Site icon Vistara News

Fire Tragedy: ಬಿರಿಯಾನಿ ರೆಸ್ಟೋರೆಂಟ್‌ಗೆ ಬಂದ 44 ಮಂದಿ ಬೆಂಕಿ ಆಕಸ್ಮಿಕದಲ್ಲಿ ಮೃತ್ಯು

bangladesh fire tragedy

ಢಾಕಾ: ಬಾಂಗ್ಲಾದೇಶದ (BanglaDesh) ರಾಜಧಾನಿ ಢಾಕಾದಲ್ಲಿ (Dhaka) ಗುರುವಾರ ತಡರಾತ್ರಿ ಏಳು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ದುರಂತ (Fire Tragedy) ಸಂಭವಿಸಿ 44 ಮಂದಿ ಸಾವನ್ನಪ್ಪಿದ್ದಾರೆ. ಢಾಕಾದ ಬೈಲಿ ರಸ್ತೆಯಲ್ಲಿರುವ ಈ ಕಟ್ಟಡದಲ್ಲಿ ಜನಪ್ರಿಯ ಬಿರಿಯಾನಿ ರೆಸ್ಟೋರೆಂಟ್ ಕೂಡ ಇದ್ದು, ಅಲ್ಲಿಗೆ ಬಂದ ಹಲವರು ಸಾವನ್ನಪ್ಪಿದ್ದಾರೆ.

ಸ್ಥಳೀಯ ಸಮಯ ರಾತ್ರಿ 10 ಗಂಟೆಯ ಸುಮಾರಿಗೆ ಕಚ್ಚಿ ಭಾಯಿ ರೆಸ್ಟೋರೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿತು. ಇದು ಉಪಾಹಾರ ಗೃಹದ ಮೂಲಕ ತ್ವರಿತವಾಗಿ ಹರಡಿತು. ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದಿದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 33 ಜನರು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಇತರ 10 ಜನರು ನಗರದ ಮುಖ್ಯ ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್ ಹೇಳಿದ್ದಾರೆ.

ಬೆಂಕಿ ಕಾಣಿಸಿದ ಕೂಡಲೇ ತುರ್ತು ಸೇವೆಗಳನ್ನು ಕಚ್ಚಿ ಭಾಯಿ ರೆಸ್ಟೋರೆಂಟ್‌ಗೆ ಕರೆಯಲಾಯಿತು. ಕಚ್ಚಿ ಭಾಯಿ ರೆಸ್ಟೋರೆಂಟ್‌ಗಳ ಜನಪ್ರಿಯ ಗ್ರೂಪ್‌ ಆಗಿದೆ. ಇದು ಏಳು ಮಹಡಿಗಳನ್ನು ಹೊಂದಿರುವ ಕಟ್ಟಡದಲ್ಲಿದೆ. ಕಟ್ಟಡದ ಕೆಳಗಿನ ಮಹಡಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡವು ಇತರ ರೆಸ್ಟೋರೆಂಟ್‌ಗಳನ್ನೂ ಹೊಂದಿದೆ. ಜೊತೆಗೆ ಹಲವಾರು ಬಟ್ಟೆ ಮತ್ತು ಮೊಬೈಲ್ ಫೋನ್ ಅಂಗಡಿಗಳನ್ನು ಹೊಂದಿದೆ.

“ನಾವು ಆರನೇ ಮಹಡಿಯಲ್ಲಿದ್ದಾಗ ಮೆಟ್ಟಿಲುಗಳ ಮೂಲಕ ಹೊಗೆ ವ್ಯಾಪಿಸುವುದನ್ನು ಕಂಡೆವು. ಬಹಳಷ್ಟು ಜನರು ಮೇಲಕ್ಕೆ ಧಾವಿಸಿದರು” ಎಂದು ಸೋಹೆಲ್ ಎಂಬ ರೆಸ್ಟೋರೆಂಟ್ ಮ್ಯಾನೇಜರ್ ತಿಳಿಸಿದರು. “ಕಟ್ಟಡದ ಕೆಳಗೆ ಬರಲು ನಾವು ನೀರಿನ ಪೈಪ್ ಬಳಸಿದೆವು. ನಮ್ಮಲ್ಲಿ ಕೆಲವರು ಮಹಡಿಯಿಂದ ಜಿಗಿದಿದ್ದರಿಂದ ಗಾಯಗೊಂಡರು” ಎಂದು ಅವರು ಹೇಳಿದರು.

ಇನ್ನು ಕೆಲವರು ಮೇಲ್ಛಾವಣಿಯಲ್ಲಿ ಸಿಲುಕಿಕೊಂಡು ಸಹಾಯಕ್ಕಾಗಿ ಆರ್ತನಾದ ಮಾಡಿದರು. ಬದುಕುಳಿದ ಮತ್ತೊಬ್ಬ ಮೊಹಮ್ಮದ್ ಅಲ್ತಾಫ್, ಮುರಿದ ಕಿಟಕಿಯ ಮೂಲಕ ಹಾರಿ ಬೆಂಕಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸಿಲುಕಿಕೊಂಡ ಜನರು ಬೆಂಕಿಯಿಂದ ಪಾರಾಗಲು ಸಹಾಯ ಮಾಡಿದ ಅವರ ಇಬ್ಬರು ಸಹೋದ್ಯೋಗಿಗಳು ನಂತರ ಸಾವನ್ನಪ್ಪಿದರು.

ಬಾಂಗ್ಲಾದೇಶದಲ್ಲಿ ವಾಣಿಜ್ಯ ಮತ್ತು ವಸತಿ ಕಟ್ಟಡಗಳಲ್ಲಿ ಬೆಂಕಿಯು ಸಾಮಾನ್ಯವಾಗಿದೆ, ಸುರಕ್ಷತಾ ಅರಿವಿನ ಕೊರತೆ ಮತ್ತು ನಿಯಮಗಳ ಅಸಮರ್ಪಕ ಜಾರಿ ಇದಕ್ಕೆ ಕಾರಣಗಳಾಗಿವೆ.

ಇದನ್ನೂ ಓದಿ: Fire Tragedy: ಬಣ್ಣದ ಫ್ಯಾಕ್ಟರಿಯಲ್ಲಿ ಭೀಕರ ಬೆಂಕಿ ದುರಂತ, 11 ಸಾವು

Exit mobile version