ರೋಮ್: ಹೆಚ್ಚು ಆಸ್ತಿ ಮಾಡಿರುವವರು ಸೇರಿ ಯಾರೇ ಆಗಲಿ, ತಾವು ಅಗಲಿದ ನಂತರ ತಮ್ಮ ಆಸ್ತಿಯನ್ನು ಮಕ್ಕಳಿಗೆ, ಮೊಮ್ಮಕ್ಕಳಿಗೆ ಸೇರಲಿ ಎಂದು ವಿಲ್ ಬರೆದಿಡುತ್ತಾರೆ. ಅದರಂತೆ, ಅವರ ಕಾಲಾನಂತರ ಮಕ್ಕಳೋ, ಮೊಮ್ಮಕ್ಕಳೋ ಆಸ್ತಿಯನ್ನು ಅನುಭವಿಸುತ್ತಾರೆ. ಇನ್ನು ಮಕ್ಕಳಿರದವರು ಸಂಬಂಧಿಕರಿಗೋ, ಅನಾಥಾಶ್ರಮಕ್ಕೋ ಆಸ್ತಿಯನ್ನು ಬರೆದಿಡುತ್ತಾರೆ. ಆದರೆ, ಕೆಳೆದ ತಿಂಗಳು ಮೃತಪಟ್ಟ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ (Silvio Berlusconi) ಅವರು ಸಾಯುವ ಮೊದಲು ತಮ್ಮ ಗರ್ಲ್‌ಫ್ರೆಂಡ್‌ಗೆ 905 ಕೋಟಿ ರೂ. ಮೌಲ್ಯದ (100 ದಶಲಕ್ಷ ಯುರೋ) (Viral News) ಆಸ್ತಿಯನ್ನು ಬರೆದಿಟ್ಟಿದ್ದಾರೆ.
ಮಾರ್ಟಾ ಫೆಸಿನಾ (33) ಅವರು ಸಿಲ್ವಿಯೋ ಬೆರ್ಲುಸ್ಕೋನಿ ಅವರ ಗರ್ಲ್‌ಫ್ರೆಂಡ್ ಆಗಿದ್ದರು. ಇಬ್ಬರೂ ಒಟ್ಟಿಗೆ ತಿರುಗಾಡುವ, ಜತೆಗೇ ಊಟ ಮಾಡುವ ಫೋಟೊಗಳು ವೈರಲ್ ಆಗಿದ್ದವು. ಮೂರು ಬಾರಿ ಪ್ರಧಾನಿಯಾಗಿದ್ದ ಸಿಲ್ವಿಯೋ ಬೆರ್ಲುಸ್ಕೋನಿ ಅವರು ಕಳೆದ ತಿಂಗಳು ಮೃತಪಟ್ಟಿದ್ದು, ಸಾಯುವ ಮುನ್ನ ಅವರು ಗೆಳತಿಗೆ 905 ಕೋಟಿ ರೂ. ಮೌಲ್ಯದ ಆಸ್ತಿ ಸೇರಬೇಕೆಂದು ವಿಲ್‌ನಲ್ಲಿ ಬರೆದಿದ್ದಾರೆ. ಅಂದಹಾಗೆ, ಸಿಲ್ವಿಯೋ ಬೆರ್ಲುಸ್ಕೋನಿ ಒಟ್ಟು ಆಸ್ತಿಯ ಮೌಲ್ಯ 6 ಶತಕೋಟಿ ಯುರೋ ಎಂದು ತಿಳಿದುಬಂದಿದೆ.
ಸಿಲ್ವಿಯೋ ಬೆರ್ಲುಸ್ಕೋನಿ ಹಾಗೂ ಮಾರ್ಟಾ ಫೆಸಿನಾ ಅವರು ಮದುವೆಯಾಗಿರಲಿಲ್ಲ. ಇವರಿಬ್ಬರೂ ಪ್ರೀತಿಯ ಬಲೆಯಲ್ಲಿ ಸಿಲುಕಿರುವ ಕುರಿತು 2020ರ ಮಾರ್ಚ್‌ನಲ್ಲಿ ಸುದ್ದಿಯಾಗಿತ್ತು. ಸಿಲ್ವಿಯೋ ಬೆರ್ಲುಸ್ಕೋನಿ ಅವರು ಫೆಸಿನಾ ಅವರನ್ನು ಮದುವೆಯಾಗದಿದ್ದರೂ ಹೆಂಡತಿ ಎಂದೇ ಭಾವಿಸಿದ್ದರು ಎನ್ನಲಾಗಿದೆ. ಇದಕ್ಕಾಗಿ ಅವರು ನೂರಾರು ಕೋಟಿ ರೂಪಾಯಿಯನ್ನು ಆಸ್ತಿ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಫೆಸಿನಾ ಅವರು ಇಟಲಿ ಕೆಳಮನೆಯ ಸದಸ್ಯೆಯೂ ಆಗಿದ್ದರು.
ಸಿಲ್ವಿಯೋ ಬೆರ್ಲುಸ್ಕೋನಿ ಅವರು ದೊಡ್ಡ ಉದ್ಯಮಿಯಾಗಿದ್ದರು. ಹಾಗಾಗಿ, ಗರ್ಲ್‌ಫ್ರೆಂಡ್ ಜತೆಗೆ ಅವರ ಕುಟುಂಬಸ್ಥರಿಗೂ ಆಸ್ತಿ ಬರೆದಿದ್ದಾರೆ. ಸಹೋದರ ಪಾವೋಲೊ ಅವರಿಗೆ 100 ದಶಲಕ್ಷ ಯುರೋ, ಇಬ್ಬರು ಮಕ್ಕಳಿಗೆ ಕಂಪನಿಯಲ್ಲಿ ಶೇ.53ರಷ್ಟು ಶೇರ್‌ಗಳನ್ನು ನೀಡಿದ್ದಾರೆ. ಸಿಲ್ವಿಯೋ ಬೆರ್ಲುಸ್ಕೋನಿ ಅವರು ಜೂನ್ 12ರಂದು ಮೃತಪಟ್ಟಿದ್ದಾರೆ. ಇವರಿಗೆ ಇಬ್ಬರು ಹೆಂಡತಿಯರು ಇದ್ದರು. ಇಬ್ಬರಿಗೂ ವಿಚ್ಛೇದನ ನೀಡಿದ್ದ ಸಿಲ್ವಿಯೋ ಬೆರ್ಲುಸ್ಕೋನಿ, ಫೆಸಿನಾ ಪ್ರೀತಿಯ ಬಲೆಗೆ ಬಿದ್ದಿದ್ದರು.