Site icon Vistara News

ಹೆಚ್ಚು ವೇತನದ ಉದ್ಯೋಗಕ್ಕೆ ರಿಸೈನ್ ಮಾಡಿ, ವೇಟರ್​- ಕ್ಲೀನರ್​ ಆಗುತ್ತಿದ್ದಾರೆ ಯುವತಿಯರು!; ಯಾಕೆ ಹೀಗೆ?

Chinese Youth Leaving their high Salary jobs and working As waiters

#image_title

ದುಡಿಮೆ ಮಾಡುವುದೇ ದುಡ್ಡಿಗಾಗಿ. ಅದರಲ್ಲೂ ಈಗಿನ ಬೆಲೆ ಏರಿಕೆ ಕಾಲದಲ್ಲಿ ಒಳ್ಳೆ ಸಂಬಳದ ಕೆಲಸ ಹಿಡಿಯಲು ಪ್ರತಿಯೊಬ್ಬರೂ ಪ್ರಯತ್ನ ಮಾಡುತ್ತಾರೆ. ಎಷ್ಟು ವೇತನ ಇದ್ದರೂ ಸಾಕಾಗೋದಿಲ್ಲ ಎಂದೇ ಅನ್ನಿಸುತ್ತಿರುವ ಹೊತ್ತಲ್ಲೇ ಚೀನಾದಲ್ಲಿ ಯುವಜನತೆ (Chinese Youth), ತಮ್ಮ ಒಳ್ಳೊಳ್ಳೆ ಸಂಬಳದ ಉದ್ಯೋಗಗಳನ್ನು ಬಿಟ್ಟು, ಹೋಟೆಲ್​​ಗಳಲ್ಲಿ ವೇಟರ್​, ಕ್ಯಾಶಿಯರ್​, ಕ್ಲೀನರ್​ ಆಗಿ ಸೇರಿಕೊಳ್ಳುತ್ತಿದ್ದಾರಂತೆ. ಹೆಚ್ಚಿನ ವೇತನ ಸಿಗುವ ಉದ್ಯೋಗ ಬಿಟ್ಟು, ಹೋಟೆಲ್ ವೇಟರ್​, ಕ್ಯಾಶಿಯರ್​ ಆಗುತ್ತಿರುವವರ ಬಳಿ ‘ಯಾಕೆ’ ಹೀಗೆ ಎಂದು ಪ್ರಶ್ನೆ ಮಾಡಿದ್ದಾರೆ. ‘ನೆಮ್ಮದಿ’ಗಾಗಿ ಎಂಬ ಉತ್ತರ ಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ಈಗ ನಾವು ಮಾಡುತ್ತಿರುವ ಕೆಲಸದಲ್ಲಿ ನಮಗೆ ತೃಪ್ತಿ-ಸಂತೋಷ ಇದೆ ಎನ್ನುತ್ತಿದ್ದಾರೆ ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಹೀಗೆ ದೊಡ್ಡದೊಡ್ಡ ಉದ್ಯೋಗ ಬಿಟ್ಟು, ಸಣ್ಣಪುಟ್ಟ ಕೆಲಸ ಹಿಡಿದವರು, ತಮ್ಮ ಖುಷಿಯನ್ನು, ಹೊಸ ಸ್ವರೂಪದ ಕೆಲಸದ ಅನುಭವವನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ My First Physical Work Experience ಎಂಬ ಹ್ಯಾಷ್​ಟ್ಯಾಗ್​​ನಡಿ ಬರೆದುಕೊಳ್ಳುತ್ತಿದ್ದಾರೆ. ಚೀನಾದಲ್ಲಿ ಇನ್​ಸ್ಟಾಗ್ರಾಂ ಬದಲಿಗೆ ಬಳಸುವ ಸೋಷಿಯಲ್ ಮೀಡಿಯಾ Xiangshuದಲ್ಲಿ ಈಗ ಇಂಥ ಪೋಸ್ಟ್​ಗಳೇ ಜಾಸ್ತಿಯಾಗುತ್ತಿವೆ. ಈ ಹ್ಯಾಷ್​ಟ್ಯಾಗ್​ ಸಿಕ್ಕಾಪಟೆ ಟ್ರೆಂಡ್ ಆಗಿದೆ. ಇದರಡಿ ಪೋಸ್ಟ್​ ಆದ ಒಟ್ಟು ವಿಡಿಯೊಗಳಿಗೆ 30 ಮಿಲಿಯನ್​ಗೂ ಅಧಿಕ ವೀವ್ಸ್​ ಬಂದಿದೆ ಎಂದು ಚೀನಾ ಮಾಧ್ಯಮಗಳು ಕೂಡ ವರದಿ ಮಾಡಿವೆ.

