ಬೆಂಗಳೂರು: ಆರೋಗ್ಯ ಸಮಸ್ಯೆ ಹಾಗೂ ವೈದ್ಯಕೀಯ ಸೇವೆಯ ಲಭ್ಯತೆಯ ಕಾರಣಕ್ಕೆ ಕೃತಕ ಗರ್ಭಧಾರಣೆ ಸಾಮಾನ್ಯ ಸಂಗತಿಯಾಗಿದೆ. ಮುಂದುವರಿದ ಹಾಗೂ ಪಾಶ್ಚಾತ್ಯ ದೇಶಗಳಲ್ಲಿನ ಕೌಟುಂಬಿಕ ವ್ಯವಸ್ಥೆಯ ಅಸಮತೋಲನದಿಂದಾಗಿ ಮಕ್ಕಳನ್ನು ಪಡೆಯಲು ಇಚ್ಛಿಸುವವರು ಈ ವಿಧಾನವನ್ನು ಅನುಸರಿಸುತ್ತಾರೆ. ಭಾರತದಲ್ಲಿ ಈ ವ್ಯವಸ್ಥೆ ಈಗ ಜನಪ್ರಿಯತೆ ಪಡೆಯುತ್ತಿದೆ. ಆದರೆ, ಅಮೆರಿಕದಲ್ಲಿ ಮೂರು ದಶಕಗಳ ಹಿಂದೆಯೇ ಇದನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತಿತ್ತು. ಇದು ವೈದ್ಯಕೀಯ ಕ್ಷೇತ್ರದಲ್ಲಿನ ದೊಡ್ಡ ಮೋಸಕ್ಕೂ ಕಾರಣವಾಗಿತ್ತು ಎಂಬುದು ಬಯಲಾಗತೊಡಗಿದೆ. ವೈದ್ಯರು ಅನಾಮಧೇಯ ವ್ಯಕ್ತಿಗಳ ವೀರ್ಯ ಬಳಸುವ ಬದಲು ತಮ್ಮದೇ ವೀರ್ಯವನ್ನು (Fertility Fraud) ಕೊಟ್ಟಿರುವುದು ಗೊತ್ತಾಗಿ ಕೇಸುಗಳು ಬೀಳುತ್ತಿವೆ. ಇಂಥದ್ದೇ ಒಂದು ಪ್ರಕರಣ ಅಮೆರಿಕದಲ್ಲಿ ಪತ್ತೆಯಾಗಿದೆ. 30 ವರ್ಷದ ಹಿಂದೆ ಕೃತಕ ಗರ್ಭಧಾರಣೆ ಪ್ರಕ್ರಿಯೆ ವೇಳೆ ವೈದ್ಯರೊಬ್ಬರು ನನಗೆ ಮೋಸ ಮಾಡಿದ್ದಾರೆ ಎಂಬುದಾಗಿ ಅಮೆರಿಕದ ಮಹಿಳೆ ಇದೀಗ ದೂರು ದಾಖಲಿಸಿದ್ದಾರೆ. ಅನಾಮಿಕ ವ್ಯಕ್ತಿಯ ವೀರ್ಯವನ್ನು ಸಂತಾನೋತ್ಪತ್ತಿಗೆ ಬಳಸುವ ಬದಲು ತನ್ನ ವೀರ್ಯವನ್ನೇ ಕೊಟ್ಟಿದ್ದಾರೆ ಎಂಬುದಾಗಿ 67 ವರ್ಷದ ಮಹಿಳೆ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಶರೋನ್ ಹೇಯ್ಸ್ ಎಂಬ ಮಹಿಳೆ 34 ವರ್ಷಗಳ ಹಿಂದೆ ಫಲವತ್ತತೆ ವೈದ್ಯ ಡಾ.