Site icon Vistara News

Donald trump : ಡೊನಾಲ್ಡ್‌ ಟ್ರಂಪ್‌ಗೆ ಮುಳುವಾಗಿದ್ದು ಒಂದು ಫೋನ್‌ ಕಾಲ್‌!; ಏನಿದು ಜಾರ್ಜಿಯಾ ಚುನಾವಣಾ ಅಕ್ರಮ?

Donald trump case

ಜಾರ್ಜಿಯಾ: ಅಮೆರಿಕದ ಮಾಜಿ ಅಧ್ಯಕ್ಷ (Ex president of America) ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಗುರುವಾರ ಜಾರ್ಜಿಯಾದಲ್ಲಿ ಬಂಧನಕ್ಕೊಳಗಾಗಿ ಅಟ್ಲಾಂಟಾದ ಫುಲ್ಟನ್‌ ಕೌಂಟಿ ಜೈಲಿನಲ್ಲಿ (Atlanta Fulton county jail) 30 ನಿಮಿಷಗಳ ದಿಗ್ಬಂಧನದಲ್ಲಿದ್ದು, ಬಳಿಕ 2 ಲಕ್ಷ ಡಾಲರ್‌ ಬಾಂಡ್‌ನೊಂದಿಗೆ ಬಿಡುಗಡೆಗೊಂಡು ಹೊರಬಂದಿದ್ದಾರೆ. ಅವರ ಬಂಧನಕ್ಕೆ ಕಾರಣವಾಗಿದ್ದು ಚುನಾವಣಾ ಅಕ್ರಮ (Election Irregularities). 2020ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ (Presidential Election) ಸಂದರ್ಭದಲ್ಲಿ ಜಾರ್ಜಿಯಾ ರಾಜ್ಯದಲ್ಲಿನ ಚುನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡಲು ಪ್ರಯತ್ನಿಸಿದ್ದರು ಎಂಬುದು ಅವರ ಮೇಲೆ ಇರುವ ಆರೋಪ. ಇಂಥಹುದೊಂದು ಚುನಾವಣಾ ಅಕ್ರಮದ ಆರೋಪದೊಂದಿಗೆ ಜೈಲುಪಾಲಾದ ಅಮೆರಿಕದ ಮೊದಲ ಹಾಲಿ ಇಲ್ಲವೇ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಯೂ ಅವರನ್ನು ಸುತ್ತಿಕೊಂಡಿದೆ. ಹಾಗಂತ ಕ್ರಿಮಿನಲ್‌ ಪ್ರಕರಣಗಳು ಅಮೆರಿಕದ ಹಾಲಿ ಅಥವಾ ಮಾಜಿ ಅಧ್ಯಕ್ಷರಿಗೆ ಹೊಸತಲ್ಲ. ಡೊನಾಲ್ಡ್‌ ಟ್ರಂಪ್‌ ಅವರ ಹೆಸರಲ್ಲೇ ಈಗ ಮೂರು ಪ್ರಕರಣಗಳಿವೆ. ಹಾಗಿದ್ದರೆ ಈಗ ಸದ್ದು ಮಾಡಿರುವ ಈ ಚುನಾವಣಾ ಅಕ್ರಮದ ನಿಜವಾದ ಕಥೆಯೇನು?

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಏನಾಗಿತ್ತು?

2020ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಧಾನ ಹುರಿಯಾಳುಗಳಾಗಿದ್ದವರು ಆಗ ಹಾಲಿ ಅಧ್ಯಕ್ಷರಾಗಿದ್ದ ರಿಪಬ್ಲಿಕನ್‌ ಪಾರ್ಟಿಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಮತ್ತು ಡೆಮಾಕ್ರಟಿಕ್‌ ಪಾರ್ಟಿಯ ಅಭ್ಯರ್ಥಿ ಜೋ ಬೈಡೆನ್‌. ಅಂತಿಮವಾಗಿ 538 ಎಲೆಕ್ಟೋರಲ್‌ ಕೊಲೇಜ್‌ಗಳ ಪೈಕಿ ಜೋ ಬೈಡೆನ್‌ 306ರಲ್ಲಿ, ಅವರ ಪ್ರತಿಸ್ಪರ್ಧಿಯಾಗಿದ್ದ ಟ್ರಂಪ್‌ 232ರಲ್ಲಿ ಗೆಲುವು ಸಾಧಿಸಿ ಅಧ್ಯಕ್ಷ ಪಟ್ಟ ಜೋಬೈಡೆನ್‌ ಅವರಿಗೆ ಒಲಿದಿತ್ತು. ಜೋ ಬೈಡನ್‌ ಅವರಿಗೆ 8,12,83,501 ಮತಗಳು (51.3%) ಬಂದಿದ್ದರೆ, ಟ್ರಂಪ್‌ಗೆ 7,42,23,975 (46.8%) ಮತಗಳು ಬಂದಿತ್ತು.

