Site icon Vistara News

Facebook turns 20: ಫೇಸ್‌ಬುಕ್‌ಗೆ ಇಪ್ಪತ್ತು ವರ್ಷ; ಅಂದಿನ ದಿನಗಳನ್ನು ಮೆಲುಕು ಹಾಕಿಕೊಂಡ ಜುಕರ್‌ಬರ್ಗ್‌

facebook

facebook

ನವದೆಹಲಿ: ಜಗತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾದ ಫೇಸ್‌ಬುಕ್‌ ಆರಂಭವಾಗಿ 20 ವರ್ಷವಾಗಿದೆ (Facebook turns 20). 2004ರಲ್ಲಿ ಇದು ಆರಂಭವಾಗಿತ್ತು. 2004ರ ಫೆಬ್ರವರಿ 4ರಂದು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ (Harvard University) ವಿದ್ಯಾರ್ಥಿಯಾಗಿದ್ದ 19 ವರ್ಷದ ಮಾರ್ಕ್ ಜುಕರ್‌ಬರ್ಗ್‌ (Mark Zuckerberg) ತಮ್ಮ ರೂಮ್‌ಮೇಟ್‌ನೊಂದಿಗೆ ʼದಿ ಫೇಸ್‌ಬುಕ್‌ʼ ಎನ್ನುವ ಹೆಸರಿನೊಂದಿಗೆ ಈ ಸೋಷಿಯಲ್‌ ಮೀಡಿಯಾವನ್ನು ಪ್ರಾಂಭಿಸಿದ್ದರು. ಇದೀಗ 20 ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಾರ್ಕ್ ಜುಕರ್‌ಬರ್ಗ್‌ ತಮ್ಮ ಅಂದಿನ ಪ್ರೊಫೈಲ್‌ ಪೇಜ್‌ನ ಫೋಟೊವನ್ನು ಹಂಚಿಕೊಂಡಿದ್ದಾರೆ.

ಇದರ ಜತೆಗೆ ಎರಡು ದಶಕಗಳ ಪ್ರಮುಖ ಕ್ಷಣಗಳನ್ನು ಒಳಗೊಂಡ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಂದಿನ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆಯುತ್ತಿದೆ.

ವಿಡಿಯೊದಲ್ಲೇನಿದೆ?

ʼʼಇಪ್ಪತ್ತು ವರ್ಷ ಎಷ್ಟು ಬೇಗ ಕಳೆದು ಹೋಯಿತು. ನಿಜವಾಗಿಯೂ ದಿನಗಳು ವೇಗವಾಗಿ ಸಾಗಿವೆʼʼ ಎನ್ನುವ ಹೇಳಿಕೆಯೊಂದಿಗೆ ವೀಡಿಯೊ ಆರಂಭವಾಗುತ್ತದೆ. ಆರಂಭಿಕ ದಿನಗಳಲ್ಲಿ ಎಡ್ವರ್ಡೊ ಸವೆರಿನ್ ಅವರೊಂದಿಗೆ ಕಾರ್ಯ ನಿರ್ವಹಿಸಿದ ಅನುಭವ, ಪತ್ನಿ ಪ್ರಿಸಿಲ್ಲಾ ಚಾನ್ ಮತ್ತು ಮೆಟಾದ ಮಾಜಿ ಸಿಒಒ ಶೆರಿಲ್ ಸ್ಯಾಂಡ್ಬರ್ಗ್ ಅವರೊಂದಿಗೆ ಮಾರ್ಕ್ ಜುಕರ್‌ಬರ್ಗ್‌ ಕಳೆದ ಕ್ಷಣಗಳವರೆಗಿನ ಈ ತುಣುಕು ಈ ವಿಡಿಯೊದಲ್ಲಿ ಕಂಡು ಬಂದಿದೆ.

