Site icon Vistara News

Dawood Ibrahim: ವೃದ್ಧ ಡಾನ್‌ ದಾವೂದ್‌ ಇಬ್ರಾಹಿಂ ಈಗ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಕೈಗೊಂಬೆ?

Dawood Ibrahim

Dawood Ibrahim

ಇಸ್ಲಾಮಾಬಾದ್‌: ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (CIA)ಯು ಭೂಗತ ಪಾತಕಿ, ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್‌ ಇಬ್ರಾಹಿಂ(Dawood Ibrahim)ನನ್ನು ಪಾಕಿಸ್ತಾನದಲ್ಲಿರುವ ತನ್ನ ಆಪ್ತ ಎಂದು ಪರಿಗಣಿಸಿದೆ. ಇಷ್ಟರ ತನಕ ಪಾಕಿಸ್ತಾನ ಸಶಸ್ತ್ರ ಪಡೆಗಳ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI)ನ ಭಾಗವಾಗಿದ್ದ ದಾವೂದ್‌ನನ್ನು 2023ರ ಅಕ್ಟೋಬರ್ 1ರಂದು ಐಎಸ್‌ಐಯ ಮಹಾನಿರ್ದೇಶಕನನ್ನಾಗಿ ನೇಮಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿನ ಸುರಕ್ಷಿತ ಮನೆಗಳಿಗೆ ನಿರಂತರವಾಗಿ ಸ್ಥಳಾಂತರಗೊಳ್ಳುತ್ತಿರುವ ದಾವೂದ್ ಈಗ ಇಸ್ಲಾಮಾಬಾದ್‌ನಲ್ಲಿರುವ ಸಿಐಎ ಸ್ಟೇಷನ್ ನಿರ್ದೇಶಕರಿಗೆ ನೇರವಾಗಿ ವರದಿ ಮಾಡುತ್ತಿದ್ದಾನೆ. ಐಎಸ್ಐ ಈಗ ದಾವೂದ್‌ಗೆ ಏನಾದರೂ ಸಂದೇಶ ನೀಡಬೇಕಿದ್ದರೆ ಅದನ್ನು ಸಿಐಎ ಮೂಲಕವೇ ರವಾನಿಸಬೇಕಾಗುತ್ತದೆ ಎಂದು ಭಾರತೀಯ ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ದಾವೂದ್‌ನ ಕುಟುಂಬ ಸದಸ್ಯರಿಗೆ ಪಶ್ಚಿಮ ದೇಶಗಳಿಗೆ ಉಚಿತ ಪ್ರವೇಶವಿದೆ ಎಂದೂ ವರದಿ ಹೇಳಿದೆ.

ವೃದ್ಧಾಪ್ಯ (68) ಮತ್ತು ಅನಾರೋಗ್ಯದ ಹೊರತಾಗಿಯೂ ದಾವೂದ್ ಭಯೋತ್ಪಾದಕ ಚಟುವಟಿಕೆ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆಯ ಬೃಹತ್ ಸಾಮ್ರಾಜ್ಯದ ಮೇಲೆ ತನ್ನ ಹಿಡಿತ ಹೊಂದಿದ್ದಾನೆ. ದಾವೂದ್ ಅಫ್ಘಾನಿಸ್ತಾನದಲ್ಲಿ ಆಳವಾದ ಜಾಲವನ್ನು ಹೊಂದಿರುವ ಕಾರಣಕ್ಕೆ ಸಿಐಎ ಆತನ ಮೇಲೆ ವಿಶೇಷ ಗಮನ ಹರಿಸಿದೆ. ಜತೆಗೆ ದಾವೂದ್‌ ತಾಲಿಬಾನ್ ಆಡಳಿತದ ಜತೆಗೆ ಪಾಲುದಾರಿಕೆ ಹೊಂದಿದ್ದಾನೆ. 1993ರ ಮುಂಬೈ ಸರಣಿ ಸ್ಫೋಟಗಳನ್ನು ಕಾರ್ಯಗತಗೊಳಿಸಿದ ಟೈಗರ್ ಮೆಮನ್ ಸಹಾಯದಿಂದ ಅಫ್ಘಾನಿಸ್ತಾನದಲ್ಲಿ ಅಕ್ರಮವಾಗಿ ರತ್ನಗಳ ಗಣಿಗಾರಿಕೆ ನಡೆಸುವ ಮೂಲಕ ದೊಡ್ಡ ಪ್ರಮಾಣದ ಲಾಭವನ್ನು ಗಳಿಸುತ್ತಿದ್ದಾನೆ ಎನ್ನಲಾಗಿದೆ.

