Site icon Vistara News

Columbia University: ಕೊಲಂಬಿಯಾ ವಿವಿ ಪ್ರವೇಶಿಸಿದ ನ್ಯೂಯಾರ್ಕ್‌ ಪೊಲೀಸರು; ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ಬಂಧನ

Columbia University

Columbia University

ವಾಷಿಂಗ್ಟನ್‌: ಹಲವು ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರು ಕ್ಯಾಂಪಸ್ ಆಕ್ರಮಿಸಿದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಗರದ ಪೊಲೀಸ್ ಅಧಿಕಾರಿಗಳು ಏಪ್ರಿಲ್ 30ರ ತಡರಾತ್ರಿ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯ (Columbia University)ಕ್ಕೆ ಪ್ರವೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಲಂಬಿಯಾ ವಿವಿ ಅಧಿಕಾರಿಗಳು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕ್ಯಾಂಪಸ್‌ ಪ್ರವೇಶಿಸಿದ್ದಾರೆ. ಪ್ರತಿಭಟನಾಕಾರರು ಆಕ್ರಮಿಸಿಕೊಂಡಿದ್ದ ಆಡಳಿತ ಕಟ್ಟಡವಾದ ಹ್ಯಾಮಿಲ್ಟನ್ ಹಾಲ್ ಅನ್ನು ಪೊಲೀಸರು ಸುತ್ತುವರಿದಿದ್ದಾರೆ. ಗಾಝಾದಲ್ಲಿನ ಇಸ್ರೇಲ್‌ ಮಿಲಿಟರಿ ಕ್ರಮವನ್ನು ವಿದ್ಯಾರ್ಥಿಗಳು ವಿರೋಧಿಸಿ ಈ ಹೋರಾಟವನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಕ್ಯಾಂಪಸ್‌ನಲ್ಲಿ ಪ್ರತಿಭಟನಾಕಾರರನ್ನು ಬಂಧಿಸುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕೆಲವು ವಿದ್ಯಾರ್ಥಿಗಳನ್ನು ವಶಕ್ಕೆ ಕ್ಯಾಂಪಸ್‌ನಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವಿವಿ ಹೇಳಿದ್ದೇನು?

ಘಟನೆ ಬಗ್ಗೆ ಮಾಹಿತಿ ನೀಡಿದ ಕೊಲಂಬಿಯಾ ವಿಶ್ವವಿದ್ಯಾನಿಲಯ ಅಧಿಕಾರಿಗಳು, ತಾವು ಪೊಲೀಸರನ್ನು ಸಂಪರ್ಕಿಸಿದ್ದಾಗಿ ತಿಳಿಸಿದ್ದಾರೆ. “ಏಪ್ರಿಲ್‌ 30ರ ರಾತ್ರಿ 9 ಗಂಟೆಯ ನಂತರ ನಮ್ಮ ಕೋರಿಕೆಯ ಮೇರೆಗೆ ಎನ್‌ವೈಸಿಪಿಡಿ (New York City Police Department) ಕ್ಯಾಂಪಸ್‌ಗೆ ಆಗಮಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ವಿವರಿಸಿದ್ದಾರೆ.

“ಹ್ಯಾಮಿಲ್ಟನ್ ಹಾಲ್ ಅನ್ನು ಪ್ರತಿಭನಾಕಾರರು ಆಕ್ರಮಿಸಿಕೊಂಡಿದ್ದಾರೆ. ಅಲ್ಲಿ ಗಲಭೆ ಎಬ್ಬಿಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯವು ತಿಳಿಸಿದ ನಂತರವವಷ್ಟೇ ನಾವು ಸ್ಥಳಕ್ಕೆ ತೆರಳಿದ್ದೆವು. ಪ್ರತಿಭನಾಕಾರರು ಕೊಲಂಬಿಯಾ ವಿವಿಯ ಸಾರ್ವಜನಿಕ ಸುರಕ್ಷತಾ ಸಿಬ್ಬಂದಿಯನ್ನು ಕಟ್ಟಡದಿಂದ ಬಲವಂತವಾಗಿ ಹೊರಹಾಕಿದ್ದರು. ಅಲ್ಲದೆ ನಮ್ಮ ತಂಡದ ಸದಸ್ಯರೊಬ್ಬರಿಗೆ ಬೆದರಿಕೆ ಹಾಕಿದ್ದರುʼʼ ಎಂದು ಪೊಲೀಸರು ಹೇಳಿದ್ದಾರೆ.

