ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಸಚಿವ ಶೇಖ್ ರಶೀದ್ ಅಹಮದ್ ಟಿವಿ ನೇರ ಪ್ರಸಾರದ ಚರ್ಚೆಯ ಸಂದರ್ಭದಲ್ಲಿ ಅಸಹನೆಯಿಂದ ಉಗುಳಿದ ವಿಡಿಯೋ ವಿಪರೀತ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನದ ಈಗಿನ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರ ಬಗ್ಗೆ, ಟಿವಿ ನಿರೂಪಕರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಇತರರು ಮತ್ತು ನಿರೂಪಕರು ಮಾಜಿ ಸಚಿವ ಶೇಖ್ ರಶೀದ್ ಅಹಮದ್ ಈ ಅಸಭ್ಯ ವರ್ತನೆಯಿಂದ ಗಲಿಬಿಲಿಗೊಂಡರು.
ರಾಣಾ ಸನಾವುಲ್ಲ ಅವರ ಬಗ್ಗೆ ಮಾತನಾಡುತ್ತಿದ್ದ ಮಾಜಿ ಸಚಿವ ಅಹಮದ್, ಸಚಿವರು ಬಳಸುವ ಭಾಷೆಯ ಬಗ್ಗೆ ಆಕ್ಷೇಪಿಸಿದರು. ಸೇನೆಯ ಹಿರಿಯ ಅಧಿಕಾರಿಗಳಾರೂ ಸನಾವುಲ್ಲ ಬಗ್ಗೆ ಗೌರವ ತೋರುವುದಿಲ್ಲ, ಉಗಿಯುತ್ತಾರಷ್ಟೆ ಎಂಬುದು ಅವರ ಅಭಿಪ್ರಾಯವಾಗಿತ್ತು. ʻರಾಣಾ ಸನಾವುಲ್ಲಾ ಅವರಿಗೆ ಕಡಿವಾಣ ಹಾಕುವಂತೆ ಜನರಲ್ ಕಮರ್ ಬಾಜ್ವಾ ಅವರನ್ನು ಒತ್ತಾಯಿಸುತ್ತೇನೆ. ಅವರು ಬಳಸುವ ಭಾಷೆಗೆ ಯಾರಾದರೂ ಅವರನ್ನು ಗೌರವಿಸುತ್ತಾರೆಯೇ? ಮುಖಕ್ಕೆ ಉಗಿಯುತ್ತಾರಷ್ಟೆʼ ಎಂದವರೇ ಉಗುಳಿಯೂ ತೋರಿಸಿದರು.
ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಇದನ್ನು ಹರಿಯಬಿಟ್ಟಿರುವ ಪತ್ರಕರ್ತೆ ನೈಲಾ ಇನಾಯತ್, ʻಇವರ ಹೊಸ ಖಾತೆ: ಟಿವಿ ನೇರ ಪ್ರಸಾರದಲ್ಲಿ ಉಗಿಯುವ ಸಚಿವರುʼ ಎಂದು ಕಿಡಿ ನುಡಿದಿದ್ದಾರೆ. ಇನ್ನೊಬ್ಬ ಬಳಕೆದಾರ ಮಾಜಿ ಸಚಿವರನ್ನು ʻವಿದೂಷಕʼ ಎಂದು ಟೀಕಿಸಿದ್ದಾರೆ. ಮತ್ತೊಬ್ಬರು, ʻಇದೆಂಥಾ ಹೊಲಸು’… ಇವರೆಲ್ಲಾ ಎಂಥ ನಾಯಕರು. ಜನರನ್ನು ದೇವರೇ ಕಾಪಾಡಬೇಕುʼ ಎಂದು ಬೇಸರಿಸಿದ್ದಾರೆ.