Site icon Vistara News

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

Gopi Hinduja

Gopi Hinduja family emerges as UK's richest for third year in a row

ಲಂಡನ್‌: ಬ್ರಿಟಿಷರು ನಮ್ಮನ್ನು ಆಳಿದರು, ಶತಮಾನಗಳವರೆಗೆ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದರು ಎಂಬ ಬೇಸರವು ಪ್ರತಿ ಭಾರತೀಯನನ್ನೂ ಕಾಡುತ್ತದೆ. ಆದರೆ, ಭಾರತ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾದರೆ, ಭಾರತವು ಆರ್ಥಿಕತೆ ಸೇರಿ ಯಾವುದೇ ವಿಷಯದಲ್ಲಿ ಹಿಂದಿಕ್ಕಿದರೆ ನಮಗೆ ಖುಷಿಯಾಗುತ್ತದೆ. ಇಂತಹ ಖುಷಿಗೆ ಮತ್ತೊಂದು ಕಾರಣ ಸಿಕ್ಕಿದೆ. ಭಾರತ ಮೂಲದ ಗೋಪಿಚಂದ್‌ ಹಿಂದುಜಾ (Gopi Hinduja) ಹಾಗೂ ಅವರ ಕುಟುಂಬವು ಬ್ರಿಟನ್‌ನ ಶ್ರೀಮಂತ (UK’s Richest) ಕುಟುಂಬ ಅಥವಾ ಉದ್ಯಮಿ ಎಂಬ ಖ್ಯಾತಿಗೆ ಭಾಜನವಾಗಿದೆ. ಅಷ್ಟೇ ಅಲ್ಲ, ಸತತ ಮೂರನೇ ವರ್ಷವೂ ಹಿಂದುಜಾ ಕುಟುಂಬವೇ ಅತ್ಯಂತ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿದೆ.

‘ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌’ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗೋಪಿಚಂದ್‌ ಹಿಂದುಜಾ ಅವರೇ ಬ್ರಿಟನ್‌ನ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯವು 37 ಶತಕೋಟಿ ಪೌಂಡ್ಸ್‌ (ಸುಮಾರು 3.9 ಲಕ್ಷ ಕೋಟಿ ರೂ.) ಇದೆ. ಬ್ರಿಟನ್‌ನವರೇ ಆದ ಸರ್‌ ಲೆನಾರ್ಡ್‌ ಬ್ಲಾವಾಟ್ನಿಕ್‌ (29 ಶತಕೋಟಿ ಪೌಂಡ್ಸ್)‌, ಡೇವಿಡ್‌, ಸೈಮನ್‌ ರುಬೇನ್‌ ಮತ್ತು ಕುಟುಂಬ (24.98 ಶತಕೋಟಿ ಪೌಂಡ್ಸ್)‌, ಸರ್‌ ಜಿಮ್‌ ರ‍್ಯಾಟ್‌ಕ್ಲಿಫ್‌ (23 ಶತಕೋಟಿ ಪೌಂಡ್ಸ್)‌ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಗೋಪಿಚಂದ್‌ ಹಿಂದುಜಾ ಅವರು ಭಾರತ ಮೂಲದವರಾಗಿದ್ದು, ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇವರ ತಂದೆಯೂ ಉದ್ಯಮಿಯಾಗಿದ್ದರು. ಹಿಂದುಜಾ ಗ್ರೂಪ್‌ಗೆ ಗೋಪಿಚಂದ್‌ ಹಿಂದುಜಾ ಅವರು ಸಹ ಚೇರ್ಮನ್‌ ಆಗಿದ್ದಾರೆ. ಇವರ ಆಸ್ತಿಯ ಮೌಲ್ಯವು ಕಳೆದ ವರ್ಷ 35 ಶತಕೋಟಿ ಪೌಂಡ್ಸ್‌ ಇತ್ತು. ಈಗ ಅದು 37 ಶತಕೋಟಿ ಪೌಂಡ್ಸ್‌ಗೆ ಏರಿಕೆಯಾಗಿದೆ. ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌ ಕಳೆದ ಹಲವು ವರ್ಷಗಳಿಂದಲೂ ಪ್ರಕಟವಾಗುತ್ತಿದೆ. ಆದರೆ, ಹಿಂದುಜಾ ಗ್ರೂಪ್, ಕಳೆದ 3 ವರ್ಷದಿಂದಲೂ ಮೊದಲ ಸ್ಥಾನದಲ್ಲಿದೆ.

“ಗೋಪಿಚಂದ್‌ ಹಿಂದುಜಾ ಹಾಗೂ ಅವರ ಕುಟುಂಬವು ಜಗತ್ತಿನಾದ್ಯಂತ 48 ದೇಶಗಳಲ್ಲಿ ಉದ್ಯಮಗಳನ್ನು ಹೊಂದಿದೆ. ಆಟೋಮೋಟಿವ್‌, ತೈಲ, ಕೆಮಿಕಲ್‌, ಬ್ಯಾಂಕಿಂಗ್‌, ಐಟಿ, ಫೈನಾನ್ಸ್‌, ಸೈಬರ್‌ ಸೆಕ್ಯುರಿಟಿ, ಆರೋಗ್ಯ, ಮೂಲ ಸೌಕರ್ಯ ಅಭಿವೃದ್ಧಿ, ಮನರಂಜನೆ, ಮಾಧ್ಯಮ, ರಿಯಲ್‌ ಎಸ್ಟೇಟ್‌ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಹಿಂದುಜಾ ಗ್ರೂಪ್‌ ಪ್ರಾಬಲ್ಯ ಸಾಧಿಸಿದೆ” ಎಂದು ದಿ ಸಂಡೇ ಟೈಮ್ಸ್‌ ಬಣ್ಣಿಸಿದೆ. ಹಿಂದುಜಾ ಕುಟುಂಬಸ್ಥರು ಮುಂಬೈನಲ್ಲಿ ಸಣ್ಣದೊಂದು ಉದ್ಯಮ ಆರಂಭಿಸಿ, ಈಗ ಬ್ರಿಟನ್‌ನ ಶ್ರೀಮಂತ ಔದ್ಯಮಿಕ ಕುಟುಂಬ ಎನಿಸಿದೆ. ಇವರ ಮನೆಯು ಬ್ರಿಟನ್‌ ಅರಸ ವಾಸಿಸುವ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ ಬಳಿಯೇ ಇದೆ.

ಇದನ್ನೂ ಓದಿ: Indian billionaires: ಭಾರತದಲ್ಲಿ 200 ಬಿಲಿಯನೇರ್‌ಗಳು! ಅತಿ ಶ್ರೀಮಂತರ ಸಂಖ್ಯೆಯಲ್ಲಿ ಭಾರತ ನಂ.3

Exit mobile version