ಬೀಜಿಂಗ್: ಕೊರೊನಾ ಹೊಡೆತಕ್ಕೆ ಚೀನಾ ತತ್ತರಿಸಿ ಹೋಗಿದೆ. ಮುಂದಿನ ಮೂರು ತಿಂಗಳಲ್ಲಿ ಚೀನಾದಲ್ಲಿ ಸುಮಾರು 10 ಲಕ್ಷ ಜನ ಸೋಂಕಿನಿಂದ ಮೃತಪಡುತ್ತಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಒಂದೇ ದಿನ ಕಮ್ಯುನಿಸ್ಟ್ ರಾಷ್ಟ್ರದಲ್ಲಿ 3.7 ಕೋಟಿ ಜನರಿಗೆ ಸೋಂಕು (Covid Cases In China) ದೃಢಪಟ್ಟಿದೆ ಎಂದು ವರದಿಯೊಂದು ತಿಳಿಸಿದೆ. ಹಾಗೆಯೇ, ಜಾಗತಿಕವಾಗಿ ಒಂದೇ ದಿನದಲ್ಲಿ ದಾಖಲಾದ ಸೋಂಕಿನ ಪ್ರಕರಣಗಳಲ್ಲಿ ಚೀನಾ ದಾಖಲೆ ಬರೆದಿದೆ. ಇದುವರೆಗೆ ಒಂದೇ ದಿನ ದಾಖಲಾದ ಗರಿಷ್ಠ ಪ್ರಕರಣ 40 ಲಕ್ಷ ಇತ್ತು. ಆದರೆ, ಇದನ್ನೂ ಚೀನಾ ಮುರಿದಿದೆ. 2022ರ ಜನವರಿಯಲ್ಲಿ ಆಫ್ರಿಕಾದಲ್ಲಿ ಒಂದೇ ದಿನ 40 ಲಕ್ಷ ಕೇಸ್ ದಾಖಲಾಗಿದ್ದವು.
ವಾಸ್ತವ ಮುಚ್ಚಿಡುತ್ತಿರುವ ಚೀನಾ
ಮೊದಲಿನಿಂದಲೂ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಕುರಿತು ಚೀನಾ ಕಳ್ಳಾಟ ಆಡುತ್ತಿದೆ ಎಂಬ ಆರೋಪವಿದೆ. ಇದಕ್ಕೆ ನಿದರ್ಶನ ಎಂಬಂತೆ, ವರದಿಗಳ ಪ್ರಕಾರ ಡಿಸೆಂಬರ್ 20ರಂದು ಚೀನಾದಲ್ಲಿ 3.7 ಕೋಟಿ ಜನಕ್ಕೆ ಸೋಂಕು ದೃಢಪಟ್ಟಿದೆ. ಆದರೆ, ಚೀನಾ ಮಾತ್ರ ಡಿಸೆಂಬರ್ 20ರಂದು ಕೇವಲ 3,049 ಪ್ರಕರಣ ದಾಖಲಾಗಿವೆ ಎಂಬುದಾಗಿ ಅಧಿಕೃತ ಮಾಹಿತಿ ನೀಡಿದೆ. ಹಾಗಾಗಿ, ಇನ್ನೂ ಯಾವ ಯಾವ ಮಾಹಿತಿಯನ್ನು ಚೀನಾ ಅಡಗಿಸಿದೆ ಎಂಬ ಪ್ರಶ್ನೆಗಳು ಮೂಡಿವೆ. ಸಾವಿನ ಸಂಖ್ಯೆಯಂತೂ ನಿಗೂಢವಾಗಿಯೇ ಇದೆ.
ಕಮ್ಯುನಿಸ್ಟ್ ದೇಶದ 24 ಕೋಟಿ ಜನಕ್ಕೆ ಸೋಂಕು
ಚೀನಾದಲ್ಲಿ ಲಕ್ಷ ಅಲ್ಲ, ಒಂದು ಕೋಟಿ ಅಲ್ಲ, ಸುಮಾರು 24 ಕೋಟಿ ಮಂದಿಗೆ ಕೊರೊನಾ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಡಿಸೆಂಬರ್‌ನಲ್ಲಿ ಮೊದಲ 20 ದಿನದಲ್ಲಿ 240 ಕೋಟಿ ಸೋಂಕಿನ ಪ್ರಕರಣ ದಾಖಲಾಗಿವೆ. ಇದು ಚೀನಾದ ಶೇ.18ರಷ್ಟು ಜನಸಂಖ್ಯೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | ಚೀನಾದಲ್ಲಿ ಕೊರೊನಾ ಅಬ್ಬರ; ಬೀಜಿಂಗ್ಗೆ ಜ್ವರದ ಔಷಧ ಕಳಿಸಲು ಸಿದ್ಧ ಎಂದ ಭಾರತೀಯ ವಿದೇಶಾಂಗ ಸಚಿವಾಲಯ