಯಲ್ಲಿ ಗ್ರಹಿಸಿದ ಅನುಕೂಲಗಳನ್ನು ಕಳೆದುಕೊಳ್ಳುವುದನ್ನು ಎರಡೂ ಕಡೆಯವರು ವಿರೋಧಿಸಿದ್ದರಿಂದ ಕನಿಷ್ಠ ಪ್ರಗತಿಯನ್ನು ಸಾಧಿಸಿದೆ” ಎಂದು ವರದಿ ಒತ್ತಿಹೇಳುತ್ತದೆ.

2022ರಲ್ಲಿ ಚೀನಾ, ವಾಸ್ತವ ಗಡಿ ರೇಖೆಗುಂಟ ತನ್ನ ಸೇನಾ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಿತು. ಡೋಕ್ಲಾಮ್ ಬಳಿಕ ಭೂಗತ ಸಂಗ್ರಹ ಸೌಲಭ್ಯಗಳು, ಎಲ್ಎಸಿ ಎಲ್ಲ ಮೂರು ವಲಯಗಳಲ್ಲಿ ಹೊಸ ರಸ್ತೆಗಳ ನಿರ್ಮಾಣ, ಭೂತಾನ್ ಗಡಿಯಲ್ಲಿರುವ ಪ್ರದೇಶದಲ್ಲಿ ಹೊಸ ಹಳ್ಳಿಗಳ ನಿರ್ಮಾಣ, ಪ್ಯಾಂಗಾಂಗ್ ಲೇಕ್‌ನಲ್ಲಿ ಎರಡನೇ ಸೇತುವೆ ನಿರ್ಮಾಣ, ಉಭಯ ಉದ್ದೇಶಗಳಿಗೆ ಬಳಕೆಯಾಗುವ ವಿಮಾನ ನಿಲ್ದಾಣ ಮತ್ತು ಬಹಳಷ್ಟು ಸಂಖ್ಯೆಯಲ್ಲಿ ಹೆಲಿಪ್ಯಾಡ್‌ಗಳ ನಿರ್ಮಾಣವು ಈ ಸೇನಾ ಮೂಲ ಸೌಕರ್ಯ ಅಭಿವೃದ್ದಿಯು ಒಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: US Restricts Trade: ಭಾರತ, ಚೀನಾದ 49 ಕಂಪನಿಗಳ ಜತೆಗಿನ ವ್ಯಾಪಾರಕ್ಕೆ ಅಮೆರಿಕ ನಿರ್ಬಂಧ; ಕಾರಣ ಏನು?

ಭಾರೀ ಸಂಖ್ಯೆಯಲ್ಲಿ ಸೇನೆ ನಿಯೋಜನೆ

2022 ರಲ್ಲಿ ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಮಿಲಿಟರಿ ಜಿಲ್ಲೆಗಳ ಎರಡು ವಿಭಾಗಗಳಿಂದ ಬೆಂಬಲಿತ ನಾಲ್ಕು ಸಂಯೋಜಿತ ಶಸ್ತ್ರಾಸ್ತ್ರ ದಳಗಳೊಂದಿಗೆ(CAB) ವಾಸ್ತವ ಗಡಿ ರೇಖೆಯ ಪಶ್ಚಿಮ ವಲಯದಲ್ಲಿಚೀನಾ ಒಂದು ಗಡಿ ರೆಜಿಮೆಂಟ್ ಅನ್ನು ನಿಯೋಜಿಸಿತು. ಅಲ್ಲದೇ, ಇತರ ಕಮಾಂಡ್‌ಗಳಿಂದ ಪೂರ್ವ ವಲಯದಲ್ಲಿ ಮೂರು ಲಘು-ಮಧ್ಯಮ ಕಂಬೈನ್ಡ್ ಆರ್ಮ್ಸ್ ಬ್ರಿಗೇಡ್ಸ್(CAB) ಮತ್ತು ವಾಸ್ತವ ಗಡಿ ರೇಖೆಯ ಕೇಂದ್ರ ವಲಯದಲ್ಲಿ ಹೆಚ್ಚುವರಿ ಮೂರು ಕ್ಯಾಬ್‌ಗಳನ್ನು ನಿಯೋಜಿಸಿತ್ತು. ಲಘ ರೆಜಿಮೆಂಟ್ ಕೆಲವು ವಾಪಸ್ ಕರೆದುಕೊಂಡರೆ, ಹೆಚ್ಚಿನವು ನಿರ್ದಿಷ್ಟ ಪ್ರದೇಶದಲ್ಲಿ ಉಳಿದಕೊಂಡವು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು ಜೂನ್ ತಿಂಗಳಲ್ಲಿ ಚೀನಾ ಜತೆಗನ ವಿವಾದವನ್ನು ಬಗೆಹರಿಸಲು ಭಾರತವು ಸೇನಾ ಹಾಗೂ ರಾಜತಾಂತ್ರಿಕ ಹಂತದಲ್ಲಿ ಮಾತುಕತೆ ನಡೆಸುತ್ತಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದರು. ಭಾರತವು ಎಂದಿಗೂ ತನ್ನ ಗಡಿಗಳನ್ನು ಉಲ್ಲಂಘನೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version