ಕಟ್ಟಡಕ್ಕೆ ನುಗ್ಗಿ ಆಕ್ರಮಿಸಿಕೊಂಡ ಗುಂಪನ್ನು ವಿಶ್ವವಿದ್ಯಾಲಯಕ್ಕೆ ಸಂಬಂಧವಿಲ್ಲದವರು ಅಂದರೆ ಹೊರಗಿನವರು ಮುನ್ನಡೆಸುತ್ತಿದ್ದಾರೆ ಎಂದು ವಿವಿ ಮೂಲಗಳು ಪುನರುಚ್ಚರಿಸಿವೆ. ನಿಯಮಗಳನ್ನು ಉಲ್ಲಂಘಿಸುವವರಿಗೆ ಮತ್ತು ಇಲ್ಲಿನವರಿಗೆ ತೊಂದರೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿವೆ.

ಏಪ್ರಿಲ್ 30ರಂದು ಅಪರಾಹ್ನ 2 ಗಂಟೆಯ ನಂತರ ಪ್ರತಿಭಟನಾಕಾರರು ಹ್ಯಾಮಿಲ್ಟನ್ ಹಾಲ್ ಅನ್ನು ಆಕ್ರಮಿಸಲು ಪ್ರಾರಂಭಿಸಿದರು. ನಂತರ ವಿಶ್ವವಿದ್ಯಾಲಯವು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ತನ್ನ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿತು. ʼʼಪ್ರತಿಭಟನೆಯ ಸಂಘಟಕರೊಂದಿಗೆ ರಾಜಿ ಮಾಡಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲವಾಗಿವೆʼʼ ಎಂದು ವಿಶ್ವವಿದ್ಯಾಲಯದ ಅಧ್ಯಕ್ಷ ಮಿನೌಚೆ ಶಫೀಕ್ ಈ ಹಿಂದೆ ಹೇಳಿದ್ದರು. ಪೊಲೀಸ್ ಅಧಿಕಾರಿಗಳ ಸಾಲು ಎರಡನೇ ಮಹಡಿಯ ಕಿಟಕಿಯ ಮೂಲಕ ಕಟ್ಟಡದೊಳಗೆ ಪ್ರವೇಶಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಮೇಲಿನ ಮಹಡಿಯನ್ನು ಪ್ರವೇಶಿಸಲು ಅವರು ಏಣಿ ಹೊಂದಿರುವ ವಾಹನವನ್ನು ಬಳಸಿದ್ದಾರೆ. ಈ ಮಧ್ಯೆ ಪೊಲೀಸರು ಕ್ಯಾಂಪಸ್‌ಗೆ ಪ್ರವೇಶಿಸಿರುವ ಕ್ರಮವನ್ನು ಕೆಲವು ಮುಖಂಡರು ಖಂಡಿಸಿದ್ದಾರೆ.

ಇದನ್ನೂ ಓದಿ: Israel Palestine War: 46 ದಿನಗಳಲ್ಲಿ 5,300ಕ್ಕೂ ಹೆಚ್ಚು ಪ್ಯಾಲೆಸ್ತೀನ್‌ ಮಕ್ಕಳ ಮರಣ

ಜೈಶ್ರೀರಾಮ್ ಘೋಷಣೆ ಕೂಗಿದ ಇಸ್ರೇಲ್ ಬೆಂಬಲಿಗರು!

ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇಸ್ರೇಲ್ ಬೆಂಬಲಿಗರು ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಯಲ್ಲಿ ಇಸ್ರೇಲ್ ಬೆಂಬಲಿಗರು ಜೈ ಶ್ರೀ ರಾಮ್ ಎಂಬ ಘೋಷಣೆ ಕೂಗಿದ್ದು ಗಮನ ಸೆಳೆದಿದೆ. ವಾರಾಂತ್ಯದಲ್ಲಿ ಯುಸಿಎಲ್ಎಯಲ್ಲಿ ಪ್ಯಾಲೆಸ್ತೀನ್‌ ಪರ ಮತ್ತು ಇಸ್ರೇಲ್ ಪರ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ತೀವ್ರಗೊಂಡಿದ್ದವು. ಈ ಗೊಂದಲದ ಮಧ್ಯೆ ಅಮೆರಿಕದ ರಾಷ್ಟ್ರೀಯವಾದಿಯೊಬ್ಬರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದರು.

Exit mobile version