ವಾಷಿಂಗ್ಟನ್: ಜಾಗತಿಕ ಟೆಕ್ ಸಂಸ್ಥೆ ಗೂಗಲ್ ಕೆಲವು ದಿನಗಳ ಹಿಂದಷ್ಟೇ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಗೂಗಲ್ (Google) ಸಿಇಒ ಸುಂದರ್ ಪಿಚೈ (Sundar Pichai) ಅವರು ಈ ಬಾರಿ ಹಿರಿಯ ಉದ್ಯೋಗಿಗಳ ಸಂಬಳ (Google Pay Cut) ಕಡಿತಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ನಡೆದ ಮಹತ್ವದ ಸಭೆಯಲ್ಲಿ ಈ ಕುರಿತು ಘೋಷಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
“ಸೀನಿಯರ್ ವೈಸ್ ಪ್ರೆಸಿಡೆಂಟ್ ಶ್ರೇಣಿಯ ಉದ್ಯೋಗಿಗಳ ವಾರ್ಷಿಕ ಬೋನಸ್‌ನಲ್ಲಿ ಭಾರಿ ಕಡಿತವಾಗಲಿದೆ. ಹಿರಿಯ ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲಷ್ಟೇ ಸಂಬಳ ಹೆಚ್ಚಳವಾಗಲಿದೆ” ಎಂಬುದಾಗಿ ಸಭೆಯಲ್ಲಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಎಲ್ಲ ನೌಕರರ ಸಂಬಳ ಕಡಿತದ ಬಗ್ಗೆ ನಿಖರವಾಗಿ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಆದರೂ, ನೌಕರರಲ್ಲಿ ಸಂಬಳ ಕಡಿತದ ಭೀತಿ ಉಂಟಾಗಿದೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: Wipro layoffs | ವಿಪ್ರೋದಿಂದ 500 ಹೊಸ ಉದ್ಯೋಗಿಗಳ ವಜಾ
ಸೀನಿಯರ್ ವೈಸ್ ಪ್ರೆಸಿಡೆಂಟ್ ಶ್ರೇಣಿಯ ಉದ್ಯೋಗಿಗಳ ವಾರ್ಷಿಕ ಬೋನಸ್‌ನಲ್ಲಿ ಎಷ್ಟು ಪ್ರಮಾಣದ ಹಣ ಕಡಿತವಾಗುತ್ತದೆ ಹಾಗೂ ಎಷ್ಟು ಅವಧಿಗೆ ಕಡಿತವಾಗುತ್ತದೆ ಎಂಬುದರ ಬಗ್ಗೆಯೂ ಸುಂದರ್ ಪಿಚೈ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಜಾಗತಿಕ ವಿತ್ತೀಯ ಬಿಕ್ಕಟ್ಟು ಭೀತಿ ಸೇರಿ ಹಲವು ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಫೇಸ್‌ಬುಕ್, ಟ್ವಿಟರ್, ಅಮೆಜಾನ್, ವಿಪ್ರೋ ಸೇರಿ ಹಲವು ಸಂಸ್ಥೆಗಳು ನೌಕರರನ್ನು ಮನೆಗೆ ಕಳುಹಿಸಿವೆ.