ಅದರಲ್ಲೂ ಹೀಗೆ ಒಳ್ಳೆ ವೇತನದ ಜಾಬ್​ ಬಿಟ್ಟು, ಹೋಟೆಲ್​ನಲ್ಲಿ ವೇಟರ್​ ಆಗಿ, ಕ್ಯಾಶಿಯರ್ ಆಗಿ ಸೇರಿಕೊಳ್ಳುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಕೆಲವರಂತೂ ಚಿಕ್ಕ ಬಂಡವಾಳದಲ್ಲಿ ತರಕಾರಿ-ಹಣ್ಣು ಮಾರಾಟ ಮಾಡುತ್ತಿದ್ದಾರೆ. ಪುಟ್ಟ ಉಪಾಹಾರ ಗೃಹಗಳನ್ನು ಶುರು ಮಾಡಿದ್ದಾರಂತೆ. ಈ ಬಗ್ಗೆ 25ವರ್ಷದ ಯುವತಿಯೊಬ್ಬಳು ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ. ‘ನಾನು ಒಳ್ಳೆ ಕಂಪನಿಯಲ್ಲಿ ಉದ್ಯೋಗದಲ್ಲಿದ್ದೆ. ವೇತನವೂ ಚೆನ್ನಾಗಿಯೇ ಇತ್ತು. ಆದರೆ ದಿನಕ್ಕೆ ಲೆಕ್ಕವಿಲ್ಲದಷ್ಟು ಇಮೇಲ್​ಗಳು, ಸಂದರ್ಶನಗಳು, ಪಿಪಿಟಿಗಳು ನನ್ನ ನೆಮ್ಮದಿಯನ್ನೇ ಕೆಡಿಸಿತ್ತು. ಒತ್ತಡವೇ ಜಾಸ್ತಿಯಾಗುತ್ತಿತ್ತು. ಇದೀಗ ಆ ಉದ್ಯೋಗ ಬಿಟ್ಟು, ಪುಟ್ಟದಾದ ರೆಸ್ಟೋರೆಂಟ್​ನಲ್ಲಿ ಸರ್ವರ್ ಆಗಿದ್ದೇನೆ, ಖುಷಿಯಾಗಿದ್ದೇನೆ’ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: Hydropower Project: ಚೀನಾ ಗಡಿಯಲ್ಲಿ ಭಾರೀ ವೆಚ್ಚದ ಮೆಗಾ ಹೈಡ್ರೋಪವರ್ ಪ್ರಾಜೆಕ್ಟ್! 213 ಶತಕೋಟಿ ರೂ. ವೆಚ್ಚ

ಹಾಗೇ ಇನ್ನೊಬ್ಬಳು ಪೋಸ್ಟ್ ಹಾಕಿ ‘ನಾನು ಟಿಕ್​ಟಾಕ್​​ನ ಮಾತೃಸಂಸ್ಥೆ ಬೈಟ್​ ಡ್ಯಾನ್ಸ್​​ನಲ್ಲಿ ಇದ್ದೆ. ಆದರೀಗ ಅದನ್ನು ಬಿಟ್ಟು ಒಂದು ಉಪಾಹಾರಗೃಹ ಶುರು ಮಾಡಿಕೊಂಡಿದ್ದೇನೆ. ಅಲ್ಲಿ ನಾನು ಸ್ವತಃ ಅಡುಗೆ ಮಾಡುತ್ತೇನೆ. ನಾನೀಗ ಮಾಡುತ್ತಿರುವ ಕೆಲಸದಲ್ಲಿ ದೈಹಿಕ ಶ್ರಮ ಇದೆ. ಇಡೀ ದೇಹಕ್ಕೆ ಸುಸ್ತಾಗುತ್ತದೆ. ಆದರೆ ಮನಸಿಗೆ ತುಂಬ ನೆಮ್ಮದಿ ಇದೆ’ ಎಂದು ಹೇಳಿಕೊಂಡಿದ್ದಾಳೆ. ಹೀಗೆ ಚೀನಾದ ಹಲವರ ಪೋಸ್ಟ್​ಗಳು ವೈರಲ್ ಆಗುತ್ತಿವೆ. ಒಟ್ನಲ್ಲಿ ಚೀನಾ ಯುವಜನರು ಕಡಿಮೆ ಸಂಬಳವಾದರೂ, ಸರಿ ಮನಸಿಗೆ ತೃಪ್ತಿ ಬೇಕು..ಒತ್ತಡದಿಂದ ಮುಕ್ತಿ ಬೇಕು ಎನ್ನುತ್ತಿದ್ದಾರೆ.!

Exit mobile version