Site icon Vistara News

Google: 10 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾ ಡಿಲೀಟ್‌ ಮಾಡಿ Sorry ಎಂದ ಗೂಗಲ್; ಮುಂದೇನು?

Google

Google Accidentally Deletes $125 Billion Worth Of Pension Funds Data

ವಾಷಿಂಗ್ಟನ್:‌ ಇದೇನಿದ್ದರೂ ಡಿಜಿಟಲ್‌ (Digital) ಯುಗ. ಎಲ್ಲ ಮಾಹಿತಿಯೂ ಈಗ ಕಂಪ್ಯೂಟರ್‌ನಲ್ಲಿ, ಗೂಗಲ್‌ ಕ್ಲೌಡ್‌ ಸೇರಿ ಹಲವು ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ಬ್ಯಾಂಕಿಂಗ್‌ನಿಂದ ಹಿಡಿದು ಎಲ್ಲ ಕ್ಷೇತ್ರಗಳ ಮಾಹಿತಿಯೂ ಆನ್‌ಲೈನ್‌ನಲ್ಲೇ ಸಂಗ್ರಹಿಸಲಾಗುತ್ತದೆ. ಆದರೆ, ಈ ಮಾಹಿತಿ ಡಿಲೀಟ್‌ ಮಾಡಿದರೆ, ಯಾರಾದರೂ ಡಿಲೀಟ್‌ ಮಾಡಿದರೆ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಗೂಗಲ್‌ (Google) ಸಂಸ್ಥೆಯು ಗೂಗಲ್‌ ಕ್ಲೌಡ್‌ನಲ್ಲಿ (Google Cloud) ಸುಮಾರು 10.43 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾವನ್ನು ಅಚಾತುರ್ಯವಾಗಿ ಡಿಲೀಟ್‌ ಮಾಡಿದೆ.

ಆಸ್ಟ್ರೇಲಿಯಾದ ನಿವೃತ್ತಿದಾರರಿಗೆ ಪಿಂಚಣಿ ಒದಗಿಸುವ ಯುನಿಸೂಪರ್‌ (UniSuper) ಎಂಬ ಸಂಸ್ಥೆಯ 6.2 ಲಕ್ಷ ಜನರ ಮಾಹಿತಿಯನ್ನು ಗೂಗಲ್‌ ಡಿಲೀಟ್‌ ಮಾಡಿದೆ. ಯುನಿಸೂಪರ್‌ ಸಂಸ್ಥೆಯು ಡೇಟಾ ಸಂಗ್ರಹಕ್ಕಾಗಿ ಗೂಗಲ್‌ ಕ್ಲೌಡ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಗೂಗಲ್‌ ಸಂಸ್ಥೆಯು ಅಚಾತುರ್ಯದಿಂದ 6.2 ಲಕ್ಷ ಜನರ ಡೇಟಾವನ್ನು ಡಿಲೀಟ್‌ ಮಾಡಿದೆ. ಕಳೆದ ಒಂದು ವಾರದಿಂದ ಯುನಿಸೂಪರ್‌ ಸದಸ್ಯರು ತಮ್ಮ ಪಿಂಚಣಿ ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Sorry ಎಂದ ಗೂಗಲ್‌

ಲಕ್ಷಾಂತರ ಜನರ ಡೇಟಾವನ್ನು ಗೂಗಲ್‌ ಕ್ಲೌಡ್‌ನಿಂದ ಅಳಿಸಿಹಾಕಿದ ಬಳಿಕ ಗೂಗಲ್‌ ಸಂಸ್ಥೆ ಕ್ಷಮೆಯಿರಲಿ ಎಂದಷ್ಟೇ ಹೇಳುವ ಮೂಲಕ ಕೈ ತೊಳೆದುಕೊಂಡಿದೆ. ಮಾಹಿತಿ ಡಿಲೀಟ್‌ ಆದ ಕಾರಣ ಯುನಿಸೂಪರ್‌ ಸಂಸ್ಥೆಯು ಕೂಡ ವಿಷಾದ ವ್ಯಕ್ತಪಡಿಸಿದೆ. ಆದರೆ, ಲಕ್ಷಾಂತರ ಜನರ ಲಕ್ಷಾಂತರ ಕೋಟಿ ರೂ. ಮಾಹಿತಿ ಡಿಲೀಟ್‌ ಆದ ಕಾರಣ ಅವರೆಲ್ಲ ಆತಂಕಕ್ಕೀಡಾಗಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಿ ಎಂಬುದಾಗಿ ಸಂಸ್ಥೆಯನ್ನು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ಗೂಗಲ್‌ ಜತೆಗಿನ ಒಪ್ಪಂದವನ್ನು ಯುನಿಸೂಪರ್‌ ರದ್ದುಗೊಳಿಸಿದೆ.

ಬ್ಯಾಕಪ್‌ಗಾಗಿ ಹರಸಾಹಸ

6 ಲಕ್ಷಕ್ಕೂ ಅಧಿಕ ಮಾಹಿತಿಯನ್ನು ಮರು ಸಂಗ್ರಹಿಸಲು (ಬ್ಯಾಕಪ್‌) ಯುನಿಸೂಪರ್‌ ಹರಸಾಹಸ ಮಾಡುತ್ತಿದೆ. ಡಿಲೀಟ್‌ ಆಗಿರುವ ಎಲ್ಲ ಮಾಹಿತಿಯನ್ನು ಬ್ಯಾಕಪ್‌ ಮಾಡಿಕೊಳ್ಳಲು ಬೇರೊಂದು ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಮಾಹಿತಿಯು ತಾತ್ಕಾಲಿಕವಾಗಿ ಡಿಲೀಟ್‌ ಆಗಿದೆಯೋ, ಇಲ್ಲವೋ? ಅದನ್ನು ಬ್ಯಾಕಪ್‌ ಮಾಡುವುದು ಸುಲಭವೋ, ಇಲ್ಲವೋ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಾಹಿತಿ ಲಭ್ಯವಾಗುವವರೆಗೂ ಗ್ರಾಹಕರು ಹಾಗೂ ಕಂಪನಿಗೆ ಆತಂಕ ತಪ್ಪಿದ್ದಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Exit mobile version