ನವದೆಹಲಿ: ಪಾಕಿಸ್ತಾನದ (Pakistan) ನಟಿಯರನ್ನು ಸೇನೆಯು ‘ಹನಿ ಟ್ರ್ಯಾಪ್’ಗೆ (Honey Trap) ಬಳಸಿಕೊಳ್ಳುತ್ತಿತ್ತು ಎಂಬ ಪಾಕಿಸ್ತಾನದ ಮಾಜಿ ಸೇನಾಧಿಕಾರಿಯೊಬ್ಬರ ಹೇಳಿಕೆಯು ಪಾಕಿಸ್ತಾನ ಚಿತ್ರರಂಗದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ. ಪಾಕಿಸ್ತಾನದ ಅನೇಕ ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಾಜಿ ಸೇನಾಧಿಕಾರಿಯ ಈ ಹೇಳಿಕೆಗೆ ಪಾಕ್‌ನ ಹಲವು ನಟಿಯರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ನಿವೃತ್ತ ಸೇನಾ ಅಧಿಕಾರಿ ಆದಿಲ್ ರಾಜಾ ಅವರು ಯೂಟ್ಯೂಬ್‌ನಲ್ಲಿ ದೇಶದ(ಪಾಕಿಸ್ತಾನ) ಕೆಲವು ರಾಜಕಾರಣಿಗಳನ್ನು ಬಲೆಗೆ ಬೀಳಿಸಲು ಮಿಲಿಟರಿ ನಟಿಯರನ್ನು ಬಳಸಿಕೊಂಡಿದೆ ಎಂದು ಹೇಳಿದ್ದರು. ಈ ಹೇಳಿಕೆ ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಯಾವ ನಟಿಯರನ್ನು ಬಳಸಿಕೊಳ್ಳಲಾಗಿತ್ತು ಎಂದು ಪೂರ್ತಿ ಹೆಸರು ಹೇಳಿಲ್ಲವಾದರೂ ಕೆಲವು ಇನಿಶಿಯಲ್‌ಗಳನ್ನು ಹೆಸರಿಸಿದ್ದರು. ಈ ಮಾಹಿತಿ ಹೊರ ಬೀಳುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪಾಕಿಸ್ತಾನದ ಸಾಜಲ್ ಅಲಿ, ಮಹಿರಾ ಖಾನ್, ಕುಬ್ರಾ ಖಾನ್ ಮತ್ತು ಮೆಹ್ವಿಶ್ ಹಯಾತ್ ನಟಿಯರು ಎಂದು ಊಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಜಲ್ ಅಲಿ ಅವರು ಪ್ರತಿಕ್ರಿಯಿಸಿ, ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಶ್ರೀದೇವಿ ಜತೆಗೆ ಬಾಲಿವುಡ್‌ನ ಮಾಮ್ ಚಿತ್ರದಲ್ಲಿ ನಟಿಸಿದ್ದ ಸಾಜಲ್ ಅಲಿ, ಚಾರಿತ್ರ್ಯ ಹರಣವು ಕೆಟ್ಟ ಮಾನವೀಯತೆ ಮತ್ತು ಪಾಪದ ರೂಪವಾಗಿದೆ. ನಮ್ಮ ದೇಶವು ನೈತಿಕವಾಗಿ ಕೊಳಕು ಹಾಗೂ ಅವಮಾನಕರ ರೀತಿಯಲ್ಲಿ ಬದಲಾಗುತ್ತಿರುವುದು ದುಃಖದ ಸಂಗತಿಯಾಗಿದೆ ಎಂದು 28 ವರ್ಷದ ನಟಿ ಸಾಜಲ್ ಅಲಿ ತಿಳಿಸಿದ್ದಾರೆ.
ಕುಬ್ರಾ ಖಾನ್ ಅವರು ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಆರಂಭದಲ್ಲಿ ನಾನು ಸಮ್ಮನಾಗಿದ್ದೆ. ಯಾಕೆಂದರೆ, ಅದು ಖಂಡಿತವಾಗಿಯೂ ಫೇಕ್ ವಿಡಿಯೋ. ಆದರೆ, ಇನ್ನು ಸಹಿಸಿಕೊಳ್ಳುವುದಿಲ್ಲ ಎಂದು ಇನ್‌ಸ್ಟಾ ಪೋಸ್ಟ್‌ದಲ್ಲಿ ತಿಳಿಸಿದ್ದಾರೆ. ಅಲ್ಲದೇ ಮಾಜಿ ಸೇನಾ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮೂರು ದಿನಗಳಲ್ಲಿ ಮಾಜಿ ಸೇನಾ ಅಧಿಕಾರಿ ಆದಿಲ್ ರಾಜಾ ಅವರು ಸಾಕ್ಷ್ಯ ಒದಗಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕು ಎಂದು ಅವರು ತಿಳಿಸಿದ್ದಾರೆ .
ಮಿಸ್ ಮಾರ್ವೆಲ್ ಶೋದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ಮೆಹ್ವಿಶ್ ಹಯಾತ್ ಅವರು ಆದಿಲ್ ರಾಜಾ ವಿರುದ್ಧ ಟೀಕೆ ಮಾಡಿದ್ದಾರೆ. ನಿಮಗೆ ಪರಿಚಿತವಲ್ಲದ ವ್ಯಕ್ತಿಯ ಬಗ್ಗೆ ಆಧಾರರಹಿತ ಆರೋಪ ಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಈ ಸುಳ್ಳನ್ನು ಅಷ್ಟೇ ಕುರುಡಾಗಿ ನಂಬುವ ಜನರಿಗೆ ಇನ್ನೂ ದೊಡ್ಡ ನಾಚಿಕೆಯಾಗಬೇಕು. ಆದರೆ, ಇದು ಇಷ್ಟಕ್ಕೆ ನಿಲ್ಲಬೇಕು. ಇನ್ನು ಮುಂದೆ ನನ್ನ ಹೆಸರನ್ನು ಈ ರೀತಿ ಅಮಮಾನ ಮಾಡಲು ಯಾರಿಗೂ ಬಿಡುವುದಿಲ್ಲ ಎಂದು ಅವರು ಇನ್‌ಸ್ಟಾದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಹನಿ ಟ್ರ್ಯಾಪ್ ಮೂಲಕ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ನಾಯಕ ನಟ ಯುವರಾಜ್ ಅರೆಸ್ಟ್