ತೀವ್ರ ಭಯ

ಇಷ್ಟೆಲ್ಲ ಚಟುವಟಿಕೆಯ ಹೊರತಾಗಿಯೂ ಡಾನ್‌ ದಾವೂದ್ ಭಾರತೀಯರ ಭಯದಲ್ಲಿಯೇ ದಿನ ದೂಡುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಅಡಗಿರುವ, ಭಾರತಕ್ಕೆ ಬೇಕಾದ ಹಲವು ಭಯೋತ್ಪಾದಕರು ʼಅಪರಿಚಿತ ವ್ಯಕ್ತಿʼಯ ಗುಂಡಿಗೆ ಬಲಿಯಾಗುತ್ತಿರುವುದು ದಾವೂದ್‌ನ ನಿದ್ದೆಗೆಡಿಸಿದೆ. ಈ ಬಗ್ಗೆ ಆತ ಭಯಭೀತನಾಗಿದ್ದಾನೆ. ಹೀಗಾಗಿ ಮೊದಲಿನಂತೆ ಮುಕ್ತವಾಗಿ ಓಡಾಡುತ್ತಿಲ್ಲ. ಅಲ್ಲದೆ ಈ ಹಿಂದಿನಂತೆ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾಕ್ಕೂ ಪ್ರವಾಸ ಹೋಗುತ್ತಿಲ್ಲ ಎಂದು ವರದಿ ತಿಳಿಸಿದೆ.

ವಿವಿಧ ಕಾಯಿಲೆ

ಕರ್ಮದ ಫಲ ಎನ್ನುವಂತೆ ದಾವೂದ್‌ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ತೀವ್ರವಾದ ಗ್ಯಾಸ್ಟ್ರಿಕ್‌ ಮತ್ತು ಆ್ಯಸಿಡಿಟಿಯಿಂದ ಆತನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಜತೆಗೆ ಅಧಿಕ ಮಟ್ಟದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದಾನೆ. ಈ ಹಿಂದೆ ಪಾಕಿಸ್ತಾನದ ಸೇನಾ ಉನ್ನತ ಅಧಿಕಾರಿಗಳು ಸೇರಿದಂತೆ ಗಣ್ಯರು ಆಯೋಜಿಸುತ್ತಿದ್ದ ರಾತ್ರಿ ಪಾರ್ಟಿಗಳಲ್ಲಿ ಪ್ರಮುಖ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದ ದಾವೂದ್‌ ಈಗ ಎಲ್ಲಿಗೂ ಹೋಗುತ್ತಿಲ್ಲ. ಹೀಗಾಗಿ ತನ್ನ ಕಾನೂನುಬಾಹಿರ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಛೋಟಾ ಶಕೀಲ್‌ನಂತಹ ಆಪ್ತ ಸಹಾಯಕರಿಗೆ ಬಿಟ್ಟಿದ್ದಾನೆ. ಆದರೆ ಐಎಸ್ಐ ಮತ್ತು ಈಗ ಸಿಐಎ ನೀಡಿದ ಜವಾಬ್ದಾರಿಗಳನ್ನು ಆತನೇ ನಿರ್ವಹಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಂತಹ ದೇಶದಲ್ಲಿ ಉಳಿದುಕೊಂಡಿದ್ದಕ್ಕಾಗಿ ದಾವೂದ್‌ಗೆ ಈಗಲೂ ವಿಷಾದವಿದೆ. ಶತಕೋಟಿ ಡಾಲರ್‌ಗಳನ್ನು ಗಳಿಸಿದ್ದರೂ ಸ್ವಾತಂತ್ರ್ಯ ಇಲ್ಲದ ಕಾರಣ ನೋವು ಅನುಭವಿಸುತ್ತಾನೆ. ಈಗಲೂ ಮೇಲಾಧಿಕಾರಿಗಳ ಆಜ್ಞೆಯನ್ನು ಪಾಲಿಸಬೇಕು ಎನ್ನುವ ಕೊರಗು ಕೂಡ ಆತನನ್ನು ಕಾಡುತ್ತಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Dawood Ibrahim: ದಾವೂದ್‌ ಇಬ್ರಾಹಿಂಗೆ ವಿಷಪ್ರಾಶನ? ಆಸ್ಪತ್ರೆಗೆ ದಾಖಲು

Exit mobile version