Donald Trump and Jo Biden

ಜಾರ್ಜಿಯಾದ ಅಕ್ರಮದ ಕಥೆ ಏನು?

ಅಮೆರಿಕ ಚುನಾವಣೆಯಲ್ಲಿ ಜಾರ್ಜಿಯಾ ಅತ್ಯಂತ ಪ್ರಮುಖವಾದ ಭಾಗ. ಅದರಲ್ಲಿ ಗೆಲುವು ಸಾಧಿಸಬೇಕು ಎನ್ನುವುದು ಟ್ರಂಪ್‌ ಹಠವಾಗಿತ್ತು. ಆದರೆ, ಅಂತಿಮವಾಗಿ ಗಮನಿಸಿದಾಗ 11,783 ಮತಗಳು ಕಡಿಮೆ ಬೀಳುವ ಒಂದು ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಹೇಗಾದರೂ ಮಾಡಿ ಸರಿ ಮಾಡಬಹುದಾ ಎಂದು ಡೊನಾಲ್ಡ್‌ ಟ್ರಂಪ್‌ ಹಲವಾರು ಅಧಿಕಾರಿಗಳು, ವಕೀಲರುಗಳ ಜತೆ ಸೇರಿ ನಡೆಸಿದ ಸಂಚೇ ಈ ಅಕ್ರಮ. ನಿಜವೆಂದರೆ, ಚುನಾವಣೆ ನಡೆದ ಮೇಲೆ ಈ ಲೆಕ್ಕಾಚಾರ ಶುರುವಾಗಿದ್ದು. ಚುನಾವಣೆ ನಡೆದ ಮೇಲೆ ಮತಗಳ ಬದಲಾವಣೆ ಎನ್ನುವುದು ಅತ್ಯಂತ ಘೋರವಾದ ಅಪರಾಧ. ಹೀಗಾಗಿ ಅದು ಟ್ರಂಪ್‌ ಮತ್ತು ಅವರ ಜತೆ ಸೇರಿಕೊಂಡಿದ್ದಾರೆನ್ನಲಾದ 18 ಮಂದಿಗೆ ಮುಳುಗು ನೀರು ತಂದಿರುವುದು.

ಡೊನಾಲ್ಡ್‌ ಟ್ರಂಪ್‌ ಆವತ್ತು ಮಾಡಿದ ಒಂದು ಕುಖ್ಯಾತ ಕರೆ ಇಡೀ ಆರೋಪದ ಕೇಂದ್ರ ಬಿಂದು. ಆಗ ಅಧ್ಯಕ್ಷೀಯ ಪದವಿಯಲ್ಲಿದ್ದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಎಲ್ಲ ಅಧಿಕಾರಿಗಳ ಮೇಲೆ ಒಂದು ಹೋಲ್ಡ್‌ ಇತ್ತು. ಜತೆಗೆ ಉದ್ಯಮಿಯಾಗಿದ್ದರಿಂದ ಯಾರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಅರಿವು ಇತ್ತು. ಜಾರ್ಜಿಯಾದ ಚುನಾವಣೆ ನಡೆದ ಬಳಿಕ ಒಂದು ದಿನ ಡೊನಾಲ್ಡ್‌ ಟ್ರಂಪ್‌ ಅವರು ಆಗಿನ ವಿದೇಶಾಂಗ ಕಾರ್ಯದರ್ಶಿ ಬ್ರಾಡ್‌ ರಫೆನ್ಸ್‌ಪೆರ್ಜರ್‌ಗೆ ಒಂದು ಕರೆ ಮಾಡುತ್ತಾರೆ. ಅದರಲ್ಲಿ ಅವರು ಕೇಳುವ ಒಂದು ಪ್ರಶ್ನೆ: ಎಲ್ಲಿಂದಲಾದರೂ 11,780 ಮತಗಳನ್ನು ಹೊಂದಾಣಿಕೆ ಮಾಡಬಹುದಾ?! ಇಷ್ಟು ಮತಗಳ ಅಡ್ಜಸ್ಟ್‌ಮೆಂಟ್‌ ನಡೆದರೆ ಜಾರ್ಜಿಯಾದಲ್ಲಿ ಜೋ ಬೈಡೆನ್‌ ಅವರನ್ನು ಮೀರಿಸಬಹುದು ಎನ್ನುವುದು ಅವರ ಲೆಕ್ಕಾಚಾರವಾಗಿತ್ತು.