ಡೇವಿಡ್ ಆರ್ ಕ್ಲೇಪೂಲ್ ಅವರಿಂದ ವೈದ್ಯಕೀಯ ನೆರವು ಪಡೆದಿದ್ದರು. ಇದೀಗ ಅವರು ಮೋಸ ಮಾಡಿರುವುದು ತಮ್ಮ ಪುತ್ರಿಯ ಡಿಎನ್ಎ ಪರೀಕ್ಷೆ ಬಳಿಕ ಗೊತ್ತಾಗಿದೆ. ಇದು ಮೋಸ ಎಂದು ಅವರು ಕಾನೂನು ಹೋರಾಟ ಆರಂಭಿಸಿದ್ದಾರೆ. ಅಂದ ಹಾಗೆ ನೆಟ್ಫ್ಲಿಕ್ಸ್ನಲ್ಲಿ ಅವರ್ ಫಾದರ್ ಎಂಬ ಡಾಕ್ಯುಮೆಂಟರಿ ಇದೆ. ಅದರಲ್ಲಿ ವೈದ್ಯನೊಬ್ಬ 94 ಮಕ್ಕಳಿಗೆ ತಂದೆಯಾಗಿರುವ ಮಾಹಿತಿಯನ್ನು ವಿವರಿಸಲಾಗಿದೆ. ಇದು ಕೂಡ ಅದೇ ಮಾದರಿಯ ಪ್ರಕರಣವಾಗಿದೆ.
ವೈದ್ಯ ತನ್ನದೇ ವೀರ್ಯ ಬಳಸಿರುವ ಮಾಹಿತಿ ಬೆಳಕಿಗೆ ಬರಲು ಡಿಎನ್ಎ ಪರೀಕ್ಷಾ ಕಿಟ್ಗಳ ಬಳಕೆ ಹೆಚ್ಚಾಗಿರುವುದೇ ಕಾರಣ. ಈ ಪರೀಕ್ಷೆಗಳು ಜನರಿಗೆ ತಮ್ಮ ಆನುವಂಶಿಕ ಪರಂಪರೆಯನ್ನು ಬಿಚ್ಚಿಡಲು ಅನುವು ಮಾಡಿಕೊಡುತ್ತದೆ ಎಂದು ಪರೀಕ್ಷೆಗಳನ್ನು ಮಾಡಿ ಮಾಹಿತಿ ದಾಖಲು ಮಾಡಲಾಗುತ್ತದೆ. ಆಗ ಮೋಸಗಳು ಬಹಿರಂಗೊಳ್ಳುತ್ತಿದೆ.
ಅಮೆರಿಕದ ಇಡಾಹೋದಲ್ಲಿ ವಾಸಿಸುತ್ತಿರುವ 67 ವರ್ಷದ ಶರೋನ್ ಹೇಯ್ಸ್, 1989ರಲ್ಲಿ ವಾಷಿಂಗ್ಟನ್ನ ಸ್ಪೋಕೇನ್ನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾಗಿದ್ದ ಡಾ.ಕ್ಲೇಪೂಲ್ ಅವರಿಂದ ಫಲವತ್ತತೆ ಚಿಕಿತ್ಸೆಯನ್ನು ಪಡೆದಿದ್ದರು. ಆ ಸಮಯದಲ್ಲಿ, ಮಹಿಳೆ ಮತ್ತು ಅವರ ಅಂದಿನ ಪತಿ ಮಗು ಪಡೆಯಲು ವಿಫಲವಾಗಿದ್ದ ಕಾರಣ ವೈದ್ಯರ ಮೊರೆ ಹೋಗಿದ್ದರು. ಚಿಕಿತ್ಸೆ ವೇಳೆ ಅನಾಮಧೇಯ ವ್ಯಕ್ತಿಯ ವೀರ್ಯಾಣು ದಾನಿಯನ್ನು ಹುಡುಕಲು ಮಹಿಳೆ ವೈದ್ಯರನ್ನು ವಿನಂತಿಸಿದ್ದರು. ಹುಟ್ಟಬೇಕಾಗಿರುವ ಮಗುವಿನ ಕೂದಲು ಮತ್ತು ಕಣ್ಣಿನ ಬಣ್ಣವನ್ನೂ ಆಯ್ಕೆ ಮಾಡಿದ್ದರು. ಅದಕ್ಕೆ ವೈದ್ಯರು