Site icon Vistara News

Garry Kasparov: ವಿಶ್ವದ ಮಾಜಿ ನಂ. 1 ಚೆಸ್‌ ಆಟಗಾರನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ರಷ್ಯಾ; ಕಾರಣವೇನು?

Garry Kasparov

Garry Kasparov

ಮಾಸ್ಕೋ: ರಷ್ಯಾದ ಹಣಕಾಸು ಕಾವಲು ಸಂಸ್ಥೆ ರೋಸ್‌ಫಿನ್‌ ಮಾನಿಟರಿಂಗ್ (Rosfinmonitoring) ಬುಧವಾರ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು ರಾಜಕೀಯ ಕಾರ್ಯಕರ್ತ ಗ್ಯಾರಿ ಕಾಸ್ಪರೋವ್ (Garry Kasparov) ಅವರನ್ನು ʼಭಯೋತ್ಪಾದಕರು ಮತ್ತು ಉಗ್ರಗಾಮಿಗಳʼ ಪಟ್ಟಿಗೆ (Terrorists and extremists list) ಸೇರಿಸಿದೆ. 60 ವರ್ಷದ ಈ ಮಾಜಿ ಚೆಸ್‌ ವಿಶ್ವ ಚಾಂಪಿಯನ್‌ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ನಿರಂತರ ಧ್ವನಿ ಎತ್ತುತ್ತಿದ್ದಾರೆ ಮತ್ತು ಉಕ್ರೇನ್‌ ವಿರುದ್ಧದ ರಷ್ಯಾ ದಾಳಿಯನ್ನು ಖಂಡಿಸುತ್ತಲೇ ಬಂದಿದ್ದಾರೆ. ಹೀಗಾಗಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಣ ಅಕ್ರಮ ವರ್ಗಾವಣೆ ಮತ್ತು ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸುವ ಪ್ರಕರಣಗಳ ಮೇಲೆ ಕಣ್ಣಿಡುತ್ತಿರುವ ರೋಸ್‌ಫಿನ್‌ ಮಾನಿಟರಿಂಗ್ ಪಟ್ಟಿ ಮಾಡಿದವರ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಹೊಂದಿದೆ. ಸೋವಿಯತ್ ಮೂಲದ ಕಾಸ್ಪರೋವ್ ಅವರ ವಿರುದ್ಧ ಯಾವುದೇ ಕಾರಣವನ್ನು ನೀಡದೆ ʼಭಯೋತ್ಪಾದಕರು ಮತ್ತು ಉಗ್ರಗಾಮಿಗಳʼ ಪಟ್ಟಿಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದ ಶ್ರೇಷ್ಠ ಚೆಸ್ ಆಟಗಾರರಲ್ಲಿ ಒಬ್ಬರೆಂದು ಗುರುತಿಸ್ಪಡುವ ಕಾಸ್ಪರೋವ್ ಒಂದು ದಶಕಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದಲೇ ಅವರು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಅವರು ಉಕ್ರೇನ್‌ಗೆ ಬೆಂಬಲ ನೀಡುವಂತೆ ಪಶ್ಚಿಮ ರಾಷ್ಟ್ರಗಳನ್ನು ಒತ್ತಾಯಿಸಿದ್ದರು ಮತ್ತು ಉಕ್ರೇನ್ ಮಾಸ್ಕೋವನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು.

ತೆಲಂಗಾಣದ ಯುವಕ ಉಕ್ರೇನ್‌ ಯುದ್ಧದಲ್ಲಿ ಬಲಿ!

ವಾಸ, ಉದ್ಯೋಗ ಅರಸಿ ರಷ್ಯಾಕ್ಕೆ ತೆರಳಿರುವ ಭಾರತದ ಯುವಕರನ್ನು ಅಲ್ಲಿನ ಅಧಿಕಾರಿಗಳು ಬಲವಂತವಾಗಿ ಸೇನೆಗೆ ಸೇರಿಸಿಕೊಳ್ಳುತ್ತಿದ್ದು, ಇದರಿಂದ ಭಾರತದ ಯುವಕರು ಪ್ರಾಣ ಕಳೆದಕೊಳ್ಳುವಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಉದ್ಯೋಗದ ಆಸೆಗಾಗಿ ರಷ್ಯಾಗೆ ತೆರಳಿದ್ದ ತೆಲಂಗಾಣದ ಮೊಹಮ್ಮದ್‌ ಅಸ್ಫಾನ್‌ ಎಂಬ 30 ವರ್ಷದ ಯುವಕನು ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಮೃತಪಟ್ಟಿದ್ದಾನೆ. ಈತನು ಕೂಡ ರಷ್ಯಾ ಅಧಿಕಾರಿಗಳ ಬಲವಂತದಿಂದ ಸೇನೆ ಸೇರಿದ್ದ ಎಂದು ತಿಳಿದುಬಂದಿದೆ.

ಮೊಹಮ್ಮದ್‌ ಅಸ್ಫಾನ್‌ ಸಾವಿನ ಕುರಿತು ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಯೇ ಮಾಹಿತಿ ನೀಡಿದೆ. “ಭಾರತದ ಮೊಹಮ್ಮದ್‌ ಅಸ್ಫಾನ್‌ ಅವರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರಷ್ಯಾದ ಅಧಿಕಾರಿಗಳು ಹಾಗೂ ಮೊಹಮ್ಮದ್‌ ಅಸ್ಫಾನ್‌ ಅವರ ಕುಟುಂಬಸ್ಥರ ಜತೆ ಸಂಪರ್ಕದಲ್ಲಿದ್ದೇವೆ. ಮೊಹಮ್ಮದ್‌ ಅಸ್ಫಾನ್‌ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ” ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ

ಕೆಲ ದಿನಗಳ ಹಿಂದಷ್ಟೇ ಮನವಿ ಮಾಡಿದ್ದ ಕುಟುಂಬಸ್ಥರು

ಕೆಲ ದಿನಗಳ ಹಿಂದಷ್ಟೇ ರಷ್ಯಾದಲ್ಲಿ ಮೊಹಮ್ಮದ್‌ ಅಸ್ಫಾನ್‌ ಸಂಕಷ್ಟಕ್ಕೆ ಸಿಲುಕಿರುವ ಕುರಿತು ಆತನ ಕುಟುಂಬಸ್ಥರು ರಕ್ಷಣೆಗಾಗಿ ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದರು. ಕೆಲಸ ಮಾಡಲೆಂದು ರಷ್ಯಾಗೆ ತೆರಳಿದ ಮೊಹಮ್ಮದ್‌ ಅಸ್ಫಾನ್‌ನನ್ನು ಬಲವಂತವಾಗಿ ಸೇನೆಗೆ ಸೇರಿಸಲಾಗಿದೆ. ಆತನು ಸಂಕಷ್ಟಕ್ಕೆ ಸಿಲುಕಿದ್ದು, ದಯಮಾಡಿ ರಕ್ಷಿಸಿ ಎಂದು ಕುಟುಂಬಸ್ಥರು ಕೋರಿದ್ದರು. ಭಾರತದ ವಿದೇಶಾಂಗ ಸಚಿವಾಲಯವೂ ಭಾರತೀಯರ ರಕ್ಷಣೆಯ ಭರವಸೆ ನೀಡಿತ್ತು. ಇದಕ್ಕೂ ಮೊದಲೇ ಮೊಹಮ್ಮದ್‌ ಅಸ್ಫಾನ್‌ ಯುದ್ಧದಲ್ಲಿ ಬಲಿಯಾಗಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version