ಇದನ್ನೂ ಓದಿ: Donald trump: ಡೊನಾಲ್ಡ್‌ ಟ್ರಂಪ್‌ ಬಿಡುಗಡೆ; ಕೇವಲ 30 ನಿಮಿಷ ಜೈಲಿನಲ್ಲಿ, 2 ಲಕ್ಷ ಡಾಲರ್‌ ಬಾಂಡ್‌

ಆದರೆ, ಈ ಫೋನ್‌ ಕಾಲ್‌ನ ಬಗ್ಗೆ ಸದ್ದಾಗಿ ಅದು ಕೋರ್ಟ್‌ ಮೆಟ್ಟಿಲು ಏರಿತು. 2022ರ ಮೇ ತಿಂಗಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆಗಳು ನಡೆದವು. ಡೊನಾಲ್ಡ್‌ ಟ್ರಂಪ್‌ ಮತ್ತು 18 ಜನರ ವಿರುದ್ಧ ದೋಷಾರೋಪ ನಡೆಯಿತು. ಸುಮಾರು 75 ಸಾಕ್ಷಿದಾರರು ಟ್ರಂಪ್‌ ವಿರುದ್ಧ ಸಾಲುಗಟ್ಟಿ ನಿಂತಿದ್ದರು.

ವಿದೇಶಾಂಗ ಕಾರ್ಯದರ್ಶಿ ಬ್ರಾಡ್‌ ರಫೆನ್ಸ್‌ಪೆರ್ಜರ್‌ಗೆ ಮಾಡಿದ ಫೋನ್‌ ಕರೆಯನ್ನು ಟ್ಯಾಪ್‌ ಮಾಡಿ ರೆಕಾರ್ಡ್‌ ಮಾಡಿದ್ದು ಅದನ್ನು ಕೋರ್ಟ್‌ಗೆ ನೀಡಲಾಗಿತ್ತು. ಇದು ತಿರುಚಲಾಗದ ಸಾಕ್ಷಿಯಾಗಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ನಿಂತಿದೆ.

ಜಾರ್ಜಿಯಾದಲ್ಲಿರುವ ಪ್ರಭಾವ ಬಳಸಿ ಅಕ್ರಮ ನಡೆಸುವುದು ಮತ್ತು ಭ್ರಷ್ಟ ಸಂಘಟನೆಗಳ ನಿಗ್ರಹ (RICO) ಕಾಯಿದೆಯ ಅಡಿಯಲ್ಲಿ ಟ್ರಂಪ್‌ ಅವರ ವಿಚಾರಣೆಯನ್ನು ನಡೆಸಿ ಈಗ ಬಂಧಿಸಲಾಗಿದೆ. ಅವರ ಮೇಲೆ ಫೋರ್ಜರಿ, ಸಾರ್ವಜನಿಕರಿಗೆ ಮೋಸ, ಅಧಿಕಾರಿಗಳನ್ನು ಭ್ರಷ್ಟಗೊಳಿಸುವುದು, ಸುಳ್ಳು ಹೇಳಿಕೆ ಮತ್ತು ಸುಳ್ಳು ದಾಖಲೆಗಳನ್ನು ನೀಡಿದ ಆರೋಪಗಳಡಿ ಆರೋಪಿ ಎಂದು ನಿರ್ದೇಶಿಸಲಾಗಿದೆ.

ಇಷ್ಟೆಲ್ಲ ಆದರೂ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಡೊನಾಲ್ಡ್‌ ಟ್ರಂಪ್‌ ಅವರ ಪ್ರಯತ್ನಕ್ಕೆ ಇದರಿಂದ ಯಾವುದೇ ಅಡ್ಡಿಯಾಗುವುದಿಲ್ಲ. ಅವರು ಒಂದೊಮ್ಮೆ ಜೈಲಿನಲ್ಲೇ ಇದ್ದರೂ ಸ್ಪರ್ಧಿಸಬಹುದಾದ ಅವಕಾಶವಿದೆಯಂತೆ.

Exit mobile version