ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ಶಾಲಾ-ಕಾಲೇಜುಗಳಿಗೆ ರಜಾ ಇರುವಂತೆ, ಇನ್ನುಮುಂದೆ ಯುಎಸ್ನ ನ್ಯೂಯಾರ್ಕ್ನಲ್ಲೂ ಕೂಡ ದೀಪಾವಳಿಗೆ ಶಾಲೆಗಳಿಗೆ ರಜಾ (Diwali Holiday In New York) ಇರಲಿದೆ. ಇನ್ಮುಂದೆ ನ್ಯೂಯಾರ್ಕ್ನಲ್ಲಿ ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ಸಾರ್ವತ್ರಿಕ ರಜಾ ಕೊಡಲಾಗುವುದು ಎಂದು ಅಲ್ಲಿನ ಮೇಯರ್ ಎರಿಕ್ ಅಡಮ್ಸ್ (Mayor Eric Adams) ಸೋಮವಾರ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ನ್ಯೂಯಾರ್ಕ್ನಲ್ಲಿ ದೀಪಾವಳಿಯಂದು ಶಾಲೆಗಳಿಗೆ ಸಾರ್ವತ್ರಿಕ ರಜಾ (School Holiday) ಕೊಡಬೇಕು ಎಂಬ ಹೋರಾಟ ಮಾಡಿಕೊಂಡು ಬಂದಿದ್ದ ಭಾರತೀಯ ಸಮುದಾಯದವರು ಮತ್ತು ಇಲ್ಲಿನ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್ಕುಮಾರ್ ಅವರೊಂದಿಗೆ ನಾನೂ ದೃಢವಾಗಿ ನಿಂತಿದ್ದೆ. ಇದೀಗ ಆ ಹೋರಾಟಕ್ಕೆ ಜಯ ಸಿಕ್ಕಿದೆ. ಶುಭ ದೀಪವಳಿ’ ಎಂದಿದ್ದಾರೆ.
ಇನ್ನು ದೀಪಾವಳಿ ಹಬ್ಬದಂದು ನ್ಯೂಯಾರ್ಕ್ನಲ್ಲಿ ಶಾಲೆಗಳಿಗೆ ರಜಾ ಕೊಡಬೇಕು. ಮಕ್ಕಳು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಬೇಕು ಎಂಬ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್ಕುಮಾರ್ ಅವರು ಇದೀಗ ಖುಷಿ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರ ಬಹುಕಾಲದ ಬೇಡಿಕೆ ಇದಾಗಿತ್ತು. 2 ದಶಕಗಳಿಂದ ಈ ಬಗ್ಗೆ ಆಗ್ರಹ ಕೇಳಿಬಂದಿತ್ತು. ಅದೀಗ ಈಡೇರಿದ್ದು ತುಂಬ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ಹಾಗಿದ್ದಾಗ್ಯೂ ಈ ವರ್ಷ ನ್ಯೂಯಾರ್ಕ್ನಲ್ಲಿ ಶಾಲೆಗಳಿಗೆ ರಜೆ ಇರುವುದಿಲ್ಲ. ದೀಪಾವಳಿ ರಜೆಯ ಕಾನೂನು ರಚನೆಗೊಳ್ಳುವ ಮೊದಲೇ 2023-2024ನೇ ಸಾಲಿನ ಕ್ಯಾಲೆಂಡರ್ ಸಿದ್ಧವಾಗಿಬಿಟ್ಟಿತ್ತು. ಅದರಲ್ಲಿ ದೀಪಾವಳಿಗೆ ಶಾಲೆಗಳಿಗೆ ಸಾರ್ವತ್ರಿಕ ರಜಾ ಎಂದು ಪ್ರಕಟಿಸಿಲ್ಲ. ಇನ್ನು ಮಸೂದೆ ಪಾಸ್ ಆಗಿದ್ದು, ನ್ಯೂಯಾರ್ಕ್ ಸಿಟಿಯ ಗವರ್ನರ್ ಕ್ಯಾಥಿ ಹೋಚುಲ್ ಸಹಿ ಆಗುವುದು ಬಾಕಿ ಇದೆ. ಅದಾದ ಮೇಲೆ ಅಧಿಕೃತಗೊಳ್ಳಲಿದೆ. ಇನ್ನು ಭಾರತೀಯ ಸಮುದಾಯದ ಮಕ್ಕಳಂತೂ ದೀಪಾವಳಿ ಆಚರಣೆಗೆ ಶಾಲೆಗೆ ರಜಾ ಸಿಗುತ್ತಿರುವುದಕ್ಕೆ ಫುಲ್ ಖುಷಿಯಾಗಿದ್ದಾರೆ.
ಇದನ್ನೂ ಓದಿ: ದೀಪಾವಳಿಗೆ ಯುಎಸ್ನಲ್ಲಿ ಸಾರ್ವತ್ರಿಕ ರಜೆ ಕೊಡಬೇಕು; ಮಸೂದೆ ಮಂಡನೆ ಮಾಡಿದ ಅಮೆರಿಕ ಜನಪ್ರತಿನಿಧಿ
2023ರಿಂದ ನ್ಯೂಯಾರ್ಕ್ ಸಿಟಿಯಲ್ಲಿ ದೀಪಾವಳಿ ಹಬ್ಬದಂದು ಶಾಲೆಗಳಿಗೆ ಸಾರ್ವತ್ರಿಕ ರಜೆ ನೀಡಲಾಗುವುದು ಮೇಯರ್ ಎರಿಕ್ ಅಡಮ್ಸ್ ಅವರು ಕಳೆದವರ್ಷವೇ ಹೇಳಿದ್ದರು. ದೀಪಾವಳಿ ಹಬ್ಬ ಆಚರಣೆಗೆ ಪ್ರೋತ್ಸಾಹ ಕೊಡುವುದೇ ನಮ್ಮ ಪ್ರಮುಖ ಉದ್ದೇಶ. ನ್ಯೂಯಾರ್ಕ್ ಸಿಟಿಯಲ್ಲಿ ಅನೇಕರು ಈ ದೀಪಗಳ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅವರ ಸಂಭ್ರಮದಲ್ಲಿ ನಾವೂ ಜತೆಯಾಗುವ ಜತೆ, ಮಕ್ಕಳಿಗೆ ಹಬ್ಬಗಳ ಪ್ರಾಮುಖ್ಯತೆ ತಿಳಿಸಬೇಕು. ಶೈಕ್ಷಣಿಕವಾಗಿಯೂ ಇದು ಮಹತ್ವ ಪಡೆದಿದೆ. ದೀಪಗಳ ಹಬ್ಬ ದೀಪಾವಳಿ, ನಮ್ಮೊಳಗೂ ಕೂಡ ಬೆಳಕು ಮೂಡಿಸುತ್ತದೆ ಎಂಬುದು ಮಕ್ಕಳಿಗೆ ಅರ್ಥವಾಗಬೇಕು’ ಎಂದಿದ್ದರು.