Site icon Vistara News

Goddess Kali tweet: ಕಾಳಿ ದೇವಿಗೆ ಅವಹೇಳನದ ಟ್ವೀಟ್:‌ ಉಕ್ರೇನ್‌ ಸಚಿವರ ಕ್ಷಮೆಯಾಚನೆ

Goddess Kali tweet

ಕೀವ್‌: ಕಾಳಿ ದೇವಿಯ ಕುರಿತು ಅವಮಾನಕಾರಿಯಾದ ಟ್ವೀಟ್‌ (Goddess Kali tweet) ಹಂಚಿಕೊಂಡ ರಕ್ಷಣಾ ಸಚಿವಾಲಯದ ನಡೆಯ ಬಗ್ಗೆ ಉಕ್ರೇನ್‌ನ ಸಚಿವೆ ಕ್ಷಮೆ ಯಾಚಿಸಿದ್ದಾರೆ.

ಉಕ್ರೇನ್‌ನ ವಿದೇಶಾಂಗ ಇಲಾಖೆ ಸಹಾಯಕ ಸಚಿವೆ ಎಮಿನ್‌ ಝೆಫರ್‌ ಅವರು ತಮ್ಮ ರಕ್ಷಣಾ ಸಚಿವಾಲಯ ಮಾಡಿದ ತಪ್ಪಿಗಾಗಿ ಕ್ಷಮೆ ಯಾಚಿಸಿದ್ದಾರೆ. ʼʼಉಕ್ರೇನ್‌ ಹಾಗೂ ಇಲ್ಲಿನ ಜನತೆ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತೇವೆ ಹಾಗೂ ಅವರ ಬೆಂಬಲವನ್ನು ಸದಾ ಶ್ಲಾಘಿಸುತ್ತೇವೆ. ಆ ಚಿತ್ರವನ್ನು ಈಗಾಗಲೇ ತೆಗೆದುಹಾಕಲಾಗಿದೆ. ಉಕ್ರೇನ್ ಪರಸ್ಪರ ಗೌರವ, ಸ್ನೇಹ ಮತ್ತು ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದೆʼʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಭಾನುವಾರ, ಉಕ್ರೇನ್‌ನ ರಕ್ಷಣಾ ಸಚಿವಾಲಯವು ಉಕ್ರೇನಿಯನ್ ಕಲಾವಿದ ಮ್ಯಾಕ್ಸಿಮ್ ಪಲೆಂಕೊ ಅವರ ಫೋಟೋವನ್ನು ಟ್ವೀಟ್ ಮಾಡಿತ್ತು. ಇದು ಹಾಲಿವುಡ್ ನಟಿ ಮರ್ಲಿನ್ ಮನ್ರೋ ಅವರ ಪ್ರಚೋದಕ ಭಂಗಿಯಲ್ಲಿ ಭಾರತದ ಕಾಳಿ ದೇವಿಯನ್ನು ಹೋಲುವ ಮುಖವನ್ನು ತೋರಿಸಿತ್ತು. ಆಕೃತಿಯ ಮುಖ ಮತ್ತು ವಿವರಗಳು ಕಾಳಿಯನ್ನು ಹೋಲುವಂತಿದ್ದವು. ಸಚಿವಾಲಯವು ಈ ಚಿತ್ರಕ್ಕೆ ʼವರ್ಕ್‌ ಆಫ್‌ ಆರ್ಟ್‌ʼ ಎಂದು ಶೀರ್ಷಿಕೆ ನೀಡಿತ್ತು.

ಈ ಟ್ವೀಟ್‌ ಆನ್‌ಲೈನ್‌ನಲ್ಲಿ ಆಕ್ರೋಶಪೂರಿತ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು. ಉಕ್ರೇನ್‌ ಸಚಿವಾಲಯ ಹಿಂದೂ ಧರ್ಮಕ್ಕೆ ಅಗೌರವಕಾರಿಯಾಗಿ ವರ್ತಿಸಿದೆ ಎಂದು ಟ್ವಿಟರ್ ಬಳಕೆದಾರರು ಟೀಕಿಸಿದ್ದರು. “ಪೂಜ್ಯ ಹಿಂದೂ ದೇವತೆಯಾದ ಮಾ ಕಾಳಿಯನ್ನು ಅಪಹಾಸ್ಯ ಮಾಡುವ ಉಕ್ರೇನಿಯನ್ ರಕ್ಷಣಾ ಇಲಾಖೆಯ ಟ್ವೀಟ್‌ ಸಂವೇದನಾಶೂನ್ಯತೆ ಮತ್ತು ಅಜ್ಞಾನದ ಪ್ರದರ್ಶನʼʼ ಎಂದು ಕೆಲವರು, ‘ನಮ್ಮ ನಂಬಿಕೆ ತಮಾಷೆಯ ವಿಷಯವಲ್ಲ’ ಎಂದು ಇನ್ನು ಕೆಲವರು ಟೀಕಿಸಿದ್ದರು. ಬೆಚ್ಚಿದ ಉಕ್ರೇನ್ ರಕ್ಷಣಾ ಸಚಿವಾಲಯವು ಈ ಟ್ವೀಟ್ ಅನ್ನು ಅಳಿಸಿದೆ.

ಇದನ್ನೂ ಓದಿ: Vishwaguru: ನಾವು ಭಾರತವನ್ನು ವಿಶ್ವಗುರು ಎಂದು ಕರೆಯುತ್ತೇವೆ; ಉಕ್ರೇನ್‌ ಸಚಿವೆ ಎಮಿನೆ ಮಹತ್ವದ ಹೇಳಿಕೆ

Exit mobile version