ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಮಿಡ್ ಟರ್ಮ್ ಎಲೆಕ್ಷನ್‌ನಲ್ಲಿ(2022 US Election) ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷವು ಸೆನೆಟ್‌ನಲ್ಲಿ ಪ್ರಾಬಲ್ಯವನ್ನು ಮೆರೆದಿದೆ. ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಜೋ ಬೈಡೆನ್, ರಿಪಬ್ಲಿಕನ್ ಪಾರ್ಟಿಯವರು ಈಗ ಅವರು ಯಾರೆಂದು ನಿರ್ಧರಿಸಲಿ ಎಂದು ವ್ಯಂಗ್ಯವಾಡಿದ್ದಾರೆ. ಮುಂದಿನ ಎರಡು ವರ್ಷಗಳವರೆಗೆ ಡೆಮಾಕ್ರಟಿಕ್ ಪಕ್ಷವು ಸೆನೆಟ್‌ನಲ್ಲಿ ತಮ್ಮ ಅಲ್ಪ ಬಹುಮತವನ್ನು ಕಾಯ್ದುಕೊಳ್ಳಲಿದೆ. ನೆವಡಾ ಮತ್ತು ಅರಿಝೋನಾ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳ ಗೆಲುವಿನೊಂದಿಗೆ ಸೆನೆಟ್‌ನಲ್ಲಿ ಮೇಲುಗೈ ಸಾಧಿಸಿದೆ.
ಸೆನೆಟ್‌ನಲ್ಲಿ ಈಗ ಡೆಮಾಕ್ರಟಿಕ್ ಪಕ್ಷವು 50 ಮತ್ತು ರಿಪಬ್ಲಿಕ್ ಪಾರ್ಟಿ 49 ಸ್ಥಾನಗಳನ್ನು ಹೊಂದಿದೆ. ಸೆನೆಟ್‌ನಲ್ಲಿ ಬಹುಮತವನ್ನು ಕಾಯ್ದುಕೊಳ್ಳುವುದು ಜೋ ಬೈಡೆನ್ ಅವರಿಗೆ ಅಗತ್ಯವಾಗಿದೆ. ಮುಂದಿನ ಎರಡು ವರ್ಷಗಳ ಕಾಲ ತಮ್ಮ ಸರ್ಕಾರದ ಕಾರ್ಯಸೂಚಿಯನ್ನು ಜಾರಿಗೆ ತರಲು ಇದರಿಂದ ಸಾಧ್ಯವಾಗಲಿದೆ. ಹಾಗಾಗಿ, ಡೆಮಾಕ್ರಟಿಕ್ ಪಕ್ಷಕ್ಕೆ ಸೆನೆಟ್‌ನಲ್ಲಿ ಬಹುಮತವನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿತ್ತು. ಈಗ ತೀರಾ ಅಲ್ಪ ಬಹುಮತವನ್ನು ಪಡೆದುಕೊಂಡಿದೆ. ಮತ್ತೊಂದೆಡೆ, ಕೆಳಮನೆಯಾಗಿರುವ ಯುಎಸ್ ಹೌಸ್‌ನಲ್ಲಿ ರಿಪಬ್ಲಿಕ್ ಪ್ರಾಬಲ್ಯ ಮೆರೆದಿದೆ.
ಅಲ್ಪ ಬಹುಮತವನ್ನು ಪಡೆದುಕೊಂಡ ಹೊರತಾಗ್ಯೂ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಅವರು ಪಕ್ಷವನ್ನು ಮುನ್ನಡೆಸುವುದು ಕಷ್ಟವಿದೆ. ಕೆಳಮನೆಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅತ್ಯುತ್ತಮ ಪ್ರದರ್ಶನವನ್ನು ತೋರಿಸಿಲ್ಲ. ಹಾಗಾಗಿ, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಬೈಡೆನ್ ಮೇಲೆ ವಿಶ್ವಾಸವನ್ನು ಇಡುವುದು ಬಹುತೇಕ ಕಷ್ಟ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಹಾಗಾಗಿ, ಕಮಲಾ ಹ್ಯಾರಿಸ್ ಸೇರಿದಂತೆ ಇತರ ನಾಯಕರು ಅಧ್ಯಕ್ಷೀಯ ಚುನಾವಣೆ ರೇಸ್‌ಗೆ ಮುಂದಾಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ | US Midterm Elections | ಅಮೆರಿಕ ಚುನಾವಣೆಯಲ್ಲಿ ಗೆದ್ದು ಇತಿಹಾಸ ಬರೆದ 23 ವರ್ಷದ ಭಾರತ ಮೂಲದ ನಬೀಲಾ ಸೈಯದ್