ಒಪ್ಪಿದ್ದರು. ನಿರ್ದಿಷ್ಟ ಗುಣಲಕ್ಷಣಗಳ ಆಧಾರದ ಮೇಲೆ ದಾನಿಯನ್ನು ಆಯ್ಕೆ ಮಾಡುತ್ತೇನೆ ಮತ್ತು ದಾನಿಯ ಸಮಗ್ರ ಆರೋಗ್ಯ ಮತ್ತು ಆನುವಂಶಿಕ ತಪಾಸಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ವೈದ್ಯರು ಪ್ರತಿ ಚಿಕಿತ್ಸೆಗೆ 100 ಡಾಲರ್ ನಗದು ಸ್ವೀಕರಿಸಿದ್ದರು. ಹಣವನ್ನು ಕಾಲೇಜು ಅಥವಾ ವೈದ್ಯಕೀಯ ವಿದ್ಯಾರ್ಥಿಗಳು ವೀರ್ಯ ದಾನ ಮಾಡಿದರೆ ಅವರಿ ನೀಡುತ್ತೇನೆ ಎಂದಿದ್ದರು. ಆದರೆ, ಆ ರೀತಿ ಮಾಡದೇ ತನ್ನದೇ ವೀರ್ಯವನ್ನು ಮಹಿಳೆಯ ಗರ್ಭಕೋಶಕ್ಕೆ ಹಾಕಿ ಮೋಸ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ : Halloween party : ಪಾಕ್ನಲ್ಲಿ ಮತಾಂಧತೆಯ ಬೋಧನೆ, ಮೋಜು-ಮಸ್ತಿಗಿಲ್ಲ ಕಡಿಮೆ!
ವಂಶಾವಳಿ ಪರೀಕ್ಷೆಯಿಂದ ಬಯಲು
ಕಳೆದ ವರ್ಷದವರೆಗೂ ಅವರ 33 ವರ್ಷದ ಮಗಳು ಬ್ರಿಯಾನ್ನಾ ಹೇಯ್ಸ್ ತನ್ನ ಜೈವಿಕ ತಂದೆಯ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಬ್ರಿಯಾನ್ನಾ ತನ್ನ ಡಿಎನ್ಎಯನ್ನು ಜೆನೆಟಿಕ್ ಟೆಸ್ಟಿಂಗ್ ವೆಬ್ಸೈಟ್ಗೆ ಅಪ್ಲೋಡ್ ಮಾಡಿ ಜೈವಿಕ ತಂದೆಯ ಪತ್ತೆಗೆ ಮನವಿ ಮಾಡಿದ್ದರು. ಈ ವೇಳೆ ವೈದ್ಯನ ಡಿಎನ್ಎಗೆ ಬ್ರಿಯಾನ್ಸಾ ಅವರ ಡಿಎನ್ಎ ಮ್ಯಾಚ್ ಅಗಿತ್ತು. ಈ ಕುರಿತ ಮಾತನಾಡಿದ ಮಹಿಳೆ “ಇದು ಖಂಡಿತವಾಗಿಯೂ ಬಿಕ್ಕಟ್ಟಿನ ಸ್ಥಿತಿ. ಇದು ನನ್ನ ಜೀವನದುದ್ದಕ್ಕೂ ನನ್ನಿಂದ ಮರೆಮಾಚಲ್ಪಟ್ಟ ಸಂಗತಿ. ನನ್ನ ತಾಯಿಯ ಬಗ್ಗೆ ನನಗೆ ಆಘಾತವಾಯಿತು. ಇದೊಂದು ಸಮಂಜಸವಲ್ಲದ ವಿಚಾರ ಎಂದು ಬ್ರಿಯಾನ್ನಾ ಹೇಳಿಕೊಂಡಿದ್ದಾರೆ.
