Site icon Vistara News

Viral Video: ಡ್ರೈವ್ ಮಾಡ್ತಿದ್ದಾಗಲೇ ಎಚ್ಚರ ತಪ್ಪಿದ ಶಾಲಾ ಬಸ್ ಚಾಲಕ​​; ಸಹಪಾಠಿಗಳ ಜೀವ ಉಳಿಸಿದ 7ನೇ ಕ್ಲಾಸ್​ ಹುಡುಗ!

Class 7 Student Saves Students life After School bus Driver fells Unconscious

#image_title

ಕೆಲವು ಮಕ್ಕಳು ತುಂಬ ಚುರುಕಾಗಿರುತ್ತಾರೆ. ತಮ್ಮ ಸಮಯಪ್ರಜ್ಞೆ-ಸಾಹಸದ ಪ್ರವೃತ್ತಿಯ ಕಾರಣಕ್ಕೇ ಸುದ್ದಿಯಾಗುತ್ತಾರೆ. ಅವರಿಗೇ ಗೊತ್ತಿಲ್ಲದಂತೆ ಅವರು ಒಂದು ಮಹತ್ಕಾರ್ಯ ಮಾಡಿಬಿಡುತ್ತಾರೆ. ಅಂಥವರ ಸಾಲಿಗೆ ಈಗ ಯುಎಸ್​​ನ 7ನೇ ತರಗತಿಯ ಹುಡುಗನೊಬ್ಬ ಸೇರಿದ್ದಾನೆ. ಶಾಲಾ ಬಸ್​​ನಲ್ಲಿ ತೆರಳುತ್ತಿದ್ದಾಗ, ಚಾಲಕ ಪೂರ್ತಿ ಸುಸ್ತಾಗಿ ಎಚ್ಚರ ತಪ್ಪುತ್ತಾರೆ. ಆಗ ಈ ಹುಡುಗ ಹಿಂದಿನಿಂದ ಓಡಿ ಬಂದು, ಬಸ್​ನ ಸ್ಟೀರಿಂಗ್​ ಹಿಡಿದು ನಿಯಂತ್ರಿಸುತ್ತಾನೆ. ಬಳಿಕ ಬಸ್​​ನ್ನು ನಿಲ್ಲಿಸುತ್ತಾನೆ. ಈ ಮೂಲಕ ಬಹುದೊಡ್ಡ ಅಪಾಯವೊಂದನ್ನು ತಪ್ಪಿಸಿದ್ದಾನೆ. ಅದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ (Viral Video) ಆಗುತ್ತಿದೆ.

Warren Consolidated Schools (ಜಿಲ್ಲಾ ಶಾಲೆಗಳ ಒಕ್ಕೂಟ)ನ ಯೂಟ್ಯೂಬ್​​ನಲ್ಲಿ ವಿಡಿಯೊ ಬಿಡುಗಡೆ ಮಾಡಲಾಗಿದೆ. ಆ ಶಾಲಾ ಬಸ್​​ನ ಡ್ರೈವರ್​ ಸೀಟ್​​ನ ಮೇಲ್ಭಾಗದಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಚಾಲಕ ಬಸ್​ ಡ್ರೈವ್ ಮಾಡುತ್ತಿರುತ್ತಾನೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಅವನು ಅಸ್ವಸ್ಥನಾದಂತೆ ಕಾಣುತ್ತಾನೆ. ತನ್ನ ಟೊಪ್ಪಿ ತೆಗೆದು ಗಾಳಿ ಬೀಸಿಕೊಳ್ಳುತ್ತಾನೆ. ಏನನ್ನೋ ಸೇವಿಸುತ್ತಾನೆ. ಆದರೆ ಬರುಬರುತ್ತ ಅವನು ಇನ್ನಷ್ಟು ಅಸ್ವಸ್ಥಗೊಂಡು, ಎಚ್ಚರ ತಪ್ಪುತ್ತಾನೆ. ಕೂಡಲೇ ಹಿಂದಿನಿಂದ ಓಡಿಬಂದ ದಿಲ್ಲಾನ್​ ರೀವ್ಸ್​ ಎಂಬ 7ವರ್ಷದ ಬಾಲಕ ಮೊದಲು ಬಸ್​​ನ ಸ್ಟೀರಿಂಗ್ ಹಿಡಿದುಕೊಳ್ಳುತ್ತಾನೆ. ನಂತರ ಆ ಗಾಡಿಯನ್ನು ಸುರಕ್ಷಿತವಾಗಿ ನಿಲ್ಲಿಸುತ್ತಾನೆ. ಅಷ್ಟಾದ ಮೇಲೆ ಹಿಂದಕ್ಕೆ ತಿರುಗಿನಿಂತು ತನ್ನ ಸಹಪಾಠಿಗಳ ಬಳಿ ‘ಯಾರಾದರೂ ಕೂಡಲೇ 911 (ತುರ್ತು ಸೇವೆ)ನಂಬರ್​​ಗೆ ಕರೆ ಮಾಡಿ ಎನ್ನುತ್ತಾನೆ. ಇವಿಷ್ಟೂ ಘಟನೆಯಾಗಿದ್ದು ಬುನರ್ಟ್ ರಸ್ತೆ ಬಳಿ ಇರುವ ಮೇಸೋನಿಕ್ ಬೌಲೆವಾರ್ಡ್ ಎಂಬಲ್ಲಿ ಎಂದು ವರದಿಯಾಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸ್ ಅಧಿಕಾರಿ ರಾಬರ್ಟ್​ ಲಿವರ್ನೊಯಿಸ್ ಅವರು ತಮ್ಮ ತಂಡದೊಂದಿಗೆ ಅಲ್ಲಿಗೆ ತೆರಳಿದ್ದಾರೆ. ಆ ಡ್ರೈವರ್​​ನ್ನು ಆಸ್ಪತ್ರೆಗೆ ದಾಖಲು ಮಾಡಿ, ಮಕ್ಕಳನ್ನು ಅವರವರ ಮನೆಗೆ ಸುರಕ್ಷಿತವಾಗಿ ಮುಟ್ಟಿಸಿದ್ದಾರೆ. ಬಸ್​ನಲ್ಲಿ 66 ಮಕ್ಕಳು ಇದ್ದರು ಎಂದು ಹೇಳಲಾಗಿದೆ. ದಿಲ್ಲಾನ್​ ರೀವ್ಸ್ ಸಾಹಸ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಆತನ ತಂದೆ-ತಾಯಿ ತುಂಬ ಹೆಮ್ಮೆ ವ್ಯಕ್ತಪಡಿಸಿದ್ದಾರೆ ‘ಪುಟ್ಟ ಹೀರೋ’ ಎಂದು ಬಣ್ಣಿಸಿದ್ದಾರೆ.

ಇಲ್ಲಿದೆ ನೋಡಿ, ವೈರಲ್ ವಿಡಿಯೊ

Exit mobile version