Site icon Vistara News

Fraud Case: ಬಿಹಾರ ವಿವಿಯಿಂದ ನಕಲಿ ಸರ್ಟಿಫಿಕೇಟ್‌, ನೇಪಾಳ ಸಂಸದನ ಬಂಧನ

Fraud case

ಕಠ್ಮಂಡು: ಶೈಕ್ಷಣಿಕ ಪ್ರಮಾಣಪತ್ರಗಳನ್ನು (education certificate) ನಕಲಿ ಮಾಡಿದ ಆರೋಪದ (Fraud Case) ಮೇಲೆ ನೇಪಾಳಿ ಸಂಸದರೊಬ್ಬರನ್ನು ಅಲ್ಲಿನ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈತ ನಕಲಿ ಮಾಡಲು ಬಳಸಿಕೊಂಡಿರುವುದು ಭಾರತದ ಬಿಹಾರದ ವಿಶ್ವವಿದ್ಯಾಲಯವನ್ನು. ಈ ಬಂಧನ ನೇಪಾಳದ ರಾಜಕೀಯದಲ್ಲಿ (nepal politics) ಕೋಲಾಹಲಕ್ಕೆ ಕಾರಣವಾಗಿದೆ. ಬಂಧಿತ ಸಂಸದ ಆಡಳಿತದಲ್ಲಿರುವ ಕಾಂಗ್ರೆಸ್‌ ಸದಸ್ಯನೇ ಆಗಿದ್ದಾನೆ. ಆದರೆ ಇತ್ತೀಚೆಗೆ ಆತ ಗೃಹ ಸಚಿವರ ಮೇಲೆ ಚಿನ್ನ ಕಳವು (gold smuggling) ಆರೋಪವನ್ನು ಹೊರಿಸಿದ್ದರು.

ನೇಪಾಳದ ಆಡಳಿತ ಪಕ್ಷದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ಸುನೀಲ್ ಕುಮಾರ್‌ ಶರ್ಮಾ ಅವರನ್ನು ನೇಪಾಳ ಪೊಲೀಸರ ಕೇಂದ್ರೀಯ ತನಿಖಾ ಬ್ಯೂರೋ (ಸಿಐಬಿ) ತಂಡವು ಕಠ್ಮಂಡುವಿನಿಂದ ಬಂಧಿಸಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಸುನಿಲ್ ಶರ್ಮಾ ಬಿಹಾರದಿಂದ ಹೈಯರ್ ಸೆಕೆಂಡರಿ ಶೈಕ್ಷಣಿಕ ಪದವಿಯನ್ನು ಖರೀದಿಸಿದ್ದರು ಮತ್ತು ಅದನ್ನು ಚೀನಾದಲ್ಲಿ ಉನ್ನತ ವ್ಯಾಸಂಗ ಮಾಡಲು ಬಳಸಿಕೊಂಡಿದ್ದರು.

ಮೊರಾಂಗ್-3 ಕ್ಷೇತ್ರದಿಂದ ಪ್ರತಿನಿಧಿ ಸಭೆಗೆ ಆಯ್ಕೆಯಾದ ಶರ್ಮಾ ನೇಪಾಳಿ ಕಾಂಗ್ರೆಸ್‌ನಲ್ಲಿ ಶೇಖರ್ ಕೊಯಿರಾಲಾ ಕ್ಯಾಂಪ್‌ಗೆ ಹತ್ತಿರವಾಗಿರುವವರು. 100 ಕೆಜಿ ಚಿನ್ನಾಭರಣ ಕಳ್ಳಸಾಗಣೆ ಆರೋಪದ ಮೇಲೆ ಗೃಹ ಸಚಿವ ನಾರಾಯಣ ಕಾಜಿ ಶ್ರೇಷ್ಠ ಮತ್ತು ಹಣಕಾಸು ಸಚಿವ ಪ್ರಕಾಶ್ ಶರಣ್ ಮಹತ್ ರಾಜೀನಾಮೆ ನೀಡಬೇಕು ಎಂದು ಅವರು ಇತ್ತೀಚೆಗೆ ಒತ್ತಾಯಿಸಿದ್ದರು. ಶರ್ಮಾ ಅವರು ಕೆಲವು ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಕಾಲೇಜುಗಳ ಮಾಲೀಕರೂ ಆಗಿದ್ದಾರೆ.

ಜುಲೈ 18ರ ರಾತ್ರಿ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ನಿಂದ ಪತ್ತೆಯಾಗದೆ ಹೊರಬಿದ್ದ ಸುಮಾರು 100 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಭಾರತೀಯ ಮತ್ತು ಚೀನಾ ಪ್ರಜೆ ಸೇರಿದಂತೆ 18 ಜನರನ್ನು ಇದುವರೆಗೆ ಬಂಧಿಸಲಾಗಿದೆ. ಈ ವಿಚಾರದಲ್ಲಿ ಗೃಹ ಸಚಿವ ಹಾಗೂ ಹಣಕಾಸು ಸಚಿವರು ರಾಜೀನಾಮೆ ನೀಡಬೇಕು ಎಂದು ಶರ್ಮಾ ಒತ್ತಾಯಿಸಿದ್ದರು. ಶರ್ಮಾ ಅವರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ವಿಮೆ ಹಣ ಕೊಡಲು ನಿರಾಕರಿಸಿದ್ದರಿಂದ ಅವರು ಹೀಗೆ ಸೇಡು ತೋರಿಸುತ್ತಿದ್ದಾರೆ ಎಂದು ಹಣಕಾಸು ಸಚಿವ ಮಹತ್‌ ಹೇಳಿದ್ದಾರೆ.

ಇದನ್ನೂ ಓದಿ: Fraud Case: ನಿನ್ನನ್ನೇ ಮದುವೆಯಾಗುವೆ ಎಂದು ಹಣ ಪಡೆದು ಬೇರೊಬ್ಬನಿಂದ ತಾಳಿ ಕಟ್ಟಿಸಿಕೊಂಡಳು; 26 ಲಕ್ಷ ಧೋಖಾ

Exit mobile version