Site icon Vistara News

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Google Layoff

Google Layoff

ನವದೆಹಲಿ: ವಿಶ್ವದ ಅತಿದೊಡ್ಡ ಟೆಕ್ ಕಂಪನಿ ಎನಿಸಿಕೊಂಡಿರುವ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಮತ್ತೆ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ (Google Layoff). ಗೂಗಲ್ ತನ್ನ ʼಕೋರ್ ತಂಡʼದಿಂದ ಸುಮಾರು 200 ಉದ್ಯೋಗಿಗಳನ್ನು ಕೈ ಬಿಟ್ಟಿದೆ. ಮಾತ್ರವಲ್ಲ ಕಂಪನಿಯು ತನ್ನ ಪುನರ್‌ ರಚನೆ ಪ್ರಕ್ರಿಯೆಯನ್ನು ಮುಂದುವರಿಸುತ್ತಿರುವುದರಿಂದ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ಕೆಲವು ಉದ್ಯೋಗಗಳನ್ನು ವಿದೇಶಕ್ಕೆ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಂಜಿನಿಯರಿಂಗ್ ತಂಡದಿಂದ ಕನಿಷ್ಠ 50 ಉದ್ಯೋಗಿಗಳನ್ನು ವಜಾಗೊಳಿಸಲಾಗಿದ್ದು, ಭಾರತ ಮತ್ತು ಮೆಕ್ಸಿಕೊದಲ್ಲಿನ ಈ ಸ್ಥಾನಗಳಿಗೆ ಬದಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಗೂಗಲ್‌ನ ʼಕೋರ್ ತಂಡʼವು ಬಳಕೆದಾರರ ಸುರಕ್ಷತೆಗೆ ಕಾರ್ಯ ನಿರ್ವಹಿಸುತ್ತದೆ. ಜತೆಗೆ ತಾಂತ್ರಿಕ ಅಡಿಪಾಯವನ್ನು ಅಭಿವೃದ್ಧಿ ಪಡಿಸುತ್ತದೆ.

ಅಧಿಕೃತರು ಹೇಳಿದ್ದೇನು?

ಗೂಗಲ್ ಡೆವಲಪರ್ ಇಕೋಸಿಸ್ಟಮ್‌ನ ಉಪಾಧ್ಯಕ್ಷ ಅಸಿಮ್ ಹುಸೇನ್ ಕಳೆದ ವಾರ ಇಮೇಲ್‌ ಮೂಲಕ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ್ದರು. ಇದು ತಮ್ಮ ತಂಡದ ಅತಿದೊಡ್ಡ ಉದ್ಯೋಗಿಗಳ ಕಡಿತ ಎಂದು ಮೂಲಗಳು ತಿಳಿಸಿವೆ. ಕೆಲಸದಿಂದ ವಜಾಗೊಳಿಸಲ್ಪಟ್ಟ ಕಾರ್ಮಿಕರು ಕಂಪನಿಯಲ್ಲಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತರು ಹೇಳಿದ್ದಾರೆ. ಬೆಂಗಳೂರು, ಮೆಕ್ಸಿಕೊ ಮತ್ತು ಡಬ್ಲಿನ್‌ ನಗರಗಳಲ್ಲಿ ಕಂಪನಿಯ ಕಾರ್ಯಾಚರಣೆ ವಿಸ್ತರಿಸಲು ನಿರ್ಧರಿಸಿದೆ.

