ನಖೋನ್ ನಯೋಕ್ (ಥೈಲ್ಯಾಂಡ್): ಇಲ್ಲಿನ ಗಾಲ್ಫ್ ಕೋರ್ಟ್‌ನ ಬಳಿಯ ಏಳು ಅಡಿ ಗುಂಡಿಗೆ ಆನೆ ಮತ್ತು ಅದರ ಮರಿ ಬಿದ್ದು ಅಪಾಯಕ್ಕೆ ಸಿಲುಕಿದ್ದವು. ಒಂದು ಕಡೆ ತಾಯಿ ತನ್ನ ಮಗುವನ್ನು ರಕ್ಷಿಸಿಕೊಳ್ಳಲು ಹೋಗಿ ಇನ್ನಷ್ಟು ಅಪಾಯಕ್ಕೆ ಸಿಲುಕಿದೆ. ಎರಡು ಕೂಡಾ ಮೇಲೆ ಬರಲಾಗದೆ ಲಾಕ್ ಆಗಿಬಿಟ್ಟವು. ಈ ವೇಳೆ ಪಶುವೈದ್ಯರ ತಂಡವೊಂದು ನಡೆಸಿದ ಅತ್ಯಂತ ಸಮಯಪ್ರಜ್ಞೆಯ ಕಾರ್ಯಾಚರಣೆ ಎರಡೂ ಜೀವಗಳನ್ನು ಉಳಿಸಿತು.
ಕಳೆದ ಬುಧವಾರ ಸುರಿದ ಭಾರಿ ಮಳೆಯ ವೇಳೆ ಒಂದು ವರ್ಷದ ಆನೆ ಮರಿ ಗೊತ್ತಾಗದೆ ದೊಡ್ಡ ಗುಂಡಿಯೊಳಗೆ ಅಚಾನಕ್ ಆಗಿ ಬಿದ್ದಿದೆ. ಇದನ್ನು ನೋಡಿದ ತಾಯಿ ಆನೆ ತನ್ನ ಮಗುವನ್ನು ರಕ್ಷಣೆ ಮಾಡಲು ಗುಂಡಿಯೊಳಗೆ ಇಳಿದಿದೆ, ಆರಂಭದಲ್ಲಿ ತನ್ನ ಕರುವಿನ ಮೇಲೆ ಕಾವಲು ನಿಂತರೂ ಸ್ವಲ್ಪ ಸಮಯದ ನಂತರ ತಾಯಿ ಆನೆಗೆ ನಿತ್ರಾಣವಾಗಿದೆ.
ಈ ವಿಚಾರ ಅಲ್ಲಿದ್ದ ಪಶುವೈದ್ಯರ ತಂಡಕ್ಕೆ ಗೊತ್ತಾಯಿತು. ಕೂಡಲೇ ಅವರು ಧಾವಿಸಿದರಾದರೂ ತಕ್ಷಣಕ್ಕೆ ರಕ್ಷಿಸುವ ಪರಿಸ್ಥಿತಿ ಇರಲಿಲ್ಲ. ಕೂಡಲೇ ಚೆರ‍್ರಿ ಪಿಕ್ಕರ್ ಕ್ರೇನ್ ತರಿಸಲಾಯಿತು. ಆದರೆ, ಹಾಗೆಯೇ ಆನೆಯನ್ನು ಮೇಲೆತ್ತುವ ಹಾಗಿರಲಿಲ್ಲ. ಯಾಕೆಂದರೆ, ಆನೆ ತನ್ನ ಮರಿಗಾಗಿ ಮತ್ತೆ ಗುಂಡಿಗೆ ಇಳಿಯುವ, ಘೀಳಿಟ್ಟು ಆನೆ ದಂಡನ್ನು ತರಿಸಿಕೊಳ್ಳುವ ಅಪಾಯವಿತ್ತು.
ಹೀಗಾಗಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅರಿವಳಿಕೆಯನ್ನು ನೀಡಿದರು. ಮೂರು ಇಂಜೆಕ್ಷನ್ ಎಸೆದು ಮತ್ತು ಬರಿಸಲಾಯಿತು. ಬಳಿಕ ಕ್ರೇನ್ ಮೂಲಕ ಮೇಲೆ ಎತ್ತಿ ಪಕ್ಕದಲ್ಲಿ ಮಲಗಿಸಲಾಯಿತು. ಈ ನಡುವೆ, ಗುಂಡಿಯ ಕಾಂಕ್ರೀಟ್ ಗೋಡೆ ಆನೆಯ ತಲೆಗೆ ತಾಗಿದ್ದರಿಂದ ಆನೆಗೆ ನಿದ್ದೆ ಬಂದಿದ್ದಷ್ಟೇ ಆಲ್ಲ, ಪ್ರಜ್ಞೆಯೇ ತಪ್ಪಿತ್ತು. ಆಗ ಇಡೀ ತಂಡ ಆನೆಯ ಮೇಲೆ ತೀವ್ರವಾದ ನಿಗಾವನ್ನು ಇಟ್ಟಿತು.
ಆನೆಯನ್ನು ಜಾಗೃತಗೊಳಿಸುವುದಕ್ಕಾಗಿ ಅದರ ಹೃದಯವನ್ನು ಪಂಪ್ ಮಾಡುವ ಹಾಗೆ ಒತ್ತಿ, ಆನೆಯ ಮೇಲೆ ಹತ್ತಿ ಪ್ರಯತ್ನಿಸಲಾಯಿತು. ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಬಳಸಿ ಹೃದಯವನ್ನು ಸಹಜ ಸ್ಥಿತಿಗೆ ತರಲಾಯಿತು.
ಈ ನಡುವೆ ಜೆಸಿಬಿ ಬಳಸಿ ಗುಂಡಿಯ ಒಂದು ಭಾಗವನ್ನು ಇಳಿಜಾರು ಮಾಡಲಾಯಿತು. ಈ ವೇಳೆ, ಮರಿ ಸಾಕಷ್ಟು ಪ್ರಯತ್ನ ಮಾಡಿ ತಾನೇ ಮೇಲೆದ್ದು ಬಂತು. ಮೇಲೆ ಬಂದಿದ್ದೇ ಆನೆ ಮರಿ ಕಿರಿಚುತ್ತಾ ತಾಯಿಯ ಹತ್ತಿರ ಓಡೋಡಿ ಹೋಗಿದೆ. ಅಮ್ಮ ಮಲಗಿರುವಿದನ್ನು ಕಂಡು ಎಬ್ಬಿಸಲು ಮುಂದಾಗಿದೆ. ಅವಳ ಎದೆಗೆ ತನ್ನ ಉಸಿರ ಸ್ಪರ್ಶ ನೀಡಿದೆ, ತನ್ನ ಮಗುವಿನ ಸಾಂಗತ್ಯದಿಂದ ತಾಯಿಗೆ ಉಸಿರು ಬಂದಿದೆ, ನಂತರ ತಾಯಿ-ಮಗು ಎರಡು ಕಾಡು ಸೇರಿವೆ.
ಇದನ್ನು ನೋಡಿದ ಪಶುವೈದೈ ಆನಂದ ಭಾಷ್ಪ ಹಾಕಿದ್ದಾರೆ, ಅವರ ಜೀವನದಲ್ಲಿ ಅತೀ ದೊಡ್ಡ ರಕ್ಷಣಾ ಕಾರ್ಯ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ| ಗಾಢನಿದ್ರೆಯಲ್ಲಿದ್ದ ಕಂದನನ್ನು ಎಬ್ಬಿಸಲು ಮಾವುತನನ್ನೇ ಕರೆ ತಂದ ತಾಯಿ ಆನೆ