ಬ್ರಿಯಾನ್ನಾ ಇರುವ ಪರಿಸರದಲ್ಲಿಯೇ 16 ಸಹೋದರರು
ವೈದ್ಯ ಕ್ಲೇಪೋಲ್ ಕೇವಲ ಶೆರೋನ್ ಅವರಿಗೆ ಮಾತ್ರ ಮೋಸ ಮಾಡಿರಲಿಲ್ಲ. ತನ್ನ ಬಳಿಗೆ ಚಿಕಿತ್ಸೆಗೆ ಬಂದಿದ್ದ ಸಾಕಷ್ಟು ಮಹಿಳೆಯರ ಗರ್ಭಕೋಶಕ್ಕೆ ತನ್ನದೇ ವೀರ್ಯವನ್ನು ನೀಡಿದ್ದ. ಬ್ರಿಯಾನ್ನಾ ತನ್ನ ಡಿಎನ್ಎ ಯಾರೊಂದಿಗೆಲ್ಲ ಹೊಂದಾಣಿಕೆಯಾಗುತ್ತದೆ ಎಂದು ಪತ್ತೆ ಮಾಡಿದಾಗ ತನ್ನ ಮನೆಯ ಸುತ್ತಮುತ್ತಲಿನ ಹಲವಾರು ಮಂದಿ ಪತ್ತೆಯಾಗಿದ್ದಾರೆ. ಅವರೆಲ್ಲರೂ ಬ್ರಿಯಾನ್ನಾಗೆ ಸಹೋದರ, ಸಹೋದರಿಯರು. ಎಲ್ಲ ಮಹಿಳೆಯರಿಗೆ ಇದೇ ರೀತಿ ಮಾಡಿದ್ದ ಕಾರಣ ಹಲವಾರು ಮಕ್ಕಳು ಹುಟ್ಟಿದ್ದರು.
ಆನ್ಲೈನ್ ಡಿಎನ್ಎ ಸೇವೆಗಳು ಹೆಚ್ಚಾಗಿರುವ ಕಾರಣ “ಫಲವತ್ತತೆ ವಂಚನೆ” ಯ ಹಲವಾರು ಪ್ರಕರಣಗಳನ್ನು ಬೆಳಕಿಗೆ ತಂದಿದೆ. ವೀರ್ಯ ಮೋಸದ ಬಳಕೆಗೆ ಸಂಬಂಧಿಸಿದ ಆರೋಪಗಳನ್ನು 50ಕ್ಕೂ ಹೆಚ್ಚು ಯುಎಸ್ ಫಲವತ್ತತೆ ವೈದ್ಯರು ಎದುರಿಸುತ್ತಿದ್ದಾರೆ. ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರವು ಇಂಡಿಯಾನಾ ಫಲವತ್ತತೆ ತಜ್ಞರೊಬ್ಬರು ಗರ್ಭಧಾರಣೆ ಚಿಕಿತ್ಸೆಗಳನ್ನು ಒದಗಿಸುವಾಗ ರಹಸ್ಯವಾಗಿ 94 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದಾರೆ.
ಮಹತ್ವದ ಪ್ರಕರಣವೊಂದರಲ್ಲಿ, ಫಲವತ್ತತೆ ವೈದ್ಯರೊಬ್ಬರು ತಾಯಂದಿರನ್ನು ಗರ್ಭಧರಿಸಲು ತಮ್ಮ ಸ್ವಂತ ವೀರ್ಯವನ್ನು ಬಳಸಿದ್ದಾರೆ ಎಂದು ಆರೋಪಿಸಿದ ಮೂರು ಕುಟುಂಬಗಳಿಗೆ ಕೊಲೊರಾಡೊ ತೀರ್ಪುಗಾರರು ಸುಮಾರು 9 ಮಿಲಿಯನ್ ಡಾಲರ್ ಬಹುಮಾನ ನೀಡಿದ್ದಾರೆ.