ವಾಷಿಂಗ್ಟನ್: ಟ್ವಿಟರ್ ಖರೀದಿ ಬೆನ್ನಲ್ಲೇ ಎಲಾನ್ ಮಸ್ಕ್ (Elon Musk) ಅವರು ಸಿಇಒ ಪರಾಗ್ ಅಗ್ರವಾಲ್ ಅವರನ್ನು ವಜಾಗೊಳಿಸಿದರು. ಅಲ್ಲದೆ, ಕಂಪನಿಯ ಬಹುತೇಕ ಉದ್ಯೋಗಿಗಳನ್ನು ವಜಾಗೊಳಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಒಬ್ಬನ ಕೆಲಸವನ್ನು ಹತ್ತು ಜನ ಕೆಲಸ ಮಾಡುತ್ತಿದ್ದಾರೆ ಎಂದು ಮಸ್ಕ್ ಅವರೇ ಹೇಳಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಎಲಾನ್ ಮಸ್ಕ್ ಈಗ ಟ್ವಿಟರ್ ಆಡಳಿತ ಮಂಡಳಿಯನ್ನೇ ವಿಸರ್ಜಿಸಿದ್ದಾರೆ. ಅಲ್ಲದೆ, ಅವರೊಬ್ಬರೇ ಮಂಡಳಿ ನಿರ್ದೇಶಕರಾಗಿದ್ದಾರೆ.
ಕಳೆದ ಶುಕ್ರವಾರ ಮಸ್ಕ್ ಅವರು ಟ್ವಿಟರ್‌ಅನ್ನು ಖರೀದಿಸಿದ್ದರು. ಇದಾದ ಬಳಿಕ ಸಿಇಒ ಸ್ಥಾನದಿಂದ ಪರಾಗ್ ಅಗ್ರವಾಲ್ ಅವರನ್ನು ವಜಾಗೊಳಿಸಿದ್ದರು. ಈಗ ಇಡೀ ಮಂಡಳಿಯನ್ನು ವಿಸರ್ಜಿಸಿದ ಕಾರಣ ಪರಾಗ್ ಅಗ್ರವಾಲ್, ಚೇರ್ಮನ್ ಬ್ರೆಟ್ ಟೇಲರ್ ಅವರು ಕೂಡ ನಿರ್ದೇಶಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಮಸ್ಕ್ ಈಗ ಟ್ವಿಟರ್‌ನ ಏಕಮೇವ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಮಸ್ಕ್ ಈ ಮಂಡಳಿ ಸೇರಲು ಪರಾಗ್ ಅಗ್ರವಾಲ್ ವಿರೋಧಿಸಿದ್ದರು. ಆದರೀಗ, ಅಗ್ರವಾಲ್ ಅವರೇ ಮಂಡಳಿಯ ನಿರ್ದೇಶಕ ಸ್ಥಾನ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಚೀಫ್ ಫೈನಾನ್ಶಿಯಲ್ ಆಫಿಸರ್ ನೆಡ್ ಸೆಗಲ್, ಕಾನೂನು ಪಾಲಿಸಿ, ವಿಶ್ವಾಸಾರ್ಹತೆ ಹಾಗೂ ಸುರಕ್ಷತೆ ವಿಭಾಗದ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನೂ ಮಸ್ಕ್ ವಜಾಗೊಳಿಸಿದ್ದಾರೆ. ಸದ್ಯ ಟ್ವಿಟರ್‌ನಲ್ಲಿ ಎಲಾನ್ ಮಸ್ಕ್ ಬಯೋ “Chief Twit” ಎಂದು ಇದೆ.
ಇದನ್ನೂ ಓದಿ | Twitter | ಟ್ವಿಟರ್‌ನಲ್ಲಿ ಬ್ಲೂ ಟಿಕ್ ಮಾರ್ಕ್ ಬೇಕಿದ್ದರೆ ತಿಂಗಳಿಗೆ 1,600 ರೂ. ಶುಲ್ಕ ಅನ್ವಯ: ಎಲಾನ್ ಮಸ್ಕ್