Site icon Vistara News

Narendra Modi | ಮೋದಿ ನಡೆಯನ್ನೇ ಎಲ್ಲ ರಾಷ್ಟ್ರಗಳೂ ಅನುಸರಿಸಬೇಕು ಎಂದು ಅಮೆರಿಕ ಹೇಳಿದ್ದೇಕೆ?

Modi-Putin

ವಾಷಿಂಗ್ಟನ್: ಜಾಗತಿಕವಾಗಿ ಭಾರತ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಮನ್ನಣೆ ದೊರೆತಿದೆ. ಅದರಲ್ಲೂ, ಉಕ್ರೇನ್ ಮೇಲೆ ರಷ್ಯಾ ಮಾಡಿದ ಆಕ್ರಮಣದ ಬಳಿಕವೂ ಭಾರತವು ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತ ಚಲಾಯಿಸದ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಇತ್ತೀಚೆಗೆ ಉಜ್ಬೇಕಿಸ್ತಾನದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ದಾಳಿ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಅಮೆರಿಕ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. “ಮೋದಿ ಅವರ ನಡೆಯನ್ನೇ ಎಲ್ಲ ರಾಷ್ಟ್ರಗಳೂ ಅನುಸರಿಸಬೇಕು” ಎಂದಿದೆ.

ಸಮರ್ಕಂಡ್‌ನಲ್ಲಿ ನಡೆದ ಎಸ್‌ಸಿಒ ಸಭೆಯ ಮಧ್ಯೆಯೇ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿದ್ದರು. “ಯುದ್ಧಕ್ಕೆ ಇದು ಕಾಲವಲ್ಲ. ನಾನು ಇದನ್ನೇ ನಿಮ್ಮ ಜತೆ ಫೋನ್‌ನಲ್ಲಿ ಮಾತನಾಡಿದ್ದೇನೆ” ಎಂಬುದಾಗಿ ಮೋದಿ ಒತ್ತಿ ಹೇಳಿದ್ದರು. ಇದು ಉಕ್ರೇನ್‌ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದರು.

“ನರೇಂದ್ರ ಮೋದಿ ಅವರು ಯುದ್ಧದ ವಿಚಾರದಲ್ಲಿ ತೆಗೆದುಕೊಂಡ ನಿಲುವನ್ನು ಅಮೆರಿಕ ಸ್ವಾಗತಿಸುತ್ತದೆ. ಅವರ ನೇತೃತ್ವವೂ ನಮಗೆ ಮೆಚ್ಚುಗೆಯಾಗಿದೆ. ಭಾರತದ ರೀತಿ ಪ್ರತಿಯೊಂದು ರಾಷ್ಟ್ರಗಳೂ ಯುದ್ಧ ಅಂತ್ಯಗೊಳಿಸುವ ಕುರಿತು ನಿಲುವು ತಾಳಬೇಕು. ಮೋದಿ ಅವರ ನಡೆಯನ್ನು ಅನುಸರಿಸಬೇಕು” ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವನ್‌ ಹೇಳಿದ್ದಾರೆ. “ಭಾರತದ ರೀತಿ ಬಹಿರಂಗವಾದರೂ ಸರಿ, ವೈಯಕ್ತಿಕವಾದರೂ ಸರಿ, ಯುದ್ಧ ಅಂತ್ಯಗೊಳಿಸುವ ಕುರಿತು ಒತ್ತಾಯಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ಡಾಲರ್‌ಗೆ ಭಾರತ-ರಷ್ಯಾ ಡೋಂಟ್‌ ಕೇರ್, ಇನ್ಮುಂದೆ ರೂಪಾಯಿ-ರುಬೆಲ್‌ ದರ್ಬಾರ್!

Exit mobile version