ಹಿಂದೆಯೂ ನಡೆದಿತ್ತು ಉದ್ಯೋಗ ಕಡಿತ

ಕೆಲವು ದಿನಗಳ ಹಿಂದೆಯೂ ಗೂಗಲ್‌ ಹಲವು ಉದ್ಯೋಗಿಗಳನ್ನು ಕಡಿತಗೊಳಿಸಿತ್ತು. ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ವ್ಯವಸ್ಥೆಯ ಅಳವಡಿಕೆಗೆ ಕಂಪನಿ ಮುಂದಾಗಿದೆ. ಹೀಗಾಗಿ ಈ ವರ್ಷದ ಜನವರಿಯಲ್ಲಿ ಎಂಜಿನಿಯರಿಂಗ್‌, ಹಾರ್ಡ್‌ವೇರ್‌ ಮತ್ತು ಅಸಿಸ್ಟಂಟ್‌ ಟೀಮ್‌ ವಿಭಾಗಗಳಿಂದ ಹಲವು ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಆ ವೇಳೆ ನೂರಾರು ಹಾರ್ಡ್‌ವೇರ್‌ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು. ಪಿಕ್ಸೆಲ್ (Pixel), ನೆಸ್ಟ್ (Nest) ಮತ್ತು ಫಿಟ್‌ಬಿಟ್‌ (Fitbit)ನಂತಹ ಉತ್ಪನ್ನಗಳನ್ನು ಮೇಲ್ವಿಚಾರಣೆ ಮಾಡುವ ಗೂಗಲ್ ತನ್ನ ತಂಡಗಳ ಪುನರ್‌ ವಿಂಗಡಣೆಗೆ ಮುಂದಾಗಿದ್ದು, ಅದರ ಭಾಗವಾಗಿ ಈ ಉದ್ಯೋಗ ಕಡಿತ ನಡೆದಿತ್ತು.

“1ಪಿ ಎಆರ್ (1P AR) ಹಾರ್ಡ್‌ವೇರ್‌ ತಂಡದ ಮೇಲೆ ಪರಿಣಾಮ ಬೀರುವ ಡಿಎಸ್‌ಪಿಎ(ಡಿವೈಸಸ್‌ & ಸರ್ವಿಸಸ್‌) ಯಲ್ಲಿನ ನೂರಾರು ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ನಮ್ಮ 1ಪಿ ಎಆರ್ ಹಾರ್ಡ್‌ವೇರ್ ತಂಡದಲ್ಲಿ ಬದಲಾವಣೆಗಳನ್ನು ಕೈಗೊಳ್ಳಲಾಗುತ್ತಿದೆʼʼ ಎಂದು ಗೂಗಲ್ ವಕ್ತಾರರು ತಿಳಿಸಿದ್ದರು. “ಫಿಟ್‌ಬಿಟ್‌ ಬಳಕೆದಾರರಿಗೆ ಉತ್ತಮ ಸೇವೆ ಸಲ್ಲಿಸಲು ಕಂಪನಿ ಬದ್ಧವಾಗಿದೆ. ವೈಯಕ್ತಿಕ ಎಐನೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸತನವನ್ನು ತರಲು ಮತ್ತು ಪಿಕ್ಸೆಲ್ ವಾಚ್, ಮರುವಿನ್ಯಾಸಗೊಳಿಸಿದ ಫಿಟ್‌ಬಿಟ್‌ ಅಪ್ಲಿಕೇಶನ್, ಫಿಟ್‌ಬಿಟ್‌ ಪ್ರೀಮಿಯಂ ಸೇವೆ ಮತ್ತು ಫಿಟ್‌ಬಿಟ್‌ ಟ್ರ್ಯಾಕರ್ ಲೈನ್‌ನೊಂದಿಗೆ ಎಂದಿನೊಂದಿಗೆ ಕಾರ್ಯ ನಿರ್ವಹಿಸಲಿದೆʼʼ ಎಂದು ಕಂಪನಿ ಭರವಸೆ ನೀಡಿತ್ತು.

ಇದನ್ನೂ ಓದಿ: Tech Layoffs: 453 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಗೂಗಲ್ ಇಂಡಿಯಾ! ಇನ್ನಷ್ಟು ಜಾಬ್ ಕಡಿತ?

ಗೂಗಲ್ ಮಾತೃಸಂಸ್ಥೆಯಾಗಿರುವ ಆಲ್ಫಾಬೆಟ್ ಇಂಕ್ ಕೆಲವು ತಿಂಗಳ ಹಿಂದೆ ಒಟ್ಟು ಉದ್ಯೋಗಿಗಳ ಪೈಕಿ ಶೇ. 6 ಅಥವಾ 12000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಅದಾಗಿ ಕೆಲವೆ ತಿಂಗಳಲ್ಲಿ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ಬಂದ ವರದಿ ಪ್ರಕಾರ ಆಲ್ಫಾಬೆಟ್ ಕಂಪೆನಿಯಲ್ಲಿ ಸುಮಾರು 1,80,000 ಉದ್ಯೋಗಿಗಳಿದ್ದರು.

Exit mobile version