ಇದರ ಜತೆಗೆ ಫೇಸ್‌ಬುಕ್‌ನ ಇತಿಹಾಸದ ಪುಟದಲ್ಲಿ ದಾಖಲಾದ ವಿವಾದಗಳ ಬಗ್ಗೆಯೂ ಈ ವಿಡಿಯೊ ಬೆಳಕು ಚೆಲ್ಲುತ್ತದೆ. ಮಾರ್ಕ್ ಜುಕರ್‌ಬರ್ಗ್ ಮತ್ತು ಎಡ್ವರ್ಡೊ ಸವೆರಿನ್ ನಡುವೆ ನಡೆದ ಸಂಘರ್ಷದ ಬಗ್ಗೆಯೂ ಪ್ರಸ್ತಾವಿಸಲಾಗಿದೆ. ಷೇರು ಹಂಚಿಕೆ ಮತ್ತು ನಿಧಿ ನಿರ್ವಹಣೆಗೆ ಸಂಬಂಧಿಸಿದಂತೆ ಮಾರ್ಕ್ ಜುಕರ್‌ಬರ್ಗ್ ಅವರ ನಿರ್ಧಾರಗಳನ್ನು‌ ಎಡ್ವರ್ಡೊ ಸವೆರಿನ್ ಪ್ರಶ್ನಿಸಿದ್ದರಿಂದ ಕಾನೂನು ವಿವಾದಗಳು ಉದ್ಭವಿಸಿದ್ದವು. ಸದ್ಯ ಈ ಎಲ್ಲ ತೊಡಕುಗಳನ್ನು ಮೆಟ್ಟಿ ನಿಂತು ವಿಶ್ವಾದ್ಯಂತ 3 ಶತಕೋಟಿ ಬಳಕೆದಾರರೊಂದಿಗೆ ಸಮಗ್ರ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಫೇಸ್‌ಬುಕ್‌ ಅಭಿವೃದ್ಧಿ ಹೊಂದಿದೆ.

ಆರಂಭಿಕ ದಿನಗಳು

ಹಾರ್ವರ್ಡ್ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸಾಮಾಜಿಕ ನೆಟ್‌ವರ್ಕಿಂಗ್ ವೇದಿಕೆಯನ್ನು ರಚಿಸುವುದು ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ತಂಡದ ಗುರಿಯಾಗಿತ್ತು. ಬಳಿಕ ಅದರ ಜನಪ್ರಿಯತೆ ಮತ್ತು ಬೇಡಿಕೆಯಿಂದಾಗಿ ಇತರ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸಲ್ಪಟ್ಟಿತು. 2006ರಲ್ಲಿ ಫೇಸ್‌ಬುಕ್ ಸಾರ್ವಜನಿಕರಿಗೆ ಮುಕ್ತವಾಯಿತು ಮತ್ತು ಶೀಘ್ರವಾಗಿ ಅಂತರ್ಜಾಲದ ಅತ್ಯಂತ ಜನಪ್ರಿಯ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ ಪಟ್ಟಕ್ಕೇರಿತು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲವನ್ನು ಸಾಮಾಜಿಕಗೊಳಿಸಿದ ಫೇಸ್‌ಬುಕ್‌ಗೆ ಇಪ್ಪತ್ತು ವರ್ಷ

ಭಾರತದಲ್ಲಿ ಬಹು ಜನಪ್ರಿಯ

ಪ್ರಸ್ತುತ ಭಾರತದಲ್ಲಿಯೂ ಫೇಸ್‌ಬುಕ್‌ ಬಹು ಜನಪ್ರಿಯವಾಗಿದೆ. ವಯಸ್ಸಿನ ಬೇಧವಿಲ್ಲದೆ ಇದನ್ನು ಬಳಲಾಗುತ್ತಿದೆ. ನಮ್ಮ ದೇಶಲ್ಲಿ ಮೂರು ಕೋಟಿಗಿಂತ ಅಧಿಕ ಫೇಸ್‌ಬುಕ್ ಬಳಕೆದಾರರಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಫೇಸ್‌ಬುಕ್ ತನ್ನನ್ನು ತಾನು ‘ಮೆಟಾ’ ಎಂದು ಮರು ಬ್ರ್ಯಾಂಡ್‌ ಮಾಡಿಕೊಂಡಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ ಆ್ಯಪ್ ಮತ್ತು ಆಕ್ಯುಲಸ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳು ಮತ್ತು ಉತ್ಪನ್ನಗಳ ಮೇಲ್ವಿಚಾರಣೆಯನ್ನು ಮೆಟಾ ಕಂಪನಿ ನೋಡಿಕೊಳ್ಳುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version