Site icon Vistara News

Viral Video | ಪಾಕಿಸ್ತಾನದಲ್ಲಿ ಆಹಾರ ಬಿಕ್ಕಟ್ಟಿನ ಕರಾಳತೆ; ಗೋಧಿ ಹಿಟ್ಟಿನ ಮೂಟೆಗಳಿರುವ ಲಾರಿಯನ್ನು​ ಬೆನ್ನಟ್ಟಿದ ಜನ

Food Crisis In Pakistan People chase truck

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ತೀವ್ರತರನಾದ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಆಹಾರ ಬಿಕ್ಕಟ್ಟು ಮುಗಿಲು ಮುಟ್ಟಿದ್ದು, ಜನರು ಪರದಾಡುತ್ತಿದ್ದಾರೆ. ಈ ಮಧ್ಯೆ ವೈರಲ್​ ಆದ ವಿಡಿಯೊವೊಂದು ಪಾಕ್​ನಲ್ಲಿ ಎದುರಾಗಿರುವ ಆಹಾರ ಸಮಸ್ಯೆಯ ಭೀಕರತೆಯನ್ನು ಬಿಚ್ಚಿಟ್ಟಿದೆ. ಗೋಧಿ ಹಿಟ್ಟಿನ ಮೂಟೆಯನ್ನು ಹೊತ್ತು ಹೋಗುತ್ತಿರುವ ಟ್ರಕ್​ ಹಿಂದೆ ಅನೇಕರು ಓಡುತ್ತಾರೆ. ಕೆಲವರು ಬೈಕ್​​ನಲ್ಲಿ ಆ ಲಾರಿಯನ್ನು ಹಿಂಬಾಲಿಸುತ್ತಿದ್ದಾರೆ. ಗೋಧಿ ಮೂಟೆಯನ್ನು ಹೇಗಾದರೂ ತಾವೇ ಪಡೆಯಬೇಕು ಎಂಬ ತುಡಿತ ಅದನ್ನು ಹಿಂಬಾಲಿಸುತ್ತಿರುವ ಪ್ರತಿಯೊಬ್ಬರಲ್ಲೂ ಕಾಣುತ್ತಿದೆ.

ಪಾಕ್​ ಆಕ್ರಮಿತ ಕಾಶ್ಮೀರದ ಮಾನವ ಹಕ್ಕು ಹೋರಾಟಗಾರ, ಸದ್ಯ ಲಂಡನ್​ನಲ್ಲಿ ನೆಲೆಸಿರುವ ಪ್ರೊಫೆಸರ್​ ಸಜ್ಜದ್​ ರಾಜಾ ಅವರು ವಿಡಿಯೊವನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ‘ಹೀಗೆ ಟ್ರಕ್​​ ಹಿಂದೆ ಹೋಗುತ್ತಿರುವುದು ಮೋಟರ್​ಸೈಕಲ್​ ರ್ಯಾಲಿಯಲ್ಲ. ಗೋಧಿ ಹಿಟ್ಟು ತುಂಬಿರುವ ಲಾರಿಯನ್ನು ತಡೆದು ನಿಲ್ಲಿಸಲು ಅವರೆಲ್ಲ ಹೋಗುತ್ತಿದ್ದಾರೆ. ಒಂದಾದರೂ ಮೂಟೆ ಸಿಕ್ಕರೆ ಸಾಕು ಎಂಬ ಆಸೆಯಲ್ಲಿ ಹೀಗೆ ಹೋಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಜೀವನ ನಡೆಸಲು ಸಾಧ್ಯವಿದೆಯೇ?’ ಎಂದು ಅವರು ಕ್ಯಾಪ್ಷನ್​ ಬರೆದಿದ್ದಾರೆ.

ಪಾಕಿಸ್ತಾನದಲ್ಲಿ ಇಡೀ ರಾಷ್ಟ್ರದಲ್ಲಿ ಎಲ್ಲ ಕಡೆ ಆಹಾರ ಬಿಕ್ಕಟ್ಟು ಎದುರಾಗಿದ್ದರೂ, ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನ್​ದಲ್ಲಂತೂ ಪರಿಸ್ಥಿತಿ ಇನ್ನಷ್ಟು ಕರುಣಾಜನಕವಾಗಿದೆ. ಸದ್ಯ ಪಾಕಿಸ್ತಾನದಲ್ಲಿ 15 ಕೆಜಿ ಹಿಟ್ಟಿನ ಬ್ಯಾಗ್​ 2050 ರೂಪಾಯಿಗೆ ಮಾರಾಟವಾಗುತ್ತಿದೆ. ಸ್ವಲ್ಪ ದಿನಗಳ ಹಿಂದೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಜನರು ಪ್ಲಾಸ್ಟಿಕ್​ ಬ್ಯಾಗ್​​ನಲ್ಲಿ ಎಲ್​ಪಿಜಿ ಅನಿಲ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿತ್ತು. ಅಡುಗೆ ಅನಿಲ ಪೂರೈಕೆ ಸ್ಥಗಿತಗೊಂಡಿದ್ದೇ ಇದಕ್ಕೆ ಕಾರಣ. ಒಟ್ಟಾರೆ ಹೇಳಬೇಕು ಎಂದರೆ ಪಾಕ್​​ನಲ್ಲಿ ಹಸಿವು ಜನರನ್ನು ಕಿತ್ತು ತಿನ್ನುತ್ತಿದೆ. ಆಹಾರ ಕೈಗೆಟುಕದಂತಾಗಿದೆ.

ಇದನ್ನೂ ಓದಿ: Henley Passport Index | ಪಾಕಿಸ್ತಾನದ ಪಾಸ್‌ಪೋರ್ಟ್‌ಗೆ ಬೆಲೆಯೇ ಇಲ್ಲ! ಜಪಾನ್ ಪಾಸ್‌ಪೋರ್ಟ್ ಫುಲ್ ಸ್ಟ್ರಾಂಗ